ರಾಷ್ಟ್ರಪತಿಗಳಿಗೆ "ರಾಮಾಯಣ ದರ್ಶನಂ' ಕೊಡುಗೆ ನೀಡಿದ ಸಚಿವ ಸುನಿಲ್ ಕುಮಾರ್!
ಬೆಂಗಳೂರು, ಅ. 06: ಮೂರು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಇಂಧನ ಸಚಿವ ವಿ. ಸುನಿಲ್ ಕುಮಾರ್ ರಾಜಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿ ಎಂದು ಸಚಿವ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಭೇಟಿ ಸಂದರ್ಭದಲ್ಲಿ ಸಚಿವ ಸುನಿಲ್ ಕುಮಾರ್ ಅವರು ಕುವೆಂಪು ರಚಿತ "ಶ್ರೀ ರಾಮಾಯಣ ದರ್ಶನಂ' ಕೃತಿಯ ಇಂಗ್ಲಿಷ್ ಅನುವಾದಿತ ಪುಸ್ತಕ ಹಾಗೂ ಡಾ. ಎಸ್. ಎಲ್. ಭೈರಪ್ಪ ಅವರ "ಪರ್ವ' ಕಾದಂಬರಿಯ ಇಂಗ್ಲಿಷ್ ಅನುವಾದಿತ ಕೃತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕೊಡುಗೆಯಾಗಿ ನೀಡಿದ್ದಾರೆ.
ಮೂರು ದಿನಗಳ ರಾಜ್ಯ ಭೇಟಿಗೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬುಧವಾರ ಮಧ್ಯಾಹ್ನ ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು.
ಮೂರು ದಿನಗಳ ರಾಜ್ಯ ಪ್ರವಾಸಕ್ಕೆ ಬೆಂಗಳೂರಿಗೆ ಆಗಮಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಜಭವನದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅ. 9ರಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ತೆರಳಲಿದ್ದಾರೆ.

ಚಹಾಕೂಟದಲ್ಲಿ ಭಾಗಿಯಾದ ರಾಷ್ಟ್ರಪತಿಗಳು!
ಎಚ್‌ಎಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ರಾಜಭವನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತೆರಳಿದರು. ಬಳಿಕ ಸಂಜೆ ರಾಜಭವನದಲ್ಲಿ ಆಯೋಜಿಸಲಾಗಿದ್ದ ಚಹಾಕೂಟದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಥಮ ಮಹಿಳೆ ಸವಿತಾ ಕೋವಿಂದ್, ಅವರೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗಿಯಾಗಿದ್ದರು. ಚಹಾಕೂಟದಲ್ಲಿ ಭಾಗವಹಿಸಿದ ನ್ಯಾಯಾಧೀಶರು ಮತ್ತು ಅವರ ಕುಟುಂಬದವರೊಂದಿಗೆ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರು ಮಾತುಕತೆ ನಡೆಸಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಸೇರಿದಂತೆ ಇತರೆ ನ್ಯಾಯಾಧೀಶರುಗಳು ಅವರ ಕುಟುಂಬಸ್ಥರೊಂದಿಗೆ ಭಾಗವಹಿಸಿದ್ದರು.

ಗುರುವಾರ ಚಾಮರಾಜನಗರ ಪ್ರವಾಸ!
ಬುಧವಾರ ರಾಜಭವನದಲ್ಲಿ ವಾಸ್ತವ್ಯ ಮಾಡಿರುವ ರಾಷ್ಟ್ರಪತಿಗಳು ಗುರುವಾರ ಬೆಳಗ್ಗೆ ಬಿಳಿಗಿರಿ ರಂಗನ ಬೆಟ್ಟಕ್ಕೆ ತೆರಳಲಿದ್ದಾರೆ. ಬಿಳಿಗಿರಿ ರಂಗಪ್ಪನ ದರ್ಶನ ಪಡೆದ ಬಳಿಕ ಅಲ್ಲಿಂದ ಚಾಮರಾಜನಗರಕ್ಕೆ ಹೆಲಿಕ್ಯಾಪ್ಟರ್ ಮೂಲಕ ತೆರಳಲಿದ್ದಾರೆ. ಚಾಮರಾಜನಗರದಲ್ಲಿ, "ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ಸಿಮ್ಸ್)ಯ 450 ಹಾಸಿಗೆಗಳ ಸೌಲಭ್ಯದ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ಮೈಸೂರು ವಿಮಾನ ನಿಲ್ದಾಣದಿಂದ ಸಂಜೆ 5.20ಕ್ಕೆ ಹೊರಟು 6.10ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಮಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಶೃಂಗೇರಿ ಶ್ರೀಶಾರದಾಂಬೆ ದರ್ಶನ!
ಶುಕ್ರವಾರ ಅ. 8 ರಂದು ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್‌ನಲ್ಲಿ 10.45ಕ್ಕೆ ಹೊರಟು ಶೃಂಗೇರಿಗೆ ತೆರಳಲಿದ್ದಾರೆ. ಅಲ್ಲಿ 11.45ಕ್ಕೆ ಶೃಂಗೇರಿ ಶ್ರೀಶಾರದಾಂಬೆ ದರ್ಶನ ಪಡೆಯಲಿದ್ದಾರೆ. ಅಲ್ಲಿಂದ 3.15ಕ್ಕೆ ಹೊರಟು 4.10ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಬಳಿಕ ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಮರುದಿನ ಅಂದರೆ ಅ. 9ರಂದು ಶನಿವಾರ ಬೆಳಗ್ಗೆ 11.25ಕ್ಕೆ ಮಂಗಳೂರಿನಿಂದ ಹೊಸ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಲಿದ್ದಾರೆ.

ಕುತೂಹಲ ಮೂಡಿಸಿದ ಸಿಎಂ ಚಾಮರಾಜನಗರ ಭೇಟಿ!
ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ರಾಜಕಾರಣಿಗಳಲ್ಲಿದೆ. ಹೀಗಾಗಿ ಸಿಎಂ ಆದವರು ಚಾಮರಾಜನಗರಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಾರೆ. ಆದರೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಆ ಮೌಢ್ಯಕ್ಕೆ ತಿಲಾಂಜಲಿ ಇಡಲು ಪ್ರಯತ್ನಿಸಿದ್ದರು. ಸತತವಾಗಿ ನಗರಕ್ಕೆ ಭೇಟಿ ನೀಡುತ್ತಿದ್ದರು. ಆದರೂ ಐದು ವರ್ಷ ಮುಖ್ಯಮಂತ್ರಿಯಾಗಿದ್ದರು. ಆದರೆ ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ಚಾಮರಾಜನಗರದತ್ತ ತಲೆ ಹಾಕಲಿಲ್ಲ. ಈಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ಅವರಂತೆ ಧೈರ್ಯ ತೋರುತ್ತಿರುವುದು ಕುತೂಹಲ ಮೂಡಿಸಿದೆ.












Click it and Unblock the Notifications