ಅಮಿತ್ ಶಾ ಎದುರು ನಡುಬಗ್ಗಿಸಿ ನಿಲ್ಲಲು ಸದನವನ್ನೇ ಮೊಟಕುಗೊಳಿಸಿದ ಸರ್ಕಾರ: ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 29: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ನಾಳಿನ ಸದನವನ್ನು ರದ್ದು ಮಾಡಿರುವ ರಾಜ್ಯ ಬಿಜೆಪಿ ಸರ್ಕಾರದ ನಿಲುವು ನಾಡವಿರೋಧಿಯಾದುದ್ದು. ಸದನವನ್ನು ಇನ್ನು ಒಂದು ವಾರ ವಿಸ್ತರಿಸಿ, ಜನರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತೇನೆ' ಎಂದು ಹೇಳಿದ್ದಾರೆ.
'ಇನ್ನೂ ಹದಿನೈದು ದಿನ ಚರ್ಚಿಸಿದರೂ ಮುಗಿಯದಷ್ಟು ಜನರ ಸಮಸ್ಯೆಗಳಿವೆ, ಅವೆಲ್ಲವನ್ನೂ ಬದಿಗೊತ್ತಿ ಅಮಿತ್ ಶಾ ಅವರ ಎದುರು ನಡುಬಗ್ಗಿಸಿ ನಿಲ್ಲಲು ಸದನವನ್ನೇ ಮೊಟಕುಗೊಳಿಸಿರುವುದು ಜನತೆಯ ಮೇಲೆ ರಾಜ್ಯ ಸರ್ಕಾರಕ್ಕಿರುವ ಅಸಡ್ಡೆಯನ್ನು ತೋರುತ್ತದೆ' ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

'ಹಳೆಯ ಪಿಂಚಣಿ ಪದ್ಧತಿ ಮರುಜಾರಿ, ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ, ಚಿಕಿತ್ಸೆ ಸಿಗದೆ ತುಮಕೂರಿನಲ್ಲಿ ಬಾಣಂತಿ, ಹಸುಗೂಸಿನ ಸಾವು ಇಂಥಾ ಹತ್ತಾರು ವಿಷಯಗಳು ಇನ್ನೂ ಚರ್ಚೆಯಾಗಬೇಕಿವೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದ್ಯಾವುದು ಬೇಕಿಲ್ಲ, ಅವರಿಗೆ ಬೇಕಿರುವುದು ಅಮಿತ್ ಶಾ ಅವರ ಕೃಪಾಕಟಾಕ್ಷ ಮಾತ್ರ' ಎಂದು ಟೀಕಿಸಿದ್ದಾರೆ.
ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಡಿಸೆಂಬರ್ 30ರಂದು ಮಂಡ್ಯ ಜಿಲ್ಲೆಗೆ ಆಗಮಿಸಿ ಮದ್ದೂರಿನ ಗೆಜ್ಜಲಗೆರೆಯಲ್ಲಿಯ ಮಂಡ್ಯ ಹಾಲು ಒಕ್ಕೂಟದ ಆವರಣದಲ್ಲಿ ನಿರ್ಮಿಸಲಾಗಿರುವ ಮೆಗಾ ಡೈರಿಯನ್ನು ಉದ್ಘಾಟಿಸಲಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯು ಮಹತ್ವ ಪಡೆದುಕೊಂಡಿದೆ. ಶಾ ಅವರ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರುಸುತ್ತೇವೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ.
ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಳಿಗಾಲದ ಅಧಿವೇಶನವನ್ನು ಮೊಟಗೊಳಿಸಿದ್ದಾರೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.












Click it and Unblock the Notifications