76 ಕಿ.ಮೀ.ನೂತನ ಮಾರ್ಗದ ಕಾಮಗಾರಿ ಆರಂಭಿಸಲಿದೆ ರೈಲ್ವೆ
ಬೆಂಗಳೂರು, ಮೇ 27 : ನೈಋತ್ಯ ರೈಲ್ವೆ 2015ರ ಅತ್ಯದ ವೇಳೆಗೆ 76 ಕಿ.ಮೀ ನೂತನ ರೈಲು ಮಾರ್ಗ ಮತ್ತು ನಾಲ್ಕು ಜೋಡಿ ಮಾರ್ಗದ ಕಾಮಗಾರಿಯನ್ನು ಆರಂಭಿಸಲಿದೆ. ಅರಸೀಕೆರೆ-ತುಮಕೂರು, ಹುಬ್ಬಳ್ಳಿ-ಚಿಕ್ಕಜಾಜೂರು ನಡುವಿನ ಜೋಡಿ ಮಾರ್ಗ ಕಾಮಗಾರಿ ಇದರಲ್ಲಿ ಸೇರಿದೆ.
ಬೆಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಸಕ್ಸೇನಾ ಅವರು ಈ ಕುರಿತು ಮಾಹಿತಿ ನೀಡಿದರು. 2015-16ನೇ ಸಾಲಿನ ಬಜೆಟ್‌ನಲ್ಲಿ ನೂತನ ರೈಲು ಮಾರ್ಗ ರಚನೆಗೆ 247.70 ಕೋಟಿ ರೂ. ಮತ್ತು ಜೋಡಿ ಮಾರ್ಗ ನಿರ್ಮಾಣಕ್ಕೆ 294.80 ಕೋಟಿ ರೂ. ಒದಗಿಸಲಾಗಿದೆ ಎಂದರು. [ತುಮಕೂರು-ಅರಸೀಕೆರೆ ಜೋಡಿ ಮಾರ್ಗಕ್ಕೆ ಒಪ್ಪಿಗೆ]

ಇವುಗಳಲ್ಲಿ ಬೆಂಗಳೂರು ವಿಭಾಗಕ್ಕೆ 35 ಕೋಟಿ ಮತ್ತು ಬೆಂಗಳೂರು ಸಿಟಿ ನಿಲ್ದಾಣ ಮತ್ತು ದಂಡು ನಿಲ್ದಾಣ ಒಳಗೊಂಡಂತೆ 12 ಕೋಟಿ ರೂ. ಒದಗಿಸಲಾಗುವುದು ಎಂದು ಸಕ್ಸೇನಾ ವಿವರಣೆ ನೀಡಿದರು. ಈ ವರ್ಷದ ಅಂತ್ಯದಲ್ಲಿ 76 ಕಿ.ಮೀ ನೂತನ ರೈಲು ಮಾರ್ಗ ಮತ್ತು ನಾಲ್ಕು ಜೋಡಿ ಮಾರ್ಗದ ಕಾಮಗಾರಿಯನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. [ರೈಲ್ವೆ ಬಜೆಟ್ ಮುಖ್ಯಾಂಶಗಳು]
ಯಲಹಂಕ-ಪೆನುಕೊಂಡ, ಹುಬ್ಬಳ್ಳಿ-ಚಿಕ್ಕಜಾಜೂರು, ಅರಸೀಕೆರೆ-ತುಮಕೂರು, ಮೀರಜ್- ಲೋಂಡಾ ನಡುವೆ ಜೋಡಿ ಮಾರ್ಗ ನಿರ್ಮಿಸುವ ಕಾಮಗಾರಿ ಇದರಲ್ಲಿ ಸೇರಿದೆ. ಮುಂದಿನ ಐದು ವರ್ಷಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ವಿಶ್ರಾಂತಿ ಗೃಹದ ವ್ಯವಸ್ಥೆ : ಬೆಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಗೃಹದ ಅಗತ್ಯವಿತ್ತು. ಸದ್ಯ ಅದನ್ನು ನಿರ್ಮಾಣ ಮಾಡಲಾಗಿದೆ. ಸದ್ಯ 16 ಬೆಡ್‌ಗಳಿದ್ದು, ಪ್ರತ್ಯೇಕ ಲಾಕರ್, ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ. 12 ಗಂಟೆಗೆ 125 ರೂ. ಮತ್ತು 24 ಗಂಟೆಗೆ 200 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications