Siddaramaiah: ಮುನಿರತ್ನ ರವರಿಗೆ ಮೊಟ್ಟೆ ಎಸೆದದ್ದು ಯಾವ ಪಕ್ಷದವರು? ಸಿದ್ದರಾಮಯ್ಯ ಹೇಳಿದ್ದೇನು?
ಬೆಳಗಾವಿ,ಡಿಸೆಂಬರ್ 26: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಹೊಡೆದಿರುವುದಕ್ಕೆ ಬಿಜೆಪಿ ನಾಯಕರು ಕೆಂಡಾ ಮಂಡಲರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರೊಂದಿಗೆ ಹೋಗುವಾಗಲೇ ಮುನಿರತ್ನ ಮೇಲೆ ದಾಳಿಯಾಗಿತ್ತು. ಕಾಂಗ್ರೆಸ್‌ನವರೇ ಮೊಟ್ಟೆ ಎಸೆದಿದ್ದು ಎಂದು ಆರೋಪಿಸಿ ಮುನಿರತ್ನ ಅವರು ಪ್ರತಿಭಟನೆ ಮಾಡಿದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಶಾಸಕ ಮುನಿರತ್ನ ರವರಿಗೆ ಮೊಟ್ಟೆ ಎಸದವರು ಯಾರು ಹಾಗೂ ಯಾವ ಪಕ್ಷಕ್ಕೆ ಸೇರಿದವರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಪೊಲೀಸರು ತನಿಖೆ ಮಾಡಲಿದ್ದಾರೆ ಎಂದು ಹೇಳಿದರು.

ಸಿ.ಟಿ.ರವಿ ಪ್ರಕರಣ ಸಂಬಂಧ ಒಬ್ಬ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಿರುವ ಬಗ್ಗೆ ಪ್ರತಿಕ್ರಯಿಸಿ, ಪೊಲೀಸ್ ಠಾಣೆಯಲ್ಲಿ ಬಿಜೆಪಿ ಪಕ್ಷದ ಸಭೆ ನಡೆಸಲು ಅವಕಾಶ ಕೊಟ್ಟ ಕಾರಣಕ್ಕಾಗಿ ಅಧಿಕಾರಿಯನ್ನು ಅಮಾನತ್ತುಗೊಳಿಸಲಾಗಿದೆ. ಪೊಲೀಸ್ ಠಾಣೆಯೊಂದರಲ್ಲಿ ರಾಜಕೀಯ ಪಕ್ಷದ ಸಭೆ ನಡೆಸಲು ಅವಕಾಶ ನೀಡಿದ್ದು ತಪ್ಪು. ಸಿ.ಟಿ.ರವಿಯವರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಅವರನ್ನು ಬೇರೆಡೆಗಳಿಗೆ ಕರೊದೊಯ್ಯಲಾಗಿತ್ತು ಎಂದು ಬೆಳಗಾವಿಯ ಪೊಲೀಸ್ ಕಮೀಷನರ್ ರವರು ಸಹ ಸ್ಪಷ್ಟಪಡಿಸಿರುವುದಾಗಿ ತಿಳಿಸಿದರು.
ಸರ್ಕಾರದ ವಿರುದ್ದ ರಾಜ್ಯಪಾಲರಿಗೆ ಶಾಸಕ ಸಿ.ಟಿ.ರವಿಯವರು ದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನಿಡಿ, ಸಿ.ಟಿ.ರವಿಯವರು ತಮ್ಮ ತಪ್ಪನ್ನು ಮರೆಮಾಚಲು ಈ ರೀತಿ ಮಾಡುತ್ತಿದ್ದು, ಅವರ ಪ್ರಕರಣವನ್ನು ಸಿಐಡಿ ತನಿಖೆ ಮಾಡುತ್ತಿದೆ. ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಅಧಿವೇಶನದಿಂದ ಪಕ್ಷದಲ್ಲಿ ಬದಲಾವಣೆ ಪರ್ವ ಆರಂಭವಾಗುವುದೇ ಎಂಬ ಪರ್ತಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಬದಲಾವಣೆ ನಿರಂತರವಾದ ಪ್ರಕ್ರಿಯೆ. ನೂರು ವರ್ಷಗಳ ಹಿಂದಿದ್ದ ಪರಿಸ್ಥಿತಿ ಈಗಿಲ್ಲ. ರಾಜಕೀಯ ಬದಲಾವಣೆ ಹಾಗೂ ಬೆಳವಣಿಗೆಗಳು ಆಗುತ್ತಿರುತ್ತವೆ ಎಂದು ತಿಳಿಸಿದರು.
1924 ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಪೂರ್ವಸಿದ್ಧತೆ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗಾಂಧೀಜಿಯವರ ವಿಚಾರಧಾರೆಯನ್ನು ಪ್ರಚುರಪಡಿಸಲು ವರ್ಷಪೂರ್ತಿ ರಾಜ್ಯದೆಲ್ಲೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 1924 ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಪೂರೈಸಿದ್ದು, ಆ ಪ್ರಯುಕ್ತ ಶತಮಾನೋತ್ಸವದ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಡಿಸೆಂಬರ್ 26 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ, ಸುವರ್ಣ ಸೌಧದ ಪಕ್ಕದಲ್ಲಿ ಗಾಂಧೀಜಿಯವರ ಪ್ರತಿಮೆ ಅನಾವರಣದ ಕಾರ್ಯಕ್ರಮವಿದ್ದು, 27ರಂದು ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ ಎಂದರು.












Click it and Unblock the Notifications