ಬೇಸಿಗೆಯಲ್ಲಿ ಅಡುಗೆಮನೆಯಲ್ಲಿ ಹೆಚ್ಚು ಹೊತ್ತು ಕಳೆಯುವುದೇ ಕಷ್ಟ!ಕಿಚನ್ ತಂಪಾಗಿಡಲು 5 ಸುಲಭ ಸಲಹೆಗಳು
ಪ್ರತಿಯೊಂದು ಮನೆಯ ಹೃದಯಭಾಗವೇ ಅಡುಗೆಮನೆ. ಮನೆ ಮಂದಿಗೆ ಇಷ್ಟವಾದ ಊಟ ತಿಂಡಿ ತಯಾರಾಗುವುದು ಇಲ್ಲಿಂದಲೇ. ಮನೆಯವರ ಆರೋಗ್ಯ ಆರೈಕೆಯ ಮೂಲವೂ ಅಡುಗೆ ಮನೆಯೇ. ಹಾಗಾಗಿ ಇದು ಶಕ್ತಿ ಕೇಂದ್ರ ಎಂದರೂ ತಪ್ಪಲ್ಲ. ಆದರೆ ಬೇಸಿಗೆಯಲ್ಲಿ ಅಡುಗೆ ಕೋಣೆಗೆ ಕಾಲಿಡುವುದೇ ಹರ ಸಾಹಸ. ಯಾಕೆಂದರೆ ಹೊರಗಡೆ ಸೂರ್ಯನ ತಾಪಕ್ಕೆ ಬಿಸಿಯಾಗಿದ್ದರೆ, ಒಳಗೆ ಸೂರ್ಯನ ಶಾಖ ಮತ್ತು ಬೆಂಕಿ ಎರಡರ ಬಿಸಿಯನ್ನೂ ತಡೆದುಕೊಂಡು ನಿಂತು ಅಡುಗೆ ಮಾಡುವುದು ಅಷ್ಟು ಸುಲಭವಲ್ಲ. ಹೆಚ್ಚುತ್ತಿರುವ ಬಿಸಿ ಮತ್ತು ಬೆವರಿನಿಂದಾಗಿ ಅಡುಗೆ ಮುಗಿಸಿ ಹೊರ ಬರುವುದು ಎಂದರೆ ಯುದ್ಧ ಜಯಿಸಿ ಬಂದಂತ ಅನುಭವ ಮಹಿಳೆಯರಿಗೆ. ಯಾಕೆಂದರೆ ಹೊರಗಿನ ಬಿಸಿ, ಗ್ಯಾಸ್ ಜ್ವಾಲೆ, ವಾಸನೆ ಎಲ್ಲವೂ ಒಟ್ಟಿಗೆ ಸೇರಿ ಆಜಾಗದಲ್ಲಿ ನಿಲ್ಲುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ.
ಆದರೆ ಬೇಸಿಗೆಯಲ್ಲಿಯೂ ಅಡುಗೆ ಮನೆಯ ವಾತಾವರಣವನ್ನು ಬದಲಾಯಿಸುವ ಹಲವು ಮಾರ್ಗಗಳಿವೆ. ಹೊರಗಿನ ತಾಪಮಾನವನ್ನು ನಿಯಂತ್ರಿಸುವುದು ನಮಗೆ ಸಾಧ್ಯವಾಗುವುದಿಲ್ಲ. ಅಡುಗೆ ಕೋಣೆಯ ತಾಪಮಾನವನ್ನು ಕಡಿಮೆ ಮಾಡಿ ತಂಪಾಗಿರಿಸಲು ಕೆಲವು ಕ್ರಮಗಳನ್ನು ಅನುಸರಿಸಬಹುದು.

ಬೇಸಿಗೆಯಲ್ಲಿ ಅಡುಗೆ ಮನೆಯನ್ನು ತಂಪಾಗಿಡಲು ಕೈಗೊಳ್ಳಬಹುದಾದ ಕ್ರಮ
1. ಅಡುಗೆ ಸಮಯವನ್ನು ಬದಲಾಯಿಸಿ : ದಿನಕ್ಕೆ ಎರಡು ಅಥವಾ ಮೂರು ಬಾರಿ ಅಡುಗೆ ಮಾಡುತ್ತಿದ್ದರೆ, ಬೇಸಿಗೆಯಲ್ಲಿ ಈ ಮಾದರಿಯನ್ನು ಬದಲಾಯಿಸಬೇಕು. ಬೆಳಿಗ್ಗೆ ಒಮ್ಮೆಲೇ ಮೂರೂ ಹೊತ್ತಿನ ಅಡುಗೆಯನ್ನು ಮುಗಿಸಿ. ತಾಪಮಾನ ಹೆಚ್ಚಾಗುವ ಮೊದಲು ಅಡುಗೆಮನೆಯಿಂದ ಹೊರಬರಲು ಪ್ರಯತ್ನಿಸಿ.
2. ತ್ವರಿತ ಪಾಕವಿಧಾನಗಳನ್ನೇ ಆಯ್ಕೆ ಮಾಡಿಕೊಳ್ಳಿ : ಸ್ವಲ್ಪ ಸಂಶೋಧನೆ ಮಾಡಿ, ಕಡಿಮೆ ಸಮಯದಲ್ಲಿ ಬೇಯಿಸಬಹುದಾದ ಭಕ್ಷ್ಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸರಳವಾದ ಮತ್ತು ಕಡಿಮೆ ತಂತ್ರಗಳನ್ನು ಒಳಗೊಂಡಿರುವ ಪಾಕವಿಧಾನಗಳನ್ನು ಅನುಸರಿಸಿ. ನಿಮ್ಮ ಅಡಿಗೆಯ ಸಮಯ ಒಂದು ಗಂಟೆ ಅವಧಿಯನ್ನು ಮೀರದಂತೆ ನೋಡಿಕೊಳ್ಳಿ.
3. ಸರಳ ಭಕ್ಷ್ಯಗಳನ್ನು ಆರಿಸಿಕೊಳ್ಳಿ : ಒಲೆಯ ಜ್ವಾಲೆಯ ಶಾಖವು ಅಸಹನೀಯವಾಗಿರುತ್ತದೆ. ಹಾಗಾಗಿ ಕನಿಷ್ಠ ಅಡುಗೆ ಅಥವಾ ಸರಳ ಅಡುಗೆಯನ್ನೇ ಆಯ್ದುಕೊಳ್ಳಿ. ನಿಮ್ಮ ಆಹಾರದಲ್ಲಿ ಹೆಚ್ಚು ಹಣ್ಣುಗಳು, ಸಲಾಡ್ಗಳು ಮತ್ತು ಸುಲಭವಾಗಿ ಜೀರ್ಣವಾಗುವ ಹಗುರವಾದ ಭಕ್ಷ್ಯಗಳೇ ಇರುವಂತೆ ನೋಡಿಕೊಳ್ಳಿ.
4. ನಿಮ್ಮ ಪದಾರ್ಥಗಳನ್ನು ಮುಂಚಿತವಾಗಿ ತಯಾರಿಸಿ : ಅಡುಗೆ ಮಾಡುವ ಮೊದಲು ತರಕಾರಿಗಳನ್ನು ಕತ್ತರಿಸುವುದು, ಮಸಾಲೆ ಮಿಶ್ರಣಗಳನ್ನು ತಯಾರಿಸುವುದು ಸೇರಿದಂತೆ ಕೆಲವು ಹಂತಗಳನ್ನು ಪೂರೈಸಲು ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತವೆ. ಆದ್ದರಿಂದ, ಗ್ಯಾಸ್ ಮುಂದೆ ಹೆಚ್ಚು ಹೊತ್ತು ನಿಲ್ಲವುದನ್ನು ತಡೆಯಲು ಈ ಕೆಲಸಗಳನ್ನು ಮೊದಲೇ ಮಾಡಿಟ್ಟುಕೊಳ್ಳಬೇಕು. ಇದು ಅಡುಗೆಮನೆಯಲ್ಲಿ ನಿಮ್ಮ ಸಮಯವನ್ನು ಉಳಿಸುವುದಲ್ಲದೆ, ಆ ಕೋಣೆ ಅತಿಯಾಗಿ ಬಿಸಿಯಾಗುವುದನ್ನು ತಡೆಯುತ್ತದೆ.
5. ಎಕ್ಸಾಸ್ಟ್ ಬಳಸಿ : ಅಡುಗೆ ಮಾಡುವಾಗ ಅಡುಗೆಮನೆಯ ಚಿಮಣಿಯನ್ನು ಆನ್ ಮಾಡಿ. ಕಿಟಕಿಗಳನ್ನು ತೆರೆಯಿರಿ. ಇದು ಬಿಸಿ ಗಾಳಿ ಅಡುಗೆ ಕೋಣೆಯಿಂದ ಹೊರ ಹೋಗುವಂತೆ ಮಾಡುತ್ತದೆ. ಪರಿಣಾಮವಾಗಿ, ನೀವು ಅಡುಗೆ ಮನೆಯೊಳಗೆ ಕಾಲಿಟ್ಟಾಗಲೆಲ್ಲಾ ಸ್ವಚ್ಛ, ತಂಪಾದ ಮತ್ತು ವಾಸನೆ-ಮುಕ್ತ ಅನುಭವ ನಿಮ್ಮದಾಗುವುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications