ಎರಡು ತಿಂಗಳ ಬಳಿಕ ಬಿಜೆಪಿಯ 18 ಶಾಸಕರ ಅಮಾನತು ವಾಪಸ್
ಎರಡು ತಿಂಗಳ ಹಿಂದೆ ವಿಧಾನಸಭೆಯಲ್ಲಿ ಸ್ಪೀಕರ್ ಕುರ್ಚಿಗೆ ಅಗೌರವ ತೋರಿದ ಹಾಗೂ ಮಸೂದೆಯ ಪ್ರತಿಗಳನ್ನು ಹರಿದು ಎಸೆದ ಆರೋಪದ ಮೇರೆಗೆ ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯಿಂದ ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಇಂದು ಈ ಬಗ್ಗೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಬಿಜೆಪಿ ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಲು ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಿಜೆಪಿ ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಇಂದು ನಡೆದ ಸಂಧಾನ ಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್.ಅಶೋಕ್, ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಕಾನೂನು ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
18 ಬಿಜೆಪಿ ಶಾಸಕರ ಅಮಾನತು ವಾಪಸ್ ಪಡೆಯುವ ಸಂಬಂಧ ಇಂದು ಸ್ಪೀಕರ್ ಯುಟಿ ಖಾದರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಈ ತೆಗೆದುಕೊಳ್ಳಲಾಗಿದೆ. ಶಾಸಕರ ಅಮಾನತು ಆದೇಶ ಹಿಂಪಡೆಯಲಾಗಿದೆ, ಅಂದಿನ ಘಟನೆ ಬಗ್ಗೆ ಎಲ್ಲ ಶಾಸಕರು ವಿಷಾದ ವ್ಯಕ್ತಪಡಿಸಿದ್ದು, ಈ ಬಗ್ಗೆ ವಿಪಕ್ಷ ನಾಯಕರು ಕೂಡ ನನಗೆ ಮನವಿ ಸಲ್ಲಿಸಿದ್ದರು. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ಕೂಡ ನೀಡಿದ್ದಾರೆ ಎಂದಿದ್ದಾರೆ.

ಎರಡು ತಿಂಗಳ ಹಿಂದೆ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿತ್ತು. ಈಗ ಸಂತೋಷದಿಂದಲೇ ಶಾಸಕರ ಅಮಾನತು ವಾಪಸ್ ಪಡೆಯುತ್ತಿದ್ದೇನೆ. ಇದಕ್ಕೆ ಯಾವುದೇ ಷರತ್ತು ಇಲ್ಲ, ಎಲ್ಲರೂ ನಮ್ಮ ಸ್ನೇಹಿತರು. ಅವರೆಲ್ಲ ಸದನದಲ್ಲಿ ಆ ಸಮಯದಲ್ಲಿ ದುರ್ನಡತೆ ತೋರಿದ್ದಕ್ಕಷ್ಟೇ ಅವರ ಮೇಲೆ ಕ್ರಮ ತೆಗೆದುಕೊಂಡೆ. ಏಕೆಂದರೆ ಕ್ರಮ ತೆಗೆದುಕೊಳ್ಳುವುದಕ್ಕೆ ನನಗೆ ಅಧಿಕಾರವಿದೆ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ.
ಕಳೆದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಅಮಾನತುಗೊಂಡಿದ್ದ 18 ಶಾಸಕರು, ಅಮಾನತು ವಾಪಸ್ಸಾತಿಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಇಂದು ವಿಧಾನಸಭೆಯ ಅಧ್ಯಕ್ಷರಾದ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರಮುಖ ಸಚಿವರು ಹಾಗೂ ವಿಪಕ್ಷ ನಾಯಕರೊಂದಿಗೆ ನಾನು ಕೂಡ ಭಾಗವಹಿಸಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಕಳೆದ ಅಧಿವೇಶನ ಅವಧಿಯಲ್ಲಿ ಸ್ಪೀಕರ್ 18 ಮಂದಿ ಶಾಸಕರ ಅಮಾನತು ಆದೇಶವೇ ಅಸಾಂವಿಧಾನಿಕ ನಡೆಯಾಗಿದ್ದು, ಇದೀಗ ಸ್ಪೀಕರ್ ರವರು ತಮ್ಮ ಆದೇಶವನ್ನು ಹಿಂಪಡೆಯುವ ಮೂಲಕ ಶಾಸಕರಾಗಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಅವಕಾಶ ನೀಡಿದಂತಾಗಿದೆ ಎಂದಿದ್ದಾರೆ.
ವಿಪಕ್ಷದ ಶಾಸಕರಾಗಿ ಸದನದಲ್ಲಿ ಆಡಳಿತರೂಡ ಸರ್ಕಾರವನ್ನು ವಿರೋಧಿಸುವುದು ನಮ್ಮ ಕರ್ತವ್ಯ. ಸ್ಪೀಕರ್ ಏಕಪಕ್ಷೀಯವಾಗಿ 6 ತಿಂಗಳ ಕಾಲ ಶಾಸಕರನ್ನು ಅಮಾನತು ಮಾಡುವ ಮೂಲಕ ನಮ್ಮ ಸಂವಿಧಾನ ಬದ್ಧ ಹಕ್ಕುಗಳನ್ನು ನಿರ್ಬಂಧಿಸಿದ್ದು ದುರದೃಷ್ಟಕರ. ಈಗಾಗಲೇ ಬಿಜೆಪಿ ಪಕ್ಷದ ವತಿಯಿಂದ ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ರಾಜ್ಯದ ಘನವೆತ್ತ ರಾಜ್ಯಪಾಲರೂ ಸ್ಪೀಕರ್ ಅವರಿಗೆ ಅಮಾನತು ಆದೇಶ ಹಿಂಪಡೆಯುವಂತೆ ಪತ್ರ ಬರೆದಿದ್ದರು. ಸರ್ಕಾರಿ ಕಾಮಗಾರಿಯಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ಹಾಗೂ ಕಾಂಗ್ರೆಸ್ ಸಚಿವರು, ಶಾಸಕರ ಹನಿಟ್ರ್ಯಾಪ್ ವಿಚಾರದ ಬಗ್ಗೆ ಸದನದಲ್ಲಿ ವಿರೋಧಿಸುವುದು ತಪ್ಪೇ? ಎಂದು ಪ್ರಶ್ನಿಸಿದ್ದಾರೆ.
ಆ ದಿನ ನಡೆದಿದ್ದೇನು?
ಮಾರ್ಚ್ 21ರಂದು ಅಶಿಸ್ತು ಮತ್ತು ಸ್ಪೀಕರ್‌ಗೆ ಅಗೌರವ ತೋರಿದ್ದಕ್ಕಾಗಿ 18 ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಸದನದಲ್ಲಿ ವಿಪಕ್ಷ ನಾಯಕರು ಸಾರ್ವಜನಿಕ ಒಪ್ಪಂದಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ವಿರೋಧಿಸುತ್ತಿದ್ದರು. ಸಹಕಾರ ಸಚಿವ ಕೆಎನ್ ರಾಜಣ್ಣ ಅವರ ಹನಿಟ್ರ್ಯಾಪ್ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಿದ್ದರು. ವಿಧಾನಸಭೆಯೊಳಗೆ ಪ್ರತಿಭಟನೆಯ ಸಮಯದಲ್ಲಿ, ಕೆಲವು ಬಿಜೆಪಿ ಶಾಸಕರು ಸ್ಪೀಕರ್ ವೇದಿಕೆಯ ಮೇಲೆ ಹತ್ತಿ ಅವರ ಕುರ್ಚಿಯನ್ನು ಸುತ್ತುವರೆದಿದ್ದರು. ಕೆಲವರು ಸದನದ ಬಾವಿಯಿಂದ ಕಾಗದಗಳನ್ನು ಎಸೆದಿದ್ದರು. ಬಳಿಕ ಮಾರ್ಷಲ್‌ಗಳು ಮಧ್ಯಪ್ರವೇಶಿಸಿ ಶಾಸಕರನ್ನು ಬಲವಂತವಾಗಿ ಹೊರಹಾಕಿದ್ದರು. ಸಭೆಯಿಂದ ಹೊರಹೋಗಲು ನಿರಾಕರಿಸಿದ ನಂತರ ಮಾರ್ಷಲ್‌ಗಳು ಶಾಸಕರನ್ನು ವಿಧಾನಸಭೆಯಿಂದ ಹೊತ್ತೊಯ್ದಿದ್ದರು.
