Silk Cocoon Price: ರೇಷ್ಮೆ ಗೂಡಿನ ಬೆಲೆ ದಿಢೀರ್ ಕುಸಿತ, ಕಾರಣವೇನು..?
ಬೆಂಗಳೂರು, ಮಾರ್ಚ್ 20: ಒಂದೆಡೆ ಬರ, ಮತ್ತೊಂದೆಡೆ ದರ ಕುಸಿತ ಕಾರಣದಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ. ದಿನದಿಂದ ದಿನಕ್ಕೆ ಒಂದೊಂದೇ ಬೆಳೆಯ ದರ ಕುಸಿತವಾಗುತ್ತಿದ್ದು, ಬೆಳೆಯುವ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಕೆಂಪು ಮೆಣಸಿನ ಕಾಯಿ ಬೆಲೆ ಏಕಾಏಕಿ ನೆಲ ಕಚ್ಚಿತ್ತು. ರೈತರು ಊಹಿಸಲು ಸಾಧ್ಯವಾಗದ ಕಡಿಮೆ ಬೆಲೆ ನಿಗದಿಯಾಗಿತ್ತು. ಇದೀಗ ರೇಷ್ಮೆ ಗೂಡಿನ ಬೆಲೆ ದಿಢೀರ್ ಕುಸಿತಗೊಂಡಿದೆ.
ಬೇಸಿಗೆ ನೀರಿನ ಕೊರತೆ, ಬಿಸಿಲಿನ ಶಾಖದಿಂದ ರೇಷ್ಮೆ ಗೂಡಿನ ಗುಣಮಟ್ಟ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಏಕಾಏಕಿ ರೇಷ್ಮೆ ಗೂಡಿನ ದರ ಇಳಿಕೆಯಾಗಿದೆ. 500 ರಿಂದ 550 ರೂಪಾಯಿವರೆಗೂ ಇದ್ದ ಒಂದು ಕೆಜಿ ರೇಷ್ಮೆ ಗೂಡಿನ ದರ ಇದೀಗ 350 ರಿಂದ 400 ರೂಪಾಯಿಗಳಿಗೆ ಕುಸಿದಿದೆ.

ಕಳೆದ ವರ್ಷದ ಅಂತ್ಯದಲ್ಲಿ ಗರಿಷ್ಠ ಬೆಲೆಯಿದ್ದ ರೇಷ್ಮೆ ಗೂಡು ಈ ವರ್ಷದ ಮಾರ್ಚ್‌ನಲ್ಲಿ ಸ್ವಲ್ಪಮಟ್ಟಿಗೆ ಇಳಿದಿತ್ತು. ಇದೀಗ ಕಳೆದೆರಡು ದಿನಗಳಲ್ಲಿ ಮತ್ತೆ 100-150 ರೂಪಾಯಿಯಷ್ಟು ಬೆಲೆ ಕುಸಿದಿದೆ. ಬರ ಹಾಗೂ ಏಕಾಏಕಿ ಬೆಲೆ ಇಳಿಕೆಯಿಂದ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ.
ರೇಷ್ಮೆ ಗೂಡಿನ ಬೆಲೆ ಇಳಿಕೆಗೆ ಕಾರಣವೇನು..?
ರೇಷ್ಮೆ ಗೂಡಿನ ಬೆಲೆ ಇಳಿಕೆಗೆ ಈ ಬಾರಿಯ ಬಿರು ಬಿಸಿಲು ಹಾಗೂ ಬರವೇ ಕಾರಣವಾಗಿದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಹಿಪ್ಪು ನೇರಳೆ ಸೊಪ್ಪು ಸಿಗುತ್ತಿಲ್ಲ. ಸರಿಯಾದ ನೀರಿನ ಪ್ರಮಾಣ ಸಿಗದೇ ಬೆಳೆದ ಹಿಪ್ಪು ನೇರಳೆ ಸೊಪ್ಪಿನಲ್ಲಿ ಪೋಷಕಾಂಶಗಳ ಕೊರತೆ ಇದೆ. ಹೀಗಾಗಿ ಇದನ್ನು ಸೇವಿಸಿದ ರೇಷ್ಮೆ ಹುಳುಗಳು ಗುಣಮಟ್ಟದ ರೇಷ್ಮೆ ಗೂಡನ್ನು ಕಟ್ಟುತ್ತಿಲ್ಲ. ಗೂಡಿನಿಂದ ತೆಗೆದ ರೇಷ್ಮೆನೂಲಿನ ಗುಣಮಟ್ಟವೂ ಉತ್ತಮವಾಗಿಲ್ಲ ಎನ್ನಲಾಗಿದೆ. ಈ ಕಾರಣದಿಂದ ರೇಷ್ಮೆ ಗೂಡಿನ ಬೆಲೆ ಕುಸಿತಗೊಂಡಿದೆ.
ಪಾತಾಳಕ್ಕೆ ಕುಸಿದ ಒಣ ಮೆಣಸಿನಕಾಯಿ ಬೆಲೆ
ಇನ್ನು ಇತ್ತೀಚಿಗೆ ಒಣ ಮೆಣಸಿನಕಾಯಿ ಬೆಲೆ ಕೂಡ ಏಕಾಏಕಿ ನೆಲಕಚ್ಚಿತ್ತು. ರೈತರ ನಿರೀಕ್ಷೆಗೂ ಮೀರಿದ ಕಡಿಮೆ ಬೆಲೆ ಬಂದಿದ್ದು, ರೈತರು ಬೆಲೆ ಏರಿಸುವಂತೆ ಪ್ರತಿಭಟನೆ ಕೂಡ ನಡೆಸಿದ್ದರು. ಕೆಲ ಸಮಯದ ಹಿಂದೆ ಒಂದು ಕ್ವಿಂಟಾಲ್‌ಗೆ 60 ರಿಂದ 70 ಸಾವಿರ ರೂಪಾಯಿದ್ದ ಒಣ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತಗೊಂಡು ಒಂದು ಕ್ವಿಂಟಾಲ್‌ಗೆ 10 ರಿಂದ 12 ಸಾವಿರ ರೂಪಾಯಿ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿತ್ತು. ಬೆಳೆ ಮೇಲೆ ಹಾಕಿದ ಬಂಡವಾಳವೂ ವಾಪಸ್ ಸಿಗದ ಕಾರಣ ರೈತರು ಕೋಲ್ಡ್ ಸ್ಟೋರೇಜ್ನಲ್ಲಿ ಇಟ್ಟು ಮುಂದೆ ಬೆಲೆ ಬಂದಾಗ ಮಾರಾಟ ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ರೈತರಿಗೆ ಇದು ಸವಾಲಿನ ಕೆಲಸವಾಗಿದೆ.












Click it and Unblock the Notifications