BS Yediyurappa: ಪೊಕ್ಸೋ ಪ್ರಕರಣ! ಸುಪ್ರೀಂ ಕೋರ್ಟ್‌ನಿಂದ ಯಡಿಯೂರಪ್ಪಗೆ ಬಿಗ್ ರಿಲೀಫ್
ಬೆಂಗಳೂರು, ಡಿಸೆಂಬರ್ 02: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗಳಿಗೆ ತಡೆ ನೀಡುವ ಮೂಲಕ ಸುಪ್ರೀಂ ಕೋರ್ಟ್ ಅವರಿಗೆ ಬಿಗ್ ರಿಲೀಫ್ ನೀಡಿದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದ ಯಡಿಯೂರಪ್ಪ ಅವರಿಗೆ ಕೊಂಚ ನೆಮ್ಮದಿ ಸಿಕ್ಕಿದೆ.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಹೊತ್ತಿದ್ದ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೊಕ್ಸೋ ಕೇಸ್ ದಾಖಲಾಗಿತ್ತು. ಕೇಸು ರದ್ದುಮಾಡುವಂತೆ ಕರ್ನಾಟಕ ರಾಜ್ಯ ಹೈಕೋರ್ಟ್‌ಗೆ ಮನವಿ ಮಾಡಲಾಗಿತ್ತು. ಆದರೆ ಹೈಕೊರ್ಟ್ ರದ್ದು ಮನವಿ ನಿರಾಕರಿಸಿತ್ತು. ಖುದ್ದು ಕೋರ್ಟ್‌ಗೆ ಹಾಜರಾಗುವಂತೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ನ ದ್ವಿಸದಸ್ಯ ಪೀಠವು, ಯಡಿಯೂರಪ್ಪ ವಿರುದ್ಧದ ಪ್ರಕರಣಕ್ಕೆ ತಾತ್ಕಾಲಿಕ ತಡೆ ನೀಡಿದೆ. ಇತ್ತ ಬೆಂಗಳೂರಿನ ಕೋರ್ಟ್‌ನಲ್ಲೂ ಯಡಿಯೂರಪ್ಪ ವಿರುದ್ಧ ಪ್ರಕರಣದ ವಿಚಾರಣೆ ನಡೆದಿತ್ತು. ಈ ಕೋರ್ಟ್‌ನಲ್ಲಿ ಬಿಎಸ್‌ವೈ ಪರ ವಕೀಲರು, ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಗೆ ತಡೆ ನೀಡಿದ್ದನ್ನು ಗಮನಕ್ಕೆ ತಂದಿದ್ದಾರೆ. ಸುಪ್ರೀಂ ಆದೇಶ ಬಗ್ಗೆ ಬೆಂಗಳೂರು ಕೋರ್ಟ್ ನ್ಯಾಯಾಧೀಶರು ಆದೇಶದ ಪ್ರತಿ, ದಾಖಲೆ ಕೇಳಿದ್ದಾರೆ ಎನ್ನಲಾಗಿದೆ.
ಮಹತ್ವದ ಆದೇಶ ಬಳಿಕ ನೋಟಿಸ್ ಜಾರಿ
ಯಡಿಯೂರಪ್ಪ ಅವರ ಪೊಕ್ಸೋ ಪ್ರಕರಣ ಸಂಬಂಧ ತಾತ್ಕಾಲಿಕ ತಡೆ ನೀಡಿರುವ ಸುಪ್ರೀಂ ಕೋರ್ಟ್ ಸಿಐಡಿ ಮತ್ತು ಅಪ್ರಾಪ್ತ ಬಾಲಕಿಗೆ ನೋಟಿಸ್ ಜಾರಿ ಮಾಡಿದೆ. ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೈಸಿಂಗ್ ಜೊಯ್‌ಮಾಲ್ಯ ಅವರಿದ್ದ ದ್ವಿಸದಸ್ಯ ಪೀಠ ಈ ಮೇಲಿನಂತೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ...
2024ರಲ್ಲಿ ಜೂನ್ ತಿಂಗಳಲ್ಲಿ ಮನೆಗೆ ಕಷ್ಟ ಹೇಳಿಕೊಳ್ಳಲು ತಾಯಿ ಜೊತೆಗೆ ಬಂದಿದ್ದ ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರು ದಾಖಲಿಸಲಾಗಿತ್ತು. ಈ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಯಡಿಯೂರಪ್ಪ ಅವರ ಮೇಲೆ ಪ್ರಕರಣ ದಾಖಲಿಸಿದ್ದರು. ಬೆಂಗಳೂರು ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ಪ್ರಕರಣ ಸಂಬಂಧ ವಾದ, ವಿವಾದ ನಡೆದಿತ್ತು. ಪ್ರಕರಣ ರದ್ದು ಕೋರಿದ್ದ ಯಡಿಯೂರಪ್ಪ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದಾದ ಬಳಿಕ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications