SSLC ಪರೀಕ್ಷೆ 2026: ಪರೀಕ್ಷಾ ಹಾಲ್‌ಗೆ ಹೋಗುವ ಮುನ್ನ ನಿಮ್ಮ ಕೈಯಲ್ಲಿ ಈ ವಸ್ತುಗಳಿವೆಯಾ? ಒಮ್ಮೆ ಚೆಕ್ ಮಾಡಿಕೊಳ್ಳಿ
ಕರ್ನಾಟಕ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಾಳೆಯಿಂದ (ಮಾರ್ಚ್ 18) ಅಧಿಕೃತವಾಗಿ ಆರಂಭವಾಗುತ್ತಿವೆ. ವಿದ್ಯಾರ್ಥಿಗಳು ವರ್ಷಪೂರ್ತಿ ಓದಿ ಪರೀಕ್ಷೆಗೆ ಮಾನಸಿಕವಾಗಿ ಸಿದ್ಧರಾಗಿರುತ್ತಾರೆ. ಆದರೆ, ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಮಾಡಿಕೊಳ್ಳಬೇಕಾದ ಭೌತಿಕ ಸಿದ್ಧತೆಗಳು ಕೂಡ ಅಷ್ಟೇ ಮುಖ್ಯವಾಗುತ್ತವೆ. ಕೊನೆಯ ಕ್ಷಣದಲ್ಲಿ ಪೆನ್ ಇಲ್ಲ, ಹಾಲ್ ಟಿಕೆಟ್ ಮರೆತುಬಂದೆ ಎಂದು ಗಾಬರಿ ಬೀಳುವುದರಿಂದ, ನೀವು ಓದಿದ್ದೆಲ್ಲವೂ ಮರೆತುಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ನಿಮ್ಮ ಬ್ಯಾಗ್‌ನಲ್ಲಿ ಏನೆಲ್ಲಾ ಇರಬೇಕು ಮತ್ತು ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
1. ಹೊಸ ಪೆನ್ ಬೇಡ, ರೂಢಿಯಿರುವ ಪೆನ್ ಬಳಸಿ
ಪರೀಕ್ಷೆಗಾಗಿ ಬಹಳಷ್ಟು ವಿದ್ಯಾರ್ಥಿಗಳು ಹೊಸ ವಿನ್ಯಾಸದ, ದುಬಾರಿ ಬೆಲೆಯ ಪೆನ್‌ಗಳನ್ನು ಖರೀದಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದರೆ, ಪರೀಕ್ಷಾ ದೃಷ್ಟಿಯಿಂದ ಇದು ಸರಿಯಾದ ಕ್ರಮವಲ್ಲ. ನೀವು ದಿನನಿತ್ಯ ಬರೆಯಲು ಯಾವ ಪೆನ್ ಬಳಸುತ್ತಿದ್ದೀರೋ, ಅದೇ ಪೆನ್ ಅನ್ನು ಪರೀಕ್ಷೆಗೂ ಬಳಸಿ. ಹೊಸ ಪೆನ್‌ನಿಂದ ಬರೆಯುವಾಗ ಕೈಗೆ ಸರಿಯಾದ ಗ್ರಿಪ್ ಸಿಗುವುದಿಲ್ಲ ಮತ್ತು ಬರವಣಿಗೆಯ ವೇಗ ಕಡಿಮೆಯಾಗಬಹುದು. ಒಂದು ವೇಳೆ ಹೊಸ ಪೆನ್ ತಂದಿದ್ದರೂ, ಮನೆಯಲ್ಲಿ ಆ ಪೆನ್‌ನಿಂದ ಒಂದೆರಡು ಪುಟ ಬರೆದು, ಅದು ಸರಾಗವಾಗಿ ಬರೆಯಲು ಬರುವಂತೆ ಮಾಡಿಕೊಂಡು ನಂತರ ಎಕ್ಸಾಮ್‌ಗೆ ತೆಗೆದುಕೊಂಡು ಹೋಗಿ.