ಅಮಾನತು ಆಗಿದ್ದ ಶಾಸಕರು ಯಾರು?
ಬಿಜೆಪಿ ಶಾಸಕರಾದ ದೊಡ್ಡಣ್ಣ ಗೌಡ ಪಾಟೀಲ್, ಸಿಕೆ ರಾಮಮೂರ್ತಿ, ಸಿಎನ್ ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವನಾಥ್, ಬೈರತಿ ಬಸವರಾಜ್, ಎಂಆರ್ ಪಾಟೀಲ್, ಚನ್ನಬಸಪ್ಪ, ಬಿ.ಸುರೇಶ್ ಗೌಡ, ಭರತ್ ಶೆಟ್ಟಿ, ಮುನಿರತ್ನ, ಬಸವರಾಜ ಮತ್ತಿಮೋಡ್, ಧೀರಜ್ ಮುನಿರಾಜು, ಚಂದ್ರು ಲಮಾಣಿ, ಉಮನಾಥ್ ಕೋಟ್ಯಾನ್, ಶರಣು ಸಲಗಾರ್, ಶೈಲೇಂದ್ರ ಬೆಲ್ದಾಳೆ, ಯಶಪಾಲ್ ಸುವರ್ಣ, ಬಿಪಿ ಹರೀಶ್ ಅವರನ್ನು ಅಮಾನತು ಮಾಡಲಾಗಿತ್ತು.
ಇತ್ತೀಚೆಗಷ್ಟೇ ಬಿಜೆಪಿ ಶಾಸಕರ ನಿಯೋಗವು ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರನ್ನು ಭೇಟಿ ಮಾಡಿ ವಿಧಾನಸಭಾ ಸಭಾಧ್ಯಕ್ಷರು ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸಿರುವ ವಿಷಯದಲ್ಲಿ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಲಾಗಿದ್ದು, ಗೌರವಾನ್ವಿತ ರಾಜ್ಯಪಾಲರು ಮಧ್ಯಪ್ರವೇಶಿಸಿ ಜನಪ್ರತಿನಿಧಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದರು.
ಈ ಸಂಬಂಧ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ಪೀಕರ್ ಯುಟಿ ಖಾದರ್ ಅವರಿಗೆ ಪತ್ರ ಬರೆದಿದ್ದರು. ವಿಧಾನಸಭೆಯ 18 ಬಿಜೆಪಿ ಶಾಸಕರ ಅಮಾನತು ರದ್ದುಗೊಳಿಸುವ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಸಲಹೆ ನೀಡಿದ್ದರು.
ರಾಜ್ಯದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಮೂಲ ತತ್ವಗಳನ್ನು ಎತ್ತಿಹಿಡಿಯಲು ಮತ್ತು ಅಮಾನತುಗೊಂಡ ಶಾಸಕರು ಮತ್ತೆ ಜನ ಪ್ರತಿನಿಧಿಗಳಾಗಿ ತಮ್ಮ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಬೇಕೆಂದು ರಾಜ್ಯಪಾಲರು ಹೇಳಿದ್ದರು. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಅಮಾನತು ರದ್ದುಗೊಳಿಸುವಂತೆ ಕೋರಿ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದರು. ಇದೀಗ ಕೊನೆಗೂ ಶಾಸಕರ ಅಮಾನತು ರದ್ದಾಗಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications