ಗ್ಯಾರಂಟಿಗಳಿಗೆ ದುಡ್ಡಿಲ್ಲ ಎಂದು ಬಿಜೆಪಿ ಬಳಿ ಸಾಲ ಕೇಳಿಲ್ಲ: ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ ಗ್ಯಾರಂಟಿಗಳಿಗೆ ದುಡ್ಡಿಲ್ಲ ಎಂದು ನಾವು ಬಿಜೆಪಿ ಬಳಿ ಸಾಲ ಕೇಳಿಲ್ಲ. ಯಾವುದಕ್ಕೆ ಹಣವಿಲ್ಲ ಎಂದು ತಿಳಿಸಿ, ಶಕ್ತಿ ಯೋಜನೆಯಿಂದ ಉಚಿತವಾಗಿ ಓಡಾಟ ಮಾಡಬಹುದು. ಅಶೋಕ್ ಅವರ ಪತ್ನಿಯೂ ಓಡಾಡಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ಸರ್ಕಾರಿ ನೌಕರರು, ತೆರಿಗೆದಾರರನ್ನು ಬಿಟ್ಟು ಬೇರೆಯಾರನ್ನೂ ಬಿಪಿಎಲ್ ಕಾರ್ಡಿನಿಂದ ತೆಗೆಯಬೇಡಿ ಎಂದು ಸೂಚಿಸಿರುವುದಾಗಿ ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು ಬಿಜೆಪಿಯವರು ರಾಜಕೀಯಕ್ಕಾಗಿ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಯಾರು? ಅವರೇ? ಅದನ್ನು ಜಾರಿಗೆ ತಂದಿದ್ದು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರು. ರಾಜ್ಯಸಭೆಯಲ್ಲಿ ಮಂಡಿಸಿದಾಗ ಮುರಳಿ ಮನೋಹರ್ ಜೋಶಿ ಅವರು ಅದನ್ನು ವಿರೋಧಿಸಿ ಭಾಷಣ ಮಾಡಿದ್ದಾರೆ. ಅದು ಆಹಾರ ಭದ್ರತಾ ಕಾಯ್ದೆಯಲ್ಲ, ಮತ ಭದ್ರತಾ ಕಾಯ್ದೆ ಎಂದು ಕರೆದಿದ್ದರು . ಅಂದರೆ ಆಹಾರ ಭದ್ರತಾ ಕಾಯ್ದೆಗೆ ಅವರು ವಿರೋಧವಾಗಿದ್ದರು. ಇವರಿಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ ? ಎಂದರು.
ಕರ್ನಾಟಕದಲ್ಲಿ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟಿದ್ದು ಸಿದ್ದರಾಮಯ್ಯನ ಸರ್ಕಾರ. 7 ರಿಂದ 5 ಕೆ.ಜಿಗೆ ಇಳಿಸಿದ್ದು ಬಿ.ಎಸ್.ಯಡಿಯೂರಪ್ಪ. ಆರ್.ಅಶೋಕ್ ಅವರ ಸಚಿವ ಸಂಪುಟದಲ್ಲಿದ್ದರು. 2 ಕೆ.ಜಿಯನ್ನು ಕಡಿಮೆ ಮಾಡಿದಾಗ ಯಾಕೆ ಉಸಿರೆತ್ತಲಿಲ್ಲ. ಆಹಾರ ಭದ್ರತಾ ಕಾಯ್ದೆಯನ್ನು ವಿರೋಧಿಸಿದ ಬಿಜೆಪಿ ಬಡವರ ಬಗ್ಗೆ ಮಾತನಾಡುತ್ತಾರೆ. ಆಹಾರ ಪದಾರ್ಥಗಳನ್ನು ಉಚಿತವಾಗಿ ಕೊಡಬೇಕೆಂದು ಯೋಜನೆ ಜಾರಿಗೆ ತಂದಿದ್ದು ನಾವು.
ಸರ್ಕಾರಿ ನೌಕರರು, ತೆರಿಗೆದಾರರಿಗೆ ಬಿಪಿಎಲ್ ಕಾರ್ಡು ಕೊಡಬಾರದು ಎಂದು ಹೇಳಿದ್ದೇವೆ. ಈ ಯೋಜನೆ ಮಾಡಿರುವುದು ಬಡವರಿಗಾಗಿ. ಸರ್ಕಾರಿ ನೌಕರರು ಬಿಪಿಎಲ್ ಗೆ ಅರ್ಹರೇ? ಎಂದು ಪ್ರಶ್ನಿಸಿದರು. ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾಡಿದ್ದಾರಾ? ಎಸ್.ಸಿ.ಎಸ್.ಪಿ/ಟಿಎಸ್.ಪಿ ಕಾಯ್ದೆಯನ್ನು ಎಲ್ಲಿಯಾದರೂ ಜಾರಿಗೆ ತಂದಿದ್ದಾರೆಯೇ? ಬಿಜೆಪಿಗೆ ಬಡವರ ಕುರಿತು ಯಾವ ಕಾಳಜಿಯೂ ಇಲ್ಲ ಎಂದರು.
ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೆ ತಂದ ಮೇಲೆ ವಿವಿಧ ಯೋಜನೆಗಳಿಗೆ ಅನುದಾನ ಕಡಿಮೆಯಾಗಿದೆ ಎಂಬ ಬಗ್ಗೆ ಮಾತನಾಡಿ ಯಾವುದಕ್ಕೆ ಕಡಿಮೆಯಾಗಿದೆ ಎಂದರು. 1 ಲಕ್ಷದ 20 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ಧಿಗಳಿಗಾಗಿ ಮೀಸಲಿಡಲಾಗಿದೆ. ಅವರಿಗಿಂತ ಹೆಚ್ಚು ಅನುದಾನವನ್ನು ಮೀಸಲಿಡಲಾಗಿದೆ ಎಂದರು. ಕಾಂಗ್ರೆಸ್ ಶಾಸಕರೇ ಈ ಬಗ್ಗೆ ಮಾತನಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಶಾಸಕರು ವಿಶೇಷ ಅನುದಾನವನ್ನು ಕೇಳುತ್ತಿದ್ದಾರೆ. ಬಜೆಟ್ ಬಿಟ್ಟು ಕೇಳುತ್ತಿರುವುದನ್ನೂ ಕೊಟ್ಟಿದ್ದೇವೆ ಅವರು ಕೇಳಿದಷ್ಟು ಕೊಡಲು ಸಾಧ್ಯವಾಗದೇ ಇರಬಹುದು ಎಂದರು.
ಬಿಜೆಪಿ ಮೂರು ವರ್ಷಗಳ ಅಧಿಕಾರದಲ್ಲಿದ್ದು ಏನೇನು ಮಾಡಿದ್ದಾರೆ ? 2018 ರಲ್ಲಿ 600 ಭರವಸೆ ನೀಡಿ ಅದರಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ? 1 ಲಕ್ಷದವರೆಗೆ ಸಾಲ ಮನ್ನಾ ಮಾಡುತ್ತೇವೆ ಎಂದು ಮೊದಲನೇ ಸಚಿವ ಸಂಪುಟದಲ್ಲಿಯೇ ಹೇಳಿದ್ದರು ಮಾಡಿದ್ದಾರಾ? ಎಂದು ಪ್ರಶ್ನಿಸಿದರು. 10% ರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ. ರಾಜಕಾರಣಕ್ಕಾಗಿ ಹೇಳುತ್ತಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ಲೋಕಸಭಾ ಚುನಾವಣೆಯ ನಂತರ ನಿಲ್ಲಿಸುತ್ತಾರೆ, ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದರು, ಆಗಿದೆಯೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಬಿಜೆಪಿಯವರು ರಾಜಕೀಯಕ್ಕಾಗಿ ಪರಿಷ್ಕರಣೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಉಪಮುಖ್ಯಮಂತ್ರಿಗಳು ಶಕ್ತಿ ಯೋಜನೆಯ ಪರಿಷ್ಕರಣೆ ಮಾಡುವುದಾಗಿ ಹೇಳಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಶಕ್ತಿ ಯೋಜನೆಯಡಿ 325 ಕೋಟಿ ಮಹಿಳೆಯರು ಉಚಿತವಾಗಿ ಓಡಾಡಿದ್ದಾರೆ. ಅದರಲ್ಲಿ ಬಿಜೆಪಿಯವರು, ಎಲ್ಲಾ ಧರ್ಮದವರು, ಜಾರಿಯವರೂ ಸೇರಿದ್ದಾರೆ ಎಂದರು.












Click it and Unblock the Notifications