2. ಕನಿಷ್ಠ ಮೂರು ಪೆನ್‌ಗಳು ಜೊತೆಗಿರಲಿ
ಪರೀಕ್ಷೆ ಬರೆಯುವಾಗ ಮಧ್ಯದಲ್ಲಿ ಪೆನ್‌ನ ಶಾಯಿ ಖಾಲಿಯಾದರೆ ಅಥವಾ ಪೆನ್ ಕೆಟ್ಟು ಹೋದರೆ ಪಕ್ಕದವರನ್ನು ಕೇಳುವಂತಿಲ್ಲ. ಹಾಗಾಗಿ, ಒಂದೇ ಬಣ್ಣದ (ನೀಲಿ ಅಥವಾ ಕಪ್ಪು) ಮತ್ತು ಒಂದೇ ಬ್ರ್ಯಾಂಡ್‌ನ ಕನಿಷ್ಠ 2 ರಿಂದ 3 ಪೆನ್‌ಗಳನ್ನು ತಪ್ಪದೇ ಜೊತೆಯಲ್ಲಿಟ್ಟುಕೊಳ್ಳಿ. ಇದು ಕೊನೆಯ ಕ್ಷಣದ ಆತಂಕವನ್ನು ನಿವಾರಿಸುತ್ತದೆ.
3. ಸರಿಯಾದ ಎಕ್ಸಾಂ ಪ್ಯಾಡ್ ಬಳಸಿ
ಪರೀಕ್ಷಾ ಕೊಠಡಿಯಲ್ಲಿರುವ ಡೆಸ್ಕ್‌ಗಳು ಒರಟಾಗಿದ್ದರೆ ಅಥವಾ ಗುಂಡಿ ಬಿದ್ದಿದ್ದರೆ ಬರೆಯಲು ಕಷ್ಟವಾಗುತ್ತದೆ. ಹಾಗಾಗಿ, ಕಡ್ಡಾಯವಾಗಿ ಎಕ್ಸಾಂ ಪ್ಯಾಡ್ ತೆಗೆದುಕೊಂಡು ಹೋಗಿ. ಆದರೆ ನೆನಪಿರಲಿ, ಪ್ಯಾಡ್ ಮೇಲೆ ಯಾವುದೇ ರೀತಿಯ ಬರಹಗಳು, ಗೀಚುವಿಕೆಗಳು ಅಥವಾ ಚಿತ್ರಗಳು ಇರಬಾರದು. ಪಾರದರ್ಶಕವಾದ ಅಥವಾ ಸಂಪೂರ್ಣವಾಗಿ ಖಾಲಿ ಇರುವ ಎಕ್ಸಾಂ ಪ್ಯಾಡ್‌ಗಳನ್ನು ಮಾತ್ರ ಪರೀಕ್ಷಾ ಕೇಂದ್ರದೊಳಗೆ ಅನುಮತಿಸಲಾಗುತ್ತದೆ.
4. ಜಾಮಿಟ್ರಿ ಬಾಕ್ಸ್ ಮತ್ತು ಇತರ ಪರಿಕರಗಳು
ಗಣಿತ, ವಿಜ್ಞಾನದಂತಹ ವಿಷಯಗಳಿರಲಿ ಅಥವಾ ಬೇರೆ ಯಾವುದೇ ಪರೀಕ್ಷೆಯಿರಲಿ, ನಿಮ್ಮದೇ ಆದ ಒಂದು ಜಾಮಿಟ್ರಿ ಬಾಕ್ಸ್ ಜೊತೆಗಿರಲಿ. ಅದರಲ್ಲಿ ಪೆನ್ಸಿಲ್, ಶಾರ್ಪ್ನರ್, ಅಳಿಸುವ ರಬ್ಬರ್, ಸ್ಕೇಲ್ ಮತ್ತು ರೇಖಾಗಣಿತದ ಪರಿಕರಗಳು ಸರಿಯಾಗಿವೆಯೇ ಎಂದು ಹಿಂದಿನ ದಿನ ರಾತ್ರಿಯೇ ಪರೀಕ್ಷಿಸಿಕೊಳ್ಳಿ. ಪರೀಕ್ಷಾ ಕೊಠಡಿಯಲ್ಲಿ ಈ ವಸ್ತುಗಳಿಗಾಗಿ ಬೇರೆ ವಿದ್ಯಾರ್ಥಿಗಳ ಬಳಿ ಕೇಳುವುದು ನಿಯಮಗಳ ಉಲ್ಲಂಘನೆಯಾಗುತ್ತದೆ.
5. ಕಾಪಿ ಚೀಟಿಯ ರಿಸ್ಕ್ ಖಂಡಿತಾ ಬೇಡ
ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು ಎಂಬ ಒತ್ತಡದಿಂದಲೋ ಅಥವಾ ಸ್ನೇಹಿತರ ಕುಮ್ಮಕ್ಕಿನಿಂದಲೋ ಕಾಪಿ ಚೀಟಿ ತೆಗೆದುಕೊಂಡು ಹೋಗುವ ಸಾಹಸಕ್ಕೆ ಕೈಹಾಕಬೇಡಿ. ಸಿಕ್ಕಿಬಿದ್ದರೆ ಕನಿಷ್ಠ ಮೂರು ವರ್ಷಗಳ ಕಾಲ ಪರೀಕ್ಷೆ ಬರೆಯದಂತೆ ಡಿಬಾರ್ ಮಾಡುವ ಕಠಿಣ ನಿಯಮಗಳಿವೆ. ಪ್ರಾಮಾಣಿಕವಾಗಿ ನಿಮಗೆ ಎಷ್ಟು ಗೊತ್ತಿದೆಯೋ ಅಷ್ಟನ್ನೇ ಬರೆಯಿರಿ. ಕಡಿಮೆ ಅಂಕ ಬಂದರೂ ಪರವಾಗಿಲ್ಲ, ಆದರೆ ಭವಿಷ್ಯವನ್ನೇ ಹಾಳುಮಾಡುವ ಇಂತಹ ಅಡ್ಡದಾರಿಗಳು ಬೇಡ. ಅದೇ ರೀತಿ, ಸ್ಮಾರ್ಟ್ ವಾಚ್, ಮೊಬೈಲ್ ಫೋನ್ ಮತ್ತು ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ.
6. ಹಾಲ್ ಟಿಕೆಟ್ ಮತ್ತು ಸಮಯ ಪಾಲನೆ
ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ನಿಮ್ಮ 'ಹಾಲ್ ಟಿಕೆಟ್' (ಪ್ರವೇಶ ಪತ್ರ) ಹಾಗೂ ಶಾಲೆಯ ಗುರುತಿನ ಚೀಟಿ ಕಡ್ಡಾಯ. ಇವುಗಳನ್ನು ಮಳೆಯಿಂದ ಅಥವಾ ನೀರಿನಿಂದ ರಕ್ಷಿಸಲು ಒಂದು ಪಾರದರ್ಶಕ ಪೌಚ್‌ನಲ್ಲಿ ಇಟ್ಟುಕೊಳ್ಳಿ. ಕುಡಿಯಲು ಪಾರದರ್ಶಕ ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗಬಹುದು. ಪರೀಕ್ಷೆ ಬೆಳಿಗ್ಗೆ 10 ಗಂಟೆಗೆ ಶುರುವಾಗಲಿದ್ದು, 9:30ರ ಒಳಗೆ ಪರೀಕ್ಷಾ ಕೇಂದ್ರದಲ್ಲಿರುವಂತೆ ಸಮಯ ಪಾಲನೆ ಮಾಡಿ.
ಎಲ್ಲಾ ಸಿದ್ಧತೆಗಳನ್ನು ಹಿಂದಿನ ದಿನ ರಾತ್ರಿಯೇ ಮಾಡಿಕೊಂಡು, ಬೆಳಿಗ್ಗೆ ಹೊಸ ಹುಮ್ಮಸ್ಸಿನಿಂದ ಪರೀಕ್ಷಾ ಕೇಂದ್ರದತ್ತ ಹೆಜ್ಜೆ ಹಾಕಿ. ಆಲ್ ದಿ ಬೆಸ್ಟ್












Click it and Unblock the Notifications