ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ SSP ID ಕಡ್ಡಾಯ: ಸರ್ಕಾರದ ಸೌಲಭ್ಯ, ಸ್ಕಾಲರ್‌ಶಿಪ್‌ಗೆ ಹೊಸ ನಿಯಮ, ಐಡಿ ಪಡೆಯುವುದು ಹೇಗೆ?
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ಸೂಚನೆಯೊಂದನ್ನ ನೀಡಿದೆ. ಇನ್ನು ಮುಂದೆ ಸರ್ಕಾರದಿಂದ ಸಿಗುವ ಯಾವುದೇ ಶೈಕ್ಷಣಿಕ ಸೌಲಭ್ಯಗಳು ಹಾಗೂ ಪ್ರೋತ್ಸಾಹ ಧನವನ್ನ ಪಡೆಯಲು ವಿದ್ಯಾರ್ಥಿಗಳು ಕಡ್ಡಾಯವಾಗಿ ಎಸ್‌ಎಸ್‌ಪಿ ಐಡಿ ಅಂದರೆ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ ಗುರುತಿನ ಸಂಖ್ಯೆ ಹೊಂದಿರಬೇಕು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರ ಕಚೇರಿ ಆದೇಶ ಹೊರಡಿಸಿದೆ.
ಎಸ್‌ಎಸ್‌ಪಿ ಐಡಿ ಕಡ್ಡಾಯವೇಕೆ?
ಪೂರ್ವ ಪ್ರಾಥಮಿಕ ಹಂತದಿಂದ ಹಿಡಿದು ಪದವಿ ಪೂರ್ವ ತರಗತಿಗಳವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನೇಕ ಯೋಜನೆಗಳಡಿ ಸೌಲಭ್ಯಗಳು ದೊರೆಯುತ್ತಿವೆ. ವಿದ್ಯಾರ್ಥಿ ವೇತನ, ಸೈಕಲ್, ಸಮವಸ್ತ್ರ, ಶೂ-ಸಾಕ್ಸ್ ವಿತರಣೆ ಸೇರಿದಂತೆ ವಿವಿಧ ಪ್ರೋತ್ಸಾಹ ಧನಗಳನ್ನ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ನೇರ ನಗದು ವರ್ಗಾವಣೆ ಮಾಡುವ ಮೂಲಕ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲು ಎಸ್‌ಎಸ್‌ಪಿ ಐಡಿ ಕಡ್ಡಾಯಗೊಳಿಸಲಾಗಿದೆ.

ಇದಲ್ಲದೆ, ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಕೇಂದ್ರ ಪುರಸ್ಕೃತ ಪಿಎಂಶ್ರೀನಂತಹ ಯೋಜನೆಗಳಲ್ಲಿ ವಿದ್ಯಾರ್ಥಿಗಳು ನೇರ ಫಲಾನುಭವಿಗಳಾಗಿರುವುದರಿಂದ ಪ್ರತಿಯೊಬ್ಬರಿಗೂ ಈ ಐಡಿ ಅತ್ಯಗತ್ಯವಾಗಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕ ಸ್ಪಷ್ಟಪಡಿಸಿದೆ.
ಹೊಸದಾಗಿ ಎಸ್‌ಎಸ್‌ಪಿ ಐಡಿ ಪಡೆಯುವುದು ಹೇಗೆ?
ಈಗಾಗಲೇ ಶಾಲೆಗೆ ಸೇರಿರುವ ಬಹುತೇಕ ವಿದ್ಯಾರ್ಥಿಗಳ ಎಸ್‌ಎಸ್‌ಪಿ ಐಡಿ ಮಾಹಿತಿಯು ಆಯಾ ಶಾಲೆಯ ಮುಖ್ಯ ಶಿಕ್ಷಕರ ಲಾಗಿನ್‌ನಲ್ಲಿ ಲಭ್ಯವಿದೆ. ಇದರ ಆಧಾರದ ಮೇಲೆ ಪ್ರತಿಯೊಬ್ಬ ವಿದ್ಯಾರ್ಥಿಯ ಮಾಹಿತಿಯನ್ನ ಪರಿಶೀಲಿಸುವಂತೆ ಸೂಚಿಸಲಾಗಿದೆ.
ಒಂದೊಮ್ಮೆ ಐಡಿ ಹೊಂದಿರದ ವಿದ್ಯಾರ್ಥಿಗಳು ಅಥವಾ ಹೊಸದಾಗಿ ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಹೊಸ ಎಸ್‌ಎಸ್‌ಪಿ ಐಡಿ ಸೃಷ್ಟಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲೆಗಳ ಡಿಡಿಪಿಐ ಆಡಳಿತ ವಿಭಾಗಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಆನ್‌ಲೈನ್ ಮೂಲಕ ಎಸ್‌ಎಸ್‌ಪಿ ಖಾತೆ ಸೃಷ್ಟಿಸುವ ವಿಧಾನ
ಹೊಸದಾಗಿ ಎಸ್‌ಎಸ್‌ಪಿ ಐಡಿ ಪಡೆಯಲು ಬಯಸುವ ವಿದ್ಯಾರ್ಥಿಗಳು ಅಥವಾ ಪೋಷಕರು ಅಧಿಕೃತ ಎಸ್‌ಎಸ್‌ಪಿ ವೆಬ್‌ಸೈಟ್ ssp.postmatric.karnataka.gov.in ಅಥವಾ ssp.karnataka.gov.inಗೆ ಭೇಟಿ ನೀಡಬೇಕು.
ಅಲ್ಲಿ 'ಖಾತೆ ಸೃಜಿಸಿ' ಅಥವಾ Create Account ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈ ವೇಳೆ ವಿದ್ಯಾರ್ಥಿಯ ಆಧಾರ್ ಸಂಖ್ಯೆ ಮತ್ತು ಆಧಾರ್‌ನಲ್ಲಿರುವಂತೆ ಹೆಸರನ್ನು ನಮೂದಿಸಬೇಕು. ನಂತರ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿಯನ್ನ ಒದಗಿಸಿ, ಮೊಬೈಲ್‌ಗೆ ಬರುವ ಓಟಿಪಿ ಮೂಲಕ ದೃಢೀಕರಿಸಬೇಕು.
ಜಾತಿ ಮತ್ತು ಆದಾಯ ಪ್ರಮಾಣಪತ್ರದ ಸಂಖ್ಯೆ ಹಾಗೂ ರೇಷನ್ ಕಾರ್ಡ್ ವಿವರಗಳನ್ನ ಭರ್ತಿ ಮಾಡಿದ ಬಳಿಕ, ಪಾಸ್‌ವರ್ಡ್ ಸೆಟ್ ಮಾಡಬೇಕು.
ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ವಿದ್ಯಾರ್ಥಿಯ ಮೊಬೈಲ್ ಸಂಖ್ಯೆಗೆ ಅಧಿಕೃತ ಎಸ್‌ಎಸ್‌ಪಿ ಐಡಿಯನ್ನ ಕಳುಹಿಸಲಾಗುತ್ತದೆ. ಮುಂದಿನ ಎಲ್ಲಾ ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆಗೆ ಈ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗುವುದು ಕಡ್ಡಾಯವಾಗಿದೆ.


Click it and Unblock the Notifications
