ಇನ್ನೆರಡು ವರ್ಷ ಅಧಿಕಾರದಲ್ಲಿದ್ದರೆ ಸಿಎಂ ಯಡಿಯೂರಪ್ಪ ರಾಜ್ಯ ಹಾಳು ಮಾಡ್ತಾರೆ!
ಬೆಂಗಳೂರು, ನ. 26: ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂಬ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು, ಬಿಜೆಪಿಯಲ್ಲಿ ಎಲ್ಲರೂ ಒಂದಾಗಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲರೂ ಒಂದಾಗಿದ್ದರೆ, ಎರಡು ಕಡೆ ಮೀಟಿಂಗ್ ಮಾಡ್ತಿರೋದೇಕೆ? ಎಂದು ಲೇವಡಿ ಮಾಡಿದ್ದಾರೆ. ಒಂದು ಕಡೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಮೀಟಿಂಗ್ ಮಾಡುತ್ತಾರೆ. ಮತ್ತೊಂದಡೆ ರೇಣುಕಾಚಾರ್ಯ ಮೀಟಿಂಗ್ ಮಾಡುತ್ತಾರೆ. ಅವರು ಒಗ್ಗಟ್ಟಾಗಿದ್ದಾರೆ ಎಂದು ಹೇಳುವುದಕ್ಕೆ ಆಗುತ್ತದೆಯಾ? ಎಂದು ಸಿದ್ದರಾಮಯ್ಯ ಅವರು ಬಿಜೆಪಿಯಲ್ಲಿನ ಗುಂಪುಗಾರಿಕೆಯನ್ನು ವ್ಯಂಗ್ಯ ಮಾಡಿದ್ದಾರೆ.

ಮಂತ್ರಿಮಂಡಲ ಕೆಡವಿ ಕೊಳ್ಳುತ್ತಾರೊ ಗೊತ್ತಿಲ್ಲ
ಯಡಿಯೂರಪ್ಪ ಅವರು ಮಂತ್ರಿ ಮಂಡಲ ವಿಸ್ತರಣೆ ಮಾಡುತ್ತಾರೊ ಗೊತ್ತಿಲ್ಲ. ಮಂತ್ರಿ ಮಂಡಲವನ್ನೇ ಕೆಡವಿಕೊಳ್ಳುತ್ತಾರೊ ಗೊತ್ತಿಲ್ಲ. ಒಟ್ಟಾರೆ ರಾಜ್ಯದಲ್ಲಿ ಸರ್ಕಾರ ಇಲ್ಲ. ಸರ್ಕಾರ ಸಂಪೂರ್ಣ ಸತ್ತು ಹೋಗಿದೆ. ಅದರ ಕಡೆ ಗಮನ ಕೊಡುತ್ತಿಲ್ಲ.
ಸಿದ್ದರಾಮಯ್ಯಗೆ ಕನಸು ಬಿದಿದ್ದು ಯಾವಾಗ?; ರೇಣುಕಾಚಾರ್ಯ
ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಿಕೊಂಡು ಕುಳಿತಿದ್ದಾರೆ. ಸರ್ಕಾರ ನೌಕರರಿಗೆ ವೇತನ ಕೊಡೋದಕ್ಕೆ ದುಡ್ಡಿಲ್ಲ. ವೃದ್ಧಾಪ್ಯ ವೇತನ, ವಿಧವಾ ವೇತನ ಕೊಡೊದಕ್ಕೂ ಇವ್ರತ್ರ ದುಡ್ಡಿಲ್ಲ. ಅದರ ಮಧ್ಯೆ ಅನಗತ್ಯವಾಗಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರಾಜ್ಯವನ್ನೇ ಹಾಳು ಮಾಡ್ತಾರೆ
ಹೀಗಾಗಿಯೇ ಅನಗತ್ಯ ಖರ್ಚುಗಳನ್ನು ಖಡಿತ ಮಾಡಿ ಎಂದು ಸಲಹೆ ಕೊಟ್ಟಿದ್ದೆ. ಅದನ್ನು ಅವರು ಮಾಡಿಲ್ಲ. ರಾಜ್ಯದಲ್ಲಿ ಇನ್ನು 2 ವರ್ಷ ಇವರ ಸರ್ಕಾರ ಇದ್ದರೆ ರಾಜ್ಯವನ್ನು ಸಂಪೂರ್ಣವಾಗಿ ಹಾಳು ಮಾಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರ ಒಪ್ಪಿಕೊಳ್ಳಲಿ
ಜಾತಿ ಗಣತಿಗೆ ತಾರ್ಕಿಕ ಅಂತ್ಯ ಕೊಡತ್ತೇನೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಹೇಳಿಕೆಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರು ಕೇವಲ ವರದಿ ಕೊಡುತ್ತಾರೆ. ಆದರೆ ಸರ್ಕಾರ ಅದನ್ನು ಒಪ್ಪಿಕೊಂದು ಅಂಗೀಕಾರ ಮಾಡಬೇಕು. ಬಿಜೆಪಿ ಸರ್ಕಾರ ಆ ಕೆಲಸವನ್ನು ಮಾಡುತ್ತಿಲ್ಲ. ಜಾತಿ ಗಣಿತಿ ವರದಿಯಲ್ಲಿ ಏನಿದೆ ಅಂತ ನಾನು ನೋಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಯಾವ ಸಮುದಾಯ ಎಷ್ಟಿದೆ ನೋಡಬೇಕಲ್ಲ?
ಸ್ವಾತಂತ್ರ್ಯ ಬಂದು 74 ವರ್ಷಗಳಾಗಿವೆ. ಯಾವ ಸಮುದಾಯ ಎಷ್ಟಿದೆ ಅಂತ ನೋಡಬೇಕಲ್ಲ? ಅದನ್ನು ಲೆಕ್ಕ ಹಾಕಲೆಂದೆ 160 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ವರದಿ ತಯಾರಿಸಿದ್ದೇವೆ. ಆ ವರದಿಯನ್ನು ಒಮ್ಮೆ ನೊಡಲಿ. ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವುದು ಬೇಡ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತಿದೆ ಬಿಜೆಪಿ ನಡೆ ಎಂದು ಜಾತಿ ಸಮೀಕ್ಷೆ ವರದಿ ಅಂಗೀಕಾರದ ಬಗ್ಗೆ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.