Sumalatha: ಸುಮಲತಾ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್
ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಕಾತರರಾಗಿದ್ದ ಸುಮಲತಾ ಅಂಬರೀಶ್ ಕೊನೆಯ ಕ್ಷಣದಲ್ಲಿ ಟಿಕೆಟ್ ಪಡೆಯುವಲ್ಲಿ ವಿಫಲವಾದರು. ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಂಡ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ.
ಮಂಡ್ಯದಿಂದ ಟಿಕೆಟ್ ಕೈತಪ್ಪಿದ ಬಳಿಕ ಸುಮಲತಾ ಅವರ ಮುಂದಿನ ನಡೆ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ಅಭಿಮಾನಿಗಳು, ಬೆಂಬಲಿಗರ ಜೊತೆ ಸಾಕಷ್ಟು ಚರ್ಚೆ ನಡೆಸಿದ ಬಳಿಕ, ಸುಮಲತಾ ಮಂಡ್ಯದಲ್ಲಿ ಸಭೆ ನಡೆಸಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದರು.

ಇದರೊಂದಿಗೆ ಮಂಡ್ಯದಲ್ಲಿ ಜೆಡಿಎಸ್ ಹಾದಿ ಸುಗಮವಾಗಿದೆ. ಸುಮಲತಾ ಅವರು ಜೆಡಿಎಸ್ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಸುಮಲತಾ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲು ಮುಹೂರ್ತ ನಿಗದಿಯಾಗಿದೆ.
ಮಂಡ್ಯದ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿಸಿಕೊಂಡು ಹಾಗೂ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುವ ಆಶಯದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದೆ.
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) April 4, 2024
ಅದರಂತೆಯೇ, ಬಿಜೆಪಿ ನಾಯಕರ ಸಮ್ಮುಖದಲ್ಲಿ 5 ಏಪ್ರಿಲ್ 2024ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ… pic.twitter.com/2dzkCKu0oM
ಏಪ್ರಿಲ್ 5 ರಂದು ಬಿಜೆಪಿಗೆ ಸೇರ್ಪಡೆ
ಏಪ್ರಿಲ್ 5ರಂದು ಸುಮಲತಾ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸುಮಲತಾ ಅವರು, ಬಿಜೆಪಿಗೆ ಸೇರುವ ದಿನಾಂಕವನ್ನು ಹಂಚಿಕೊಂಡಿದ್ದಾರೆ.
ಸುಮಲತಾ ಅವರು ಎಕ್ಸ್ ಪೋಸ್ಟ್‌ನಲ್ಲಿ, "ಮಂಡ್ಯದ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿಸಿಕೊಂಡು ಹಾಗೂ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುವ ಆಶಯದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದೆ.
ಅದರಂತೆಯೇ, ಬಿಜೆಪಿ ನಾಯಕರ ಸಮ್ಮುಖದಲ್ಲಿ 5 ಏಪ್ರಿಲ್ 2024ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವೆ.
ನಮ್ಮ ಕರುನಾಡಿನ ಸಕ್ಕರೆಯ ನಾಡು ಮಂಡ್ಯದ ನನ್ನ ಸ್ವಾಭಿಮಾನಿ ಬಂಧುಗಳ, ಡಾ.ಅಂಬರೀಶ್ ಅವರ ಅಭಿಮಾನಿಗಳ ಹಾಗೂ ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದ ಎಂದಿನಂತೆ ಇರಲಿ ಎಂದು ನನ್ನ ಸವಿನಯ ಕೋರಿಕೆ ಎಂದು ಮನವಿ ಮಾಡಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಪರ ಪ್ರಚಾರ?
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅವರಿಗೆ ಎದುರಾಳಿಯಾಗಿದ್ದು ಜೆಡಿಎಸ್, ನಿಖಿಲ್ ಕುಮಾರಸ್ವಾಮಿ ಸುಮಲತಾ ಅವರ ವಿರುದ್ಧ ಸ್ಪರ್ಧೆ ಮಾಡಿದ್ದರೂ ಸೋಲನುಭವಿಸಿದ್ದರು.
ಈ ಬಾರಿ ಮಂಡ್ಯ ಕ್ಷೇತ್ರದಿಂದ ಹೆಚ್‌ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದು, ಸುಮಲತಾ ಅವರ ಬೆಂಬಲ ಕೋರಿದ್ದಾರೆ. ಸುಮಲತಾ ಅವರು ಎಚ್‌ಡಿಕೆ ಪರವಾಗಿ ಬಹಿರಂಗ ಪ್ರಚಾರ ಮಾಡುತ್ತಾರ ಎನ್ನುವ ಕುತೂಹಲ ಹೆಚ್ಚಾಗಿದೆ.












Click it and Unblock the Notifications