SSS Hubballi: ಇಲ್ಲಿಂದ ಕಾರೈಕುಡಿಗೆ ವಿಶೇಷ ರೈಲು, ರಾಮೇಶ್ವರಂ ರೈಲು ಸೇವೆ ವಿಸ್ತರಣೆ: ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 14: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಾಲು ಸಾಲು ರಜೆಗಳು ಎದರಾಗಿವೆ. ವಾರಾಂತ್ಯ ಬೇರೆ ಇದೆ. ಈ ವೇಳೆ ತಮ್ಮ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾಗಿ ಹುಬ್ಬಳ್ಳಿ- ಕಾರೈಕುಡಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ನೀಡಲಾಗುವುದು. ಜೊತೆಗೆ ಹುಬ್ಬಳ್ಳಿಯಿಂದ ರಾಮೇಶ್ವರಂ ರೈಲು ರಾಮಾನಾಥಪುರಂವರೆಗೆ ಸೇವೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಸ್‌ಎಸ್‌ಎಸ್ ಹುಬ್ಬಳ್ಳಿ- ಕಾರೈಕುಡಿ ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು (07331) ಹುಬ್ಬಳ್ಳಿಯಿಂದ ಇಂದು ಆಗಸ್ಟ್ 14 ರಂದು ಗುರುವಾರ ಸಂಜೆ 4:00 ಗಂಟೆಗೆ ಹೊರಡುತ್ತದೆ. ನಾಳೆ ಶುಕ್ರವಾರ ಬೆಳಗ್ಗೆ ಬೆಳಗ್ಗೆ 11:00 ಗಂಟೆಗೆ ಕಾರೈಕುಡಿ ತಲುಪಲಿದೆ.

ಮರಳಿ ಕಾರೈಕುಡಿ ಜಂಕ್ಷನ್ - ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07332) ಕಾರೈಕುಡಿಯಿಂದ ಆಗಸ್ಟ್ 15ರಂದು ಶುಕ್ರವಾರ ಸಂಜೆ 6:45 ಗಂಟೆಗೆ ಅಲ್ಲಿಂದ ಪ್ರಯಾಣ ಆರಂಭಿಸುತ್ತದೆ. ಮರು ದಿನ ಶನಿವಾರ ಮಧ್ಯಾಹ್ನ 2:40 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿಲುಗಡೆ ನಿಲ್ದಾಣಗಳ ಮಾಹಿತಿ
ಈ ರೈಲು ಮಾರ್ಗ ಮಧ್ಯೆ ನಿಲುಗಡೆ ನೀಡುವ ನಿಲ್ದಾಣಗಳೆಂದರೆ 'ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ತಿರುಚಿರಾಪಳ್ಳಿ ಮತ್ತು ಪುದುಕ್ಕೊಟ್ಟೈನಲ್ಲಿ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ. ಈ ರೈಲು 17 ಬೋಗಿಗಳನ್ನು ಹೊಂದಿದ್ದು, ಅದರಲ್ಲಿ 1 ಎಸಿ 2-ಟೈರ್, 1 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 3 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್‌ಡಿ ಕೋಚ್‌ಗಳು ಸೇರಿವೆ.
ಹುಬ್ಬಳ್ಳಿ-ರಾಮೇಶ್ವರಂ ರೈಲು ರಾಮನಾಥಪುರಕ್ಕೆ ವಿಸ್ತರಣೆ
ದಕ್ಷಿಣ ರೈಲ್ವೆಯಲ್ಲಿನ ಕಾರ್ಯಾಚರಣೆಯ ನಿರ್ಬಂಧಗಳಿಂದಾಗಿ, ರೈಲ್ವೆ ಮಂಡಳಿಯು ರೈಲು ಸಂಖ್ಯೆ 07355/07356 ಎಸ್‌ಎಸ್‌ಎಸ್ ಹುಬ್ಬಳ್ಳಿ ರಾಮೇಶ್ವರಂ- ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ರೈಲಿನ ಸಂಚಾರ ಅವಧಿಯನ್ನು ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ರೈಲು ರಾಮೇಶ್ವರಂ ಬದಲಿಗೆ ರಾಮನಾಥಪುರಂವರೆಗೆ ಮಾತ್ರ ಚಲಿಸಲಿದೆ. ರೈಲು ಅದರ ಅಸ್ತಿತ್ವದಲ್ಲಿರುವ ಸಂಯೋಜನೆ, ಸಮಯ ಮತ್ತು ನಿಲ್ದಾಣಗಳೊಂದಿಗೆ ಚಲಿಸುವುದನ್ನು ಮುಂದುವರಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
2025 ಆಗಸ್ಟ್ 30ರವರೆಗೆ ಓಡಬೇಕಿದ್ದ ರೈಲು (07355) ಎಸ್‌ಎಸ್‌ಎಸ್ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಇದೀಗ 2025 ಸೆಪ್ಟೆಂಬರ್ 27ರವರೆಗೆ ನಾಲ್ಕು ಟ್ರಿಪ್‌ಗಳ ಸೇವೆ ನೀಡುತ್ತದೆ. ಈ ರೈಲು ರಾಮೇಶ್ವರಂ ಬದಲಿಗೆ ರಾಮನಾಥಪುರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸುತ್ತದೆ. ಇನ್ನು ಆಗಸ್ಟ್ 31 ರವರೆಗೆ ಓಡಬೇಕಿದ್ದ ರಾಮೇಶ್ವರಂ - ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (07356) ಅದೀಗ ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 28, ರವರೆಗೆ ನಾಲ್ಕು ಟ್ರಿಪ್‌ಗಳ ಸೇವೆ ನೀಡುವ ಮೂಲಕ ವಿಸ್ತರಣೆ ಮಾಡಲಾಗಿದೆ. ಈ ರೈಲು ರಾಮೇಶ್ವರಂ ಬದಲಿಗೆ ರಾಮನಾಥಪುರಂನಲ್ಲಿ ತನ್ನ ಪ್ರಯಾಣ ಕೊನೆಗೊಳಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications