ನೈರುತ್ಯ ರೈಲ್ವೆ ಮುಂಬಡ್ತಿ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಕಡೆಗಣನೆ: ತಾರತಮ್ಯ ಖಂಡಿಸಿ ರೈಲು ತಡೆಗೆ ಕರವೇ ಎಚ್ಚರಿಕೆ

ಕೇಂದ್ರ ಸರ್ಕಾರದ ಹುದ್ದೆಗಳು ಹಾಗೂ ಇಲಾಖಾ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಮತ್ತು ಕನ್ನಡ ಭಾಷೆಗೆ ಆಗುತ್ತಿರುವ ಅನ್ಯಾಯ ಮುಂದುವರಿದೇ ಇದೆ. ನೈರುತ್ಯ ರೈಲ್ವೆ (SWR) ಇಲಾಖೆಯು ನಡೆಸುತ್ತಿರುವ ಮುಂಬಡ್ತಿ ಪರೀಕ್ಷೆಗಳಲ್ಲಿ ಈ ಬಾರಿಯೂ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದು ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದೆ.

ರೈಲ್ವೆ ಇಲಾಖೆಯ ಈ ಮಲತಾಯಿ ಧೋರಣೆಯನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ), ಕೂಡಲೇ ಈ ಸುತ್ತೋಲೆಯನ್ನು ಹಿಂಪಡೆದು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದರೆ ರಾಜ್ಯಾದ್ಯಂತ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸುವುದಾಗಿ ಕಠಿಣ ಎಚ್ಚರಿಕೆ ನೀಡಿದೆ.

South Western Railway

ಏನಿದು ವಿವಾದ?

ನೈರುತ್ಯ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ ಒಟ್ಟು 73 ವಿವಿಧ ಹುದ್ದೆಗಳಿಗೆ ಮುಂಬಡ್ತಿ ಪರೀಕ್ಷೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಆಫೀಸ್ ಸೂಪರಿಂಟೆಂಡೆಂಟ್ (39 ಹುದ್ದೆಗಳು), ಸೀನಿಯರ್ ಕ್ಲರ್ಕ್ (25 ಹುದ್ದೆಗಳು) ಹಾಗೂ ಇಂಟರ್ಮೀಡಿಯೆಟ್ ಅಪ್ರೆಂಟಿಸ್ ಮೆಕ್ಯಾನಿಕ್ಸ್ (9 ಹುದ್ದೆಗಳು) ಸೇರಿವೆ. ಈ ಹುದ್ದೆಗಳ ಮುಂಬಡ್ತಿಗಾಗಿ ನಡೆಯುವ ಲಿಖಿತ ಪರೀಕ್ಷೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿಯೇ ಬರೆಯಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ಇದು ರಾಜ್ಯದ ರೈಲ್ವೆ ನೌಕರರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಕನ್ನಡಿಗ ಸಿಬ್ಬಂದಿಗೆ ಬಡ್ತಿ ಸಿಗದಂತೆ ಮಾಡುವ ಉದ್ದೇಶಪೂರ್ವಕ ಹುನ್ನಾರ ಎಂದು ಆರೋಪಿಸಲಾಗಿದೆ.

ಕರವೇ ಆಕ್ರೋಶ ಮತ್ತು ಎಚ್ಚರಿಕೆ

ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆ ಆಗಿರುವ ನೀತಿಯ ವಿರುದ್ಧ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಕಡ್ಡಾಯವಾಗಿ ಅಳವಡಿಸಲೇಬೇಕು. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸುವುದು ನಿಯಮ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಸುತ್ತೋಲೆಯಲ್ಲಿರುವ ದೋಷವನ್ನು ತಕ್ಷಣವೇ ಸರಿಪಡಿಸಿ, ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಹೊಸ ಆದೇಶವನ್ನು ಹೊರಡಿಸಬೇಕು. ಇಲ್ಲವಾದಲ್ಲಿ, ಕರ್ನಾಟಕ ರಾಜ್ಯದಲ್ಲಿ ಒಂದೇ ಒಂದು ರೈಲು ಓಡಲು ನಾವು ಬಿಡುವುದಿಲ್ಲ," ಎಂದು ಅವರು ಹೇಳಿದ್ದಾರೆ.

ಸರ್ಕಾರದ ಮೇಲೆ ಹೆಚ್ಚಿದ ಒತ್ತಡ

ಭಾಷಾ ತಾರತಮ್ಯದ ಈ ವಿಚಾರ ಇದೀಗ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದೆ. ರಾಜ್ಯದವರೇ ಆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರ ಗಮನಕ್ಕೂ ಈ ವಿಚಾರವನ್ನು ತರಲಾಗಿದೆ. ಇದೇ ವೇಳೆ ಮೈಸೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, "ರೈಲ್ವೆ ಇಲಾಖೆ ಮತ್ತು ಅದರ ಪರೀಕ್ಷೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ, ಕೇಂದ್ರ ಸರ್ಕಾರವೇ ಈ ಭಾಷಾ ತಾರತಮ್ಯದ ಬಗ್ಗೆ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು," ಎಂದು ಆಗ್ರಹಿಸುವ ಮೂಲಕ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಹಿಂದೆಯೂ ನಡೆದಿತ್ತು ಉಗ್ರ ಹೋರಾಟ

ರೈಲ್ವೆ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡದಿರುವುದು ಇದೇ ಮೊದಲೇನಲ್ಲ. ಕಳೆದ ಬಾರಿ ಇದೇ ರೀತಿ ಪರೀಕ್ಷೆಗಳು ನಡೆದ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದರಿಂದ, ಅನಿವಾರ್ಯವಾಗಿ ಆ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಸಚಿವರು ಮತ್ತು ಅಧಿಕಾರಿಗಳು ಭರವಸೆ ನೀಡಿದರೂ, ಮತ್ತೆ ಅದೇ ಹಳೆಯ ಸಮಸ್ಯೆ ಮರುಕಳಿಸುತ್ತಿದೆ. ಇಲಾಖೆ ತನ್ನ ಧೋರಣೆಯನ್ನು ಬದಲಿಸಿಕೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟಗಳನ್ನು ಎದುರಿಸಬೇಕಾಗುತ್ತದೆ ಎಂದು ಕನ್ನಡಿಗರು ಎಚ್ಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+