School Admission: ಅನಾಥ ಮಕ್ಕಳಿಗೆ ಈ ಶಾಲೆಗಳಲ್ಲಿ ನೇರ ಪ್ರವೇಶಾತಿ, ಉಚಿತ ಶಿಕ್ಷಣ
ತಂದೆ-ತಾಯಿ ಇಲ್ಲದೆ ತಬ್ಬಲಿ ಮಕ್ಕಳಿಗಾಗಿ ರಾಜ್ಯ ಸರ್ಕಾರವು ಮಹತ್ವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಅವರ ಭವಿಷ್ಯಕ್ಕೆ ದಾರಿದೀಪವಾಗಲು ಮುಂದಾಗಿದೆ. ತಂದೆ ತಾಯಿ ಇಲ್ಲದ ತಬ್ಬಲಿ ಮಕ್ಕಳಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಬರುವ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ನೇರ ಪ್ರವೇಶಾತಿ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ನೀಡಿರುವ ಆದೇಶದಲ್ಲಿ, ತಂದೆ ತಾಯಿ ಇಲ್ಲದೆ ಮಕ್ಕಳನ್ನು ಭಿಕ್ಷಾಟನೆಗೆ ಮತ್ತು ಇತರ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುವ ಹಿನ್ನೆಲೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಬರುವ ವಸತಿ ಶಾಲೆಗಳಿಗೆ 6ನೇ ತರಗತಿಗೆ ಈ ಮಕ್ಕಳನ್ನು ನೇರ ಪ್ರವೇಶಾತಿ ಕಲ್ಪಿಸಿ ಕೂಡಲೇ ಕ್ರಮ ವಹಿಸುವಂತೆ ನಿರ್ದೇಶಿಸಿದೆ.

ರಾಜ್ಯದಲ್ಲಿ ಪೋಷಕರಿಲ್ಲದ ಮಕ್ಕಳು ಸಾಕಷ್ಟು ಮಂದಿ ಇದ್ದಾರೆ. ಇವರನ್ನು ಕೆಲವರು ಭಿಕ್ಷಾಟನೆ ಸೇರಿದಂತೆ ಹಲವು ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಇವರಿಗೆ ವಸತಿ ಸಹಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ.
ತಂದೆ ತಾಯಿ ಇಲ್ಲದ ಅನಾಥ ಮಕ್ಕಳು ಭಿಕ್ಷಾಟನೆಯಂತಹ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಸಮಾಜ ಕಲ್ಯಾಣ ಇಲಾಖೆಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇಂತಹ ಮಕ್ಕಳನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ವಸತಿ ಶಾಲೆಗಳಿಗೆ ನೇರವಾಗಿ ಸೇರಿಸಿಕೊಳ್ಳುವಂತೆ ತೀರ್ಮಾನಿಸಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾ.ಮಣಿವಣ್ಣನ್ ಅವರು ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರದ ಮೂಲಕ ನಿರ್ದೇಶಿಸಿದ್ದಾರೆ.

ರಾಜ್ಯದಲ್ಲಿ ಅನಾಥ ಮಕ್ಕಳನ್ನು ಭಿಕ್ಷಾಟನೆ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ಹಿನ್ನೆಲೆ ಕ್ರೈಸ್ ಅಧೀನಕ್ಕೆ ಬರುವ ವಸತಿ ಶಾಲೆಗಳಲ್ಲಿ ನೇರವಾಗಿ 6ನೇ ತರಗತಿಗೆ ಈ ಮಕ್ಕಳಿಗೆ ಪ್ರವೇಶಾತಿ ಕಲ್ಪಿಸಬೇಕು. ಈ ಸಂಬಂಧ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಿ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳಿಗೆ ಸೇರುವ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇರುತ್ತದೆ. ಆದರೆ ಈ ಅನಾಥ ಮಕ್ಕಳಿಗೆ ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ. ಇವರಿಗೆ ಯಾವ ಸಮಯದಲ್ಲಾದರೂ ವಸತಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಈ ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ, ನೋಟ್ ಪುಸ್ತಕ, ಶೂ, ಸಾಕ್ಸ್, ಟೈ, ಬೆಲ್ಟ್, ಶಾಲಾ ಬ್ಯಾಗ್ ಸೇರಿದಂತೆ ಎಲ್ಲ ಪರಿಕರಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಈ ಮಕ್ಕಳಿಗೆ ಉಚಿತವಾಗಿ ಸಿಗಲಿದೆ. ಇಲಾಖೆಯ ಈ ಹೊಸ ಸೂಚನೆಯಂತೆ ಅನಾಥ ಮಕ್ಕಳು ಒಂದು ಬಾರಿ 6ನೇ ತರಗತಿಗೆ ನೇರವಾಗಿ ಪ್ರವೇಶ ಪಡೆದು 12ನೇ ತರಗತಿಯವರೆಗೆ ಉಚಿತ ಶಿಕ್ಷಣ ಪಡೆಯಲಿದ್ದಾರೆ.












Click it and Unblock the Notifications