Reservation: ಡಿ ಕೆ ಶಿವಕುಮಾರ್ ನನ್ನ ಮಾತು ಕೇಳ್ತಾರೆ ಅನ್ನೋ ನಂಬಿಕೆ : ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಮಾತನ್ನು ಕೇಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆಯನ್ನು ಏನಾದರೂ ಮಾಡಿ ನೀವೆಲ್ಲ ಸೇರಿ ತೆರವು ಮಾಡಿಸಿ. ಮುಖ್ಯಮಂತ್ರಿಗಳು ಸೇರಿದಂತೆ ಇಲ್ಲಿರುವವರೆಲ್ಲರೂ ನನ್ನ ಮಾತನ್ನು ಕೇಳುತ್ತಾರೆ ಎಂಬ ನಂಬಿಕೆ ನನಗಿದೆ. ಅದು ಜಾರಿಯಾಗಲೇಬೇಕು. ನಿಮಗೆಲ್ಲ ಸಾಮಾಜಿಕ ನ್ಯಾಯ ಸಿಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವದಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿ, ಮೀಸಲಾತಿಯಲ್ಲಿ ಕನಿಷ್ಠ 75% ಸಿಗಲೇಬೇಕು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಅವರೆಲ್ಲರಿಗೂ ಕೂಡ 75% ಮೀಸಲಾತಿ ಸಿಗಬೇಕು. ಎಲ್ಲರಿಗೂ ಅವರ ಜಾತಿಗೆ ಅನುಗುಣವಾಗಿ, ಜಾತಿ ಸಂಖ್ಯೆಗಳನುಗುಣವಾಗಿ ಮೀಸಲಾತಿ ಸಿಗಬೇಕು. ಮೀಸಲಾತಿ ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಮೀಸಲಾತಿ ಸಿಕ್ಕಿದಾಗ ರಾಜಕೀಯ ಸಮಾನತೆ ಸಾಧ್ಯ
ಅಷ್ಟೇ ಅಲ್ಲದೇ ಲೋಕಸಭೆಯಲ್ಲಿ, ವಿಧಾನ ಸಭೆಯಲ್ಲಿ ಜಾತಿಗೆ ಅನುಗುಣವಾಗಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಕ್ಕಿದಾಗ ಮಾತ್ರ ನಾವು ರಾಜಕೀಯ ಸಮಾನತೆ ಪಡೆದುಕೊಳ್ಳಲು ಸಾಧ್ಯ ಎಂದರು. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಸಿಗಬೇಕಾದರೆ ಸಮಾನತೆಯ ಸಮಾಜ ನಿರ್ಮಾಣ ಆಗಲೇಬೇಕು. ಬರೀ ಹಿಂದುಳಿದ ಜಾತಿಗಳಷ್ಟೆ ಅಲ್ಲದೆ ದಲಿತರು, ಅಲ್ಪಸಂಖ್ಯಾತರು ಅವರೆಲ್ಲರೂ ಹೋರಾಟ ಮಾಡಬೇಕು.
ಹಿಂದುಳಿದ ಜಾತಿಗಳಲ್ಲಿ ಕೆಟಗರಿ 1, ಕೆಟಗರಿ 2 ಎ ಇವೆರಡರಲ್ಲಿ ಸುಮಾರು 752 ಜಾತಿಗಳಿದ್ದಾವೆ. ಒಟ್ಟು 806 ಹಿಂದುಳಿದ ಜಾತಿಗಳಿವೆ. ಕೆಟಗರಿ 1 ಮತ್ತು ಕೆಟಗರಿ 2ಎ ಅಷ್ಟು ಜನಸಂಖ್ಯೆಯವರು ಮಾತ್ರ ಈ ಒಕ್ಕೂಟದಲ್ಲಿ ಇರುವಂತವರು ಎಂದರು. ಮುಂದೆ ಕೆಟಗರಿ 3ಎ, 3ಬಿ ಕೂಡ ಸೇರಬೇಕು ಎಂದು ಒಗ್ಗಟ್ಟಿನ ಮಂತ್ರ ಬೋಧಿಸಿದರು.
ತಾವು ಮುಖ್ಯಮಂತ್ರಿಯಾದ ತಕ್ಷಣ ದೇವರಾಜ ಅರಸು ನಿಗಮದಲ್ಲಿ ಸಾಲ ತೆಗೆದುಕೊಂಡಿದ್ದ ಹಿಂದುಳಿದ ಜಾತಿಗಳ ಜನರ ಸಾಲವನ್ನು ಮನ್ನಾ ಮಾಡಿದ್ದನ್ನು ನೆನಪಿಸಿದರು. ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಈ ಮೂಲಕ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಿರುವುದಾಗಿ, ಜೊತೆಗೆ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸವನ್ನು ಮಾಡಿರುವುದಾಗಿ ತಿಳಿಸಿದರು.
ಉದ್ಯೋಗದಲ್ಲಿ ಮೀಸಲಾತಿ
ದೇವರಾಜು ಅರಸು ಮತ್ತು ಹಾವನೂರು ಆಯೋಗದ ಮೂಲಕ 1977ರಲ್ಲಿ ಮೀಸಲಾತಿ ಜಾರಿಗೆ ಬಂತು. ಆಗ ದೇವರಾಜ ಅರಸು ಅವರು ಹೊಸ ಹಿಂದುಳಿದ ಜಾತಿಗಳ ಹೊಸ ಇಲಾಖೆಯನ್ನು ಪ್ರಾರಂಭ ಮಾಡಿದರು. ಶಿಕ್ಷಣದಲ್ಲಿ ಒತ್ತು ನೀಡುವ ಜೊತೆಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ಕೊಟ್ಟರು. ಅಲ್ಲಿಯವರೆಗೆ ಮೀಸಲಾತಿ ಇರಲಿಲ್ಲ. ನಾನು ಓದುವ ಸಂದರ್ಭದಲ್ಲಿ ಮೀಸಲಾತಿ ಇರಲಿಲ್ಲ. ಮೀಸಲಾತಿ ಇದ್ದಿದ್ದರೆ ಬಹುಶಃ ನಾನು ಎಂಎಸ್ಸಿ ಓದಿ ಎಲ್ಲೋ ಮೇಷ್ಟ್ರಾಗಿ ಇರುತ್ತಿದ್ದೆ. ಮೀಸಲಾತಿಯಿಲ್ಲದೆ ಇರುವುದರಿಂದ ನಾನು ರಾಜ್ಯದಲ್ಲಿ ಉಪಮುಖ್ಯಮಂತ್ರಿಯಾಗಲು, ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎಂದರು.
ಹಿಂದುಳಿದ ವರ್ಗಗಳ ಇಲಾಖೆ ಪ್ರಾರಂಭವಾದಾಗ ಅದರ ಬಜೆಟ್ ಕೇವಲ 5 ಕೋಟಿ ರೂ. ಆಗಿತ್ತು. ನಾನು ಮುಖ್ಯಮಂತ್ರಿಯಾದ ಮೇಲೆ 26-27ರಲ್ಲಿ ಬಜೆಟ್ ಮಂಡಿಸಿದಾಗ 4,460 ಕೋಟಿ ರೂ. ಇತ್ತು ಎಂದರು. ಇಂದು 2,712 ಹಾಸ್ಟೇಲ್‌ಗಳಿವೆ, ಅದರಲ್ಲಿ 2 ಲಕ್ಷದ 58 ಸಾವಿರದ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿದ್ದಾರೆ. ನಾನು ಉಪಮುಖ್ಯಮಂತ್ರಿಯಾಗಿರುವಾಗ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದೆ.
ಪ್ರತಿ ಹೋಬಳಿಗೊಂದು ವಸತಿ ಶಾಲೆಗಳನ್ನು ಪ್ರಾರಂಭ ಮಾಡುತ್ತೇನೆ ಎಂದು ಅಂದು ಹೇಳಿದ್ದೆ. ಯಾಕೆಂದರೆ ದಲಿತ ಸಂಘಟನೆಗಳು ನಮಗೆ ಸಾರಾಯಿ ಬೇಡ ವಸತಿ ಶಾಲೆಗಳು ಬೇಕು ಎಂದು ಹೋರಾಟ ಮಾಡುತ್ತಿದ್ದರು. 19-20ವರೆಗೆ ಬಿಜೆಪಿಯವರ ಕಾಲದಲ್ಲಿ ಕೇವಲ 5-6 ಹಾಸ್ಟೆಲ್‌ಗಳು ಮಂಜೂರು ಆಗಿದ್ದವು. ನಾನು 2013ರಿಂದ 18ರವರೆಗೆ 542 ಹಾಸ್ಟೇಲ್‌ಗಳನ್ನು ಪ್ರಾರಂಭ ಮಾಡಿದೆ. ವಸತಿ ಶಾಲೆಗಳನ್ನು ಪ್ರಾರಂಭ ಮಾಡಿದೆ. ಇಂದು ದಲಿತರಿಗೆ ಸುಮಾರು 543 ವಸತಿ ಶಾಲೆಗಳಿವೆ. ಇವನೆಲ್ಲ ನಾನು ಮುಖ್ಯಮಂತ್ರಿಯಾಗಿರುವಾಗ ಮಾಡಿರುವುದು ಎಂದು ತಿಳಿಸಿದರು.
ನನ್ನ ಸ್ವಂತ ಖರ್ಚಿನಲ್ಲಿ ಓದುತ್ತಿದ್ದೆ
ಶಿಕ್ಷಣಕ್ಕಾಗಿ ವಿದ್ಯಾಸಿರಿ ಪ್ರಾರಂಭ ಮಾಡಿದೆ. ನನ್ನ ಸ್ವಂತ ಖರ್ಚಿನಲ್ಲಿ ನಾನು ರೂಮ್ ಮಾಡಿಕೊಂಡು, ಅಡುಗೆಮಾಡಿಕೊಂಡು ಓದುತ್ತಿದ್ದೆ. ಆ ಕಷ್ಟದ ಅರಿವು ನನಗಿತ್ತು. ಸಾವಿರಾರು ಮಕ್ಕಳು ಹಾಸ್ಟೆಲ್‌ಗಳಲ್ಲಿ ಸೀಟು ಸಿಗದೆ ಓದುತ್ತಿದ್ದರು. ಅವರು ವಿದ್ಯಾಭ್ಯಾಸವನ್ನು ಮೊಟಕುಗೊಳ್ಳಬಾರದು ಎಂಬ ಉದ್ದೇಶದಿಂದ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದೆ. ಪ್ರತಿ ವಿದ್ಯಾರ್ಥಿಗೆ 1500 ರೂ.ಗಳನ್ನು ತಿಂಗಳಿಗೆ ಕೊಡುತ್ತ , 1 ವರ್ಷಕ್ಕೆ 15 ಸಾವಿರ ರೀತಿಯಲ್ಲಿ ಹಣವನ್ನು ನೀಡಿದ್ದೆ ಎಂದು ವಿದ್ಯಾಸಿರಿ ಯೋಜನೆಯ ಹಿಂದಿನ ತಮ್ಮ ಅನುಭವವನ್ನು ಬಿಚ್ಚಿಟ್ಟರು.
ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಬಾರದು. ಆರ್ಥಿಕ, ಸಾಮಾಜಿಕ, ರಾಜಕೀಯದಲ್ಲಿ ಸಮಾನತೆ ಸಿಗುವುದಿಲ್ಲವೊ ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲೇಬೇಕು. ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ. ಹಿಂದುಳಿದ ಜಾತಿಗಳಿಗೆ ಸರ್ಕಾರದ ಗುತ್ತಿಗೆ ಕಾಮಗಾರಿಯಲ್ಲಿ 1 ಕೋಟಿ ವರೆಗೆ ಮೀಸಲಾತಿಯನ್ನು ತಂದದ್ದು ನಮ್ಮ ಸರ್ಕಾರ.
2015ರಲ್ಲಿ ಬ್ಯಾಕ್‌ಲಾಗ್ ಹುದ್ದೆಯನ್ನು ಭರ್ತಿ ಮಾಡುವಂತಹ ಕೆಲಸವನ್ನು ಮಾಡಿದೆ. ಅಸಮಾನತೆಯನ್ನು ಹೋಗಲಾಡಿಸಬೇಕೆಂದೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಶ್ರೀಮಂತ ಬಡವನೆಂಬ ಬೇಧವಿಲ್ಲದೆ ಹೆಣ್ಣುಮಕ್ಕಳು ರಾಜ್ಯವಿಡಿ ಸಂಚರಿಸಲು ಶಕ್ತಿ ಯೋಜನೆಯನ್ನು ಜಾರಿಗೆ ತರಲಾಯಿತು. ಮನೆಯ ಯಜಮಾನಿಗೆ 2000 ನೀಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಜೊತೆಗೆ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ಹೇಳಿದರು. ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದೆ ಎಂದು ತಮ್ಮ ಯೋಜನೆಗಳನ್ನು ನೆನೆದರು.


Click it and Unblock the Notifications
