ಮಂಡ್ಯದಲ್ಲಿ 5 ಸೀಟು ಗೆಲ್ತೀವಿ, ನಾನು ಬದುಕಿದ್ದೇ ಹೆಚ್ಚು: ಸಿದ್ದು-ಡಿಕೆಶಿ ಮಾತುಕತೆ ಸಂಪೂರ್ಣ ವಿವರ
ಚುನಾವಣೆ ಸಮೀಪವಾಗುತ್ತಿದ್ದಂತೆ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ ಜಪಿಸಲು ಆರಂಭಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಜಟಾಪಟಿ ಇದೆ ಎಂದು ಬಿಜೆಪಿ ಕಾಲೆಳೆಯಲು ಪ್ರಯತ್ನ ಮಾಡಿತ್ತು, ಇದಕ್ಕೆ ಉತ್ತರ ಎನ್ನುವಂತೆ ಇಬ್ಬರೂ ಜೊತೆಯಾಗಿಯೇ ಪ್ರಚಾರ ಮಾಡಿದ್ದು, ಫೋಟೊಗೆ ಫೋಸ್ ನೀಡಿ ಒಗ್ಗಟ್ಟಾಗಿದ್ದೇವೆ ಎಂದು ತೋರಿಸಿದ್ದರು.
ಈಗ ಇಬ್ಬರೂ ರಾಜ್ಯ ರಾಜಕೀಯದ ಬಗ್ಗೆ, ಪ್ರಚಾರದ ಬಗ್ಗೆ ಕೂಲಂಕುಷವಾಗಿ ಮಾತನಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್, ಡಿಕೆ ಶಿವಕುಮಾರ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಮೊದಲನೇ ಭಾಗ ಎಂದು ಹೇಳಲಾಗಿದ್ದು ಸಂದರ್ಶನ ಮುಂದುವರೆಯುತ್ತದೆ ಎಂದು ಹೇಳಲಾಗಿದೆ.

ರಾಜ್ಯ ರಾಜಕೀಯ, ಜನ ಸ್ಪಂದನೆ, ಹೆಲಿ ಕ್ಯಾಪ್ಟರ್ ಅಪಘಾತ, ಆರೋಗ್ಯ, ಉಚಿತ ಕೊಡುಗೆ ಇತರೆ ಮಹತ್ವದ ವಿಚಾರಗಳ ಬಗ್ಗೆ ಇಬ್ಬರೂ ನಾಯಕರು ಚರ್ಚೆ ಮಾಡಿದ್ದಾರೆ. ಮೊದಲಿಗೆ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಆರೋಗ್ಯವನ್ನು ವಿಚಾರಿಸುವ ಮೂಲಕ ಚರ್ಚೆ ಶುರುವಾಗುತ್ತದೆ.
ಆರೋಗ್ಯ ಹೇಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಚೆನ್ನಾಗಿದೆ, ವೈರಸ್ ಇನ್ಫೆಕ್ಷನ್ ಇದೆ, ಕೈ ನೋವು ಜಾಸ್ತಿಯಾಗಿದೆ ಜ್ವರ ಬೇರೆ ಬಂದಿತ್ತು ಎಂದು ಹೇಳಿದ್ದಾರೆ. ಕೈ ಊತ ಬಂದಿತ್ತು ಈಗ ಸ್ವಲ್ಪ ಕಡಿಮೆಯಾಗಿದೆ, ಈಗ ಆರಾಮಾಗಿದ್ದೇನೆ ಎಂದು ಹೇಳಿದ್ದರು.
ಹೆಲಿಕಾಪ್ಟರ್ ಅಪಘಾತದ ಬಗ್ಗೆ ಡಿಕೆಶಿ ಮಾತು
ಹೆಲಿಕಾಪ್ಟರ್ ಅಪಘಾತದ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿದರು, ಅವತ್ತು ನಾವು ಬದುಕಿದ್ದೇ ಹೆಚ್ಚು ಎಂದು ಹೇಳಿದರು, ಟಿವಿಯವರು ಸಂದರ್ಶನ ಮಾಡ್ತಿದ್ದರು, ತುಂಬ ಎತ್ತರದಲ್ಲಿ ಇದ್ದೆವು, ನಾನು ನೋಡುತ್ತಲೇ ಇದ್ದಾಗ ಹದ್ದು ಎದುರುಗಡೆಯೇ ಬಂದು ಡಿಕ್ಕಿ ಹೊಡೆಯಿತು. ಅದು 4 ರಿಂದ 5 ಕೆಜಿ ಇತ್ತು. ಚೂರು ಹೆಚ್ಚು ಕಡಿಮೆ ಆಗಿದ್ರು ಬದುಕ್ತಾನೆ ಇರಲಿಲ್ಲ, ಪೈಲಟ್ ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ಇಳಿಸಿದರು. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಇವತ್ತು ಭೇಟಿ ