Get Updates
Get notified of breaking news, exclusive insights, and must-see stories!

ಸಂಸತ್ತಿನಲ್ಲಿ ವಿರೋಧ ಪಕ್ಷದ ಧ್ವನಿ ಹತ್ತಿಕ್ಕುವ ಪ್ರಯತ್ನ ಆತಂಕಕಾರಿ: ಸಿಎಂ ಸಿದ್ದರಾಮಯ್ಯ ಖಂಡನೆ

ಬೆಂಗಳೂರು: ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಧ್ವನಿಯನ್ನು ಅಡಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿರುವ ಆಡಳಿತ ಪಕ್ಷದ ಈ ನಡೆ ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಎಂಬ ಪುಸ್ತಕದಲ್ಲಿನ ಅಂಶಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಭದ್ರತೆಯ ಕುರಿತು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಿರುವುದು ಸಂಪೂರ್ಣ ನ್ಯಾಯಸಮ್ಮತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಪುಸ್ತಕವು 2024ರಲ್ಲೇ ಬಿಡುಗಡೆಯಾಗಬೇಕಾಗಿದ್ದರೂ, ಕೇಂದ್ರ ಸರ್ಕಾರ ಅನುಮತಿ ನೀಡದೇ ತಡೆದಿರುವ ಕಾರಣ ಇನ್ನೂ ಪ್ರಕಟವಾಗಿಲ್ಲ. ಇತ್ತೀಚೆಗೆ ಕಾರವಾನ್ ಮ್ಯಾಗಜೀನ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಈ ಪುಸ್ತಕದ ಕೆಲವು ಅಂಶಗಳು ಬಹಿರಂಗಗೊಂಡಿವೆ.

Parliament

ಸತ್ಯ ಮುಚ್ಚಿಡುವ ದುರುದ್ದೇಶ

ಕಾರವಾನ್‌ನಲ್ಲಿ ಪ್ರಕಟವಾದ ವಿಚಾರಗಳನ್ನು ಜನರಲ್ ನರವಣೆ ಅವರು ತಳ್ಳಿ ಹಾಕಿಲ್ಲ. ಬದಲಾಗಿ ತಮ್ಮ ಪುಸ್ತಕ ಬಿಡುಗಡೆಗೆ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿರುವುದು ಬಹಳ ಮಹತ್ವದ್ದಾಗಿದೆ. ನರವಣೆ ಅವರ ಬರಹಗಳಲ್ಲಿ ತಪ್ಪು ಅಥವಾ ಅಸತ್ಯವಿದ್ದರೆ ಸರ್ಕಾರವು ಪುಸ್ತಕ ಪ್ರಕಟಣೆಗೆ ಅನುಮತಿ ನೀಡದೇ ಇರಬೇಕಿತ್ತು. ಆದರೆ ಸರ್ಕಾರದ ಮೌನವು ಅವರು ಹೇಳಲು ಹೊರಟಿರುವ ಸತ್ಯವನ್ನು ಮುಚ್ಚಿಡುವ ದುರುದ್ದೇಶವಿದೆ ಎಂಬ ಅನುಮಾನಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದ್ದಾರೆ.

ನರವಣೆ ಅವರ ಪುಸ್ತಕದಲ್ಲಿ 2020ರಲ್ಲಿ ಚೀನಾ ಗಡಿಯಲ್ಲಿ ನಡೆದ ಘರ್ಷಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಿಟ್ಟ ಮತ್ತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ವಿಫಲವಾಯಿತು ಎಂಬ ಗಂಭೀರ ಅಂಶಗಳಿವೆ. ಸರ್ಕಾರದ ದ್ವಂದ್ವ ನಿಲುವಿನಿಂದಾಗಿ ಸೇನಾಪಡೆಗಳು ಸೈನಿಕ ಕಾರ್ಯಾಚರಣೆ ಮಾತ್ರವಲ್ಲದೆ ರಾಜಕೀಯ ಸಂದಿಗ್ಧತೆಯನ್ನೂ ನಿಭಾಯಿಸಬೇಕಾಯಿತು ಎಂಬ ಸಂಗತಿಗಳು ಈ ಬರಹಗಳಲ್ಲಿ ಉಲ್ಲೇಖಗೊಂಡಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೇಂದ್ರ ಸರ್ಕಾರ ಅಸಮರ್ಥ

ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ರಾಜಕೀಯ ನಾಯಕತ್ವದ ವೈಫಲ್ಯವನ್ನು ತೋರಿಸುತ್ತದೆ. ರಾಷ್ಟ್ರೀಯ ಭದ್ರತೆಯಂತಹ ಅತ್ಯಂತ ಗಂಭೀರ ವಿಷಯಗಳಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಅಸಮರ್ಥವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.

ಇಂತಹ ವಿಚಾರಗಳು ಸಂಸತ್ತಿನಲ್ಲಿ ಚರ್ಚೆಗೆ ಒಳಪಡುವುದು ಅನಿವಾರ್ಯ. ಜನರ ಪರವಾಗಿ ಪ್ರಶ್ನೆಗಳನ್ನು ಕೇಳುವುದು ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಯವರ ಕರ್ತವ್ಯ. ಅವರು ಅದನ್ನು ಮಾಡಿದ್ದಾರೆ. ರಾಹುಲ್ ಗಾಂಧಿಯವರು ಭಾರತ ವಿರೋಧಿಯಾಗಲಿ ಅಥವಾ ಸೇನೆ ವಿರುದ್ಧವಾಗಲಿ ಮಾತನಾಡಿಲ್ಲ. ಹೀಗಿದ್ದರೂ ಅವರ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು, ಸತತ ಎರಡು ದಿನಗಳ ಕಾಲ ಸಂಸತ್ತನ್ನು ಸ್ಥಗಿತಗೊಳಿಸುವುದು, ಎಂಟು ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸುವುದು ಮತ್ತು ರಾಷ್ಟ್ರಪತಿಯ ಭಾಷಣದ ಮೇಲೆ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶವನ್ನೇ ನಿರಾಕರಿಸಿರುವುದು ಪ್ರಜಾಪ್ರಭುತ್ವದ ಕತ್ತು ಹಿಸುಕಿದ ಕ್ರಮವಾಗಿದೆ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಭದ್ರತೆಯಂತಹ ವಿಷಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ರಾಜಕೀಯ ಪರಿಣಾಮಗಳನ್ನು ಎದುರಿಸುವ ಬದ್ಧತೆಯನ್ನು ತೋರಿಸಬೇಕಾಗುತ್ತದೆ. ಆದರೆ ಮೋದಿ ಸರ್ಕಾರ ಒತ್ತಡದ ತಂತ್ರದ ಮೂಲಕ ಎದುರಾಳಿಗಳ ಧ್ವನಿಯನ್ನೇ ಹತ್ತಿಕ್ಕಲು ಹೊರಟಿದೆ. ಜನರಿಂದ ಮುಚ್ಚಿಡುವಂತಹ ವಿಷಯಗಳೇನೂ ಇಲ್ಲದಿದ್ದರೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವುದಕ್ಕೆ ಯಾಕೆ ಭಯ? ರಾಷ್ಟ್ರೀಯ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಿದ್ದರೆ ಪರಾಮರ್ಶೆಯನ್ನು ಯಾಕೆ ತಪ್ಪಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಿಜೆಪಿಯ 'ದೇಶ ಮೊದಲು', 'ಧರ್ಮ ಮೊದಲು' ಎಂಬ ಘೋಷಣೆಗಳು ಕೇವಲ ಬೊಗಳೆ ಭಾಷಣಗಳಷ್ಟೆ. ಮೌನ, ಪಲಾಯನ ಮತ್ತು ಶರಣಾಗತಿಯನ್ನು ಸಂಘಪರಿವಾರ ಬಿಜೆಪಿ ನಾಯಕರಿಗೆ ರಾಜಕೀಯ ತಂತ್ರವಾಗಿ ಕಲಿಸಲಾಗಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+