ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಆಗಮನ
ಬೆಂಗಳೂರು, ಜೂನ್ 06 : ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಮಳೆ ಅಧಿಕೃತವಾಗಿ ಪಾದಾರ್ಪಣೆ ಮಾಡಲಿದೆ. ಜೂನ್ 8ರಂದು ಅಧಿಕೃತವಾಗಿ ಮುಂಗಾರು ಆರಂಭವಾಗಲಿದೆ.
ಮುಂಗಾರು ಮಳೆ ಜೂನ್ 5ರಂದೇ ಕರ್ನಾಟಕದಲ್ಲಿ ಆರಂಭವಾಗಬೇಕಿತ್ತು. ಆದರೆ, ಈಶಾನ್ಯ ಭಾರತದಲ್ಲಿ ಮೋರಾ ಚಂಡಮಾರುತ ತಂದ ಹಾವಳಿ ಮತ್ತು ಪಶ್ಚಿಮದಲ್ಲಿ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿದದಿಂದಾಗಿ ಮುಂಗಾರು ಸ್ವಲ್ಪ ಮುಂದೆ ಹೋಗಿದೆ.[ಕರ್ನಾಟಕಕ್ಕೆ ಈ ಬಾರಿ ಸಾಧಾರಣ ಮುಂಗಾರು ಮಳೆ]

ವಾಡಿಕೆಯಂತೆ ಮೇ 30ರಂದೇ ಕೇರಳಕ್ಕೆ ಮುಂಗಾರು ಆಗಮಿಸಿದೆ. ಕರ್ನಾಟಕದ ಉತ್ತರ ಭಾಗದಲ್ಲಿ ಮುಂಗಾರುಪೂರ್ವ ಮಳೆ ಸುರಿಯುತ್ತಿದ್ದು, ಹಲವಾರು ಜಿಲ್ಲೆಗಳಲ್ಲಿ ಭಾರೀ ನಷ್ಟ ಉಂಟುಮಾಡಿದೆ. ರಾಯಚೂರಿನಲ್ಲಿ ಭಾರೀ ಬಿರುಗಾಳಿ ಮಳೆಯಿಂದಾಗಿ ಕೆಲ ಮನೆಗಳ ಛಾವಣಿ ಹಾರಿಹೋಗಿದೆ.[ಮಳೆಗಾಗಿ ತಲಕಾವೇರಿಯಲ್ಲಿ ಸಚಿವ ಎಂ ಬಿ ಪಾಟೀಲ್ ವಿಶೇಷ ಪೂಜೆ]
ಬೆಂಗಳೂರಿನಲ್ಲಿ ಕೂಡ ಸೋಮವಾರ ಸಂಜೆ ಹಲವಾರು ಪ್ರದೇಶಗಳಲ್ಲಿ ಮಳೆಯಾಗಿದ್ದು, ಮಂಗಳವಾರ ಕೂಡ ಮೋಡ ಮುಸುಕಿದ ವಾತಾವರಣವಿದೆ. ಇಂದು ಸಂಜೆ ಬೆಂಗಳೂರಿನಲ್ಲಿ ಮಳೆಯಾಗುವ ಸಂಭವನೀಯತೆಯಿದೆ ಎಂದು ಸ್ಕೈಮೆಟ್ ವೆದರ್ ಎಚ್ಚರಿಕೆ ನೀಡಿದೆ.
ಇನ್ನು ಮಂಗಳೂರಿನಲ್ಲಿ ಸೋಮವಾರ ಸಂಜೆ ಕೇವಲ 2 ಗಂಟೆ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲ ಹೊಳೆಯಂತಾಗಿವೆ. ಜ್ಯೋತಿ ಸರ್ಕಲ್ ನಲ್ಲಿ ವಾಹನಗಳು ಅರ್ಧದಷ್ಟು ಮುಳುಗಿ, ಸವಾರರು ಪರದಾಡುವಂತಾಗಿದೆ.[ಮುದ್ದಾದ ನೆನಪುಗಳ ಬಿಚ್ಚಿಡುವ ಬೆಂಗಳೂರಿನ ಮಳೆ!]
ವರುಣಮಿತ್ರ : ಇನ್ನೇನು ಮುಂಗಾರು ಆರಂಭವಾಗುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ರೈತರಿಗೆ ಅನುಕೂಲವಾಗಲೆಂದು ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರ 'ವರುಣಮಿತ್ರ' ಎಂಬ ಸಹಾಯವಾಣಿಯನ್ನು ಆರಂಭಿಸಿದೆ. 92433 45433 ಸಂಖ್ಯೆಗೆ ಕರೆ ಮಾಡಿ ಹವಾಮಾನದ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ಪಡೆಯಬಹುದು. ಇದಕ್ಕಾಗಿ 5 ಸಾವಿರದಿಂದ 6 ಸಾವಿರ ಜನರು ಹವಾಮಾನದ ಬಗ್ಗೆ ಮಾಹಿತಿ ನೀಡಲಿದ್ದಾರೆ.












Click it and Unblock the Notifications