South First Final Pre-Poll Survey: ವರುಣಾ, ಕನಕಪುರ, ಚನ್ನಪಟ್ಟಣ ರಣಕಣದಲ್ಲಿ ಇವರೇ ಗೆಲ್ಲೋದು!
ರಾಜ್ಯ ರಾಜಕೀಯ ಅಖಾಡ ರಂಗೇರಿದೆ, ಸೋಮವಾರ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಮನೆ ಮನೆ ಪ್ರಚಾರ ಮಾಡಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿ ಪೈಪೋಟಿ ನಡೆಯಲಿದೆ. ಸಿದ್ದರಾಮಯ್ಯ ಸ್ಪರ್ಧೆ ಮಾಡಿರುವ ವರುಣಾ, ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಡಿಕೆ ಶಿವಕುಮಾರ್ ಸ್ಪರ್ಧೆ ಮಾಡಿರುವ ಕನಕಪುರ ಕ್ಷೇತ್ರಗಳು ಹಲವು ಕಾರಣಗಳಿಂದ ಸಾಕಷ್ಟು ಗಮನ ಸೆಳೆದಿವೆ.
ಸೌತ್ ಫಸ್ಟ್ ಮಾಡಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಯಾವ ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ವಿವರ ನೀಡಲಾಗಿದೆ. ಈ ಮೂರು ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಚರ್ಚೆ ಸಾಕಷ್ಟು ನಡೆಯುತ್ತಿದೆ.

ವರುಣಾದಲ್ಲಿ ಗೆಲುವು ಯಾರಿಗೆ?
ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ನಿಲ್ಲುವ ಮೂಲಕ ಅವರ ಗೆಲುವು ಸುಲಭ ಎನ್ನುವಂತಾಗಿತ್ತು, ಆದರೆ ಬಿಜೆಪಿ ಅವರ ವಿರುದ್ಧ ವಿ ಸೋಮಣ್ಣ ಅವರನ್ನು ನಿಲ್ಲಿಸುವ ಮೂಲಕ ಕ್ಷೇತ್ರದಲ್ಲೇ ಕಟ್ಟಿಹಾಕಲು ರಣತಂತ್ರ ರೂಪಿಸಿತು. ಸಿದ್ದರಾಮಯ್ಯ ರಾಜ್ಯದಲ್ಲೆಡೆ ಪ್ರಚಾರ ಮಾಡಿದ ಬಳಿಕ ವರುಣಾದಲ್ಲಿ ಕೂಡ ಭರ್ಜರಿ ಪ್ರಚಾರ ಮಾಡಿದ್ದಾರೆ.
ಲಿಂಗಾಯತ ಅಭ್ಯರ್ಥಿ ಆಗಿರುವ ಸೋಮಣ್ಣರನ್ನು ಗೆಲ್ಲಿಸಲು ಬಿಜೆಪಿ ನಾಯಕರು ಬಾರಿ ಕಸರತ್ತು ಮಾಡುತ್ತಿದ್ದಾರೆ. ಆದರೆ ಇಲ್ಲಿ ಸಿದ್ದರಾಮಯ್ಯ ಗೆಲುವು ಸಾಧಿಸುತ್ತಾರೆ ಎಂದು ಸಮೀಕ್ಷೆ ತಿಳಿಸುವ ಮೂಲಕ ಬಿಜೆಪಿ ಪ್ರಯತ್ನ ವಿಫಲವಾಗಲಿದೆ ಎಂದು ಹೇಳಿದೆ.
ಕನಕಪುರದಲ್ಲಿ ಬಂಡೆ ಹೊಡೆತಕ್ಕೆ ಅಶೋಕ್ ಮನೆಗೆ!
ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಅಶೋಕ ಅವರನ್ನು ಕಣಕ್ಕಿಳಿಸಿದೆ. ಪ್ರಬಲ ಒಕ್ಕಲಿಗ ನಾಯಕನ ವಿರುದ್ಧ ಮತ್ತೊಬ್ಬ ಒಕ್ಕಲಿಗ ನಾಯಕನನ್ನು ನಿಲ್ಲಿಸಿ ಮತ ವಿಭಜನೆ ಮಾಡಲು ಬಿಜೆಪಿ ರಣತಂತ್ರ ಮಾಡಿದೆ. ಆದರೆ 6 ಬಾರಿ ಸತತ ಗೆಲುವು ಕಂಡಿರುವ ಡಿಕೆ ಶಿವಕುಮಾರ್ ಈ ಬಾರಿ ಕೂಡ ಸುಲಭ ಗೆಲುವು ಸಾಧಿಸುತ್ತಾರೆ ಎಂದು ಸೌತ್ ಫಸ್ಟ್ ಚುನಾವಣ ಪೂರ್ವ ಸಮೀಕ್ಷೆ ಹೇಳಿದೆ.
ಚನ್ನಪಟ್ಟಣದಲ್ಲಿ ಹೆಚ್‌ಡಿಕೆಗೆ ಸುಲಭ ಗೆಲುವು
ಇನ್ನು ಚನ್ನಪಟ್ಟಣದಲ್ಲಿ ಬಿಜೆಪಿಯಿಂದ ಸಿಪಿ ಯೋಗೇಶ್ವರ್ ವಿರುದ್ಧ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಹೆಚ್‌ಡಿಕೆ ಪ್ರಚಾರ ಮಾಡುತ್ತಿದ್ದರೆ, ಚನ್ನಪಟ್ಟಣದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಪ್ರಚಾರ ಮಾಡಿದ್ದರು. ಸಮೀಕ್ಷೆಯ ಪ್ರಕಾರ ಈ ಬಾರಿ ಹೆಚ್‌ಡಿಕೆ ಇಲ್ಲಿ ಸುಲಭದ ಗೆಲುವು ಸಾಧಿಸುತ್ತಾರೆ ಎಂದು ಹೇಳಿದೆ.
ಸಮೀಕ್ಷೆಯ ಪ್ರಕಾರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಸೋಲುತ್ತಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಸಮೀಕ್ಷೇ ಹೇಳಿದೆ.












Click it and Unblock the Notifications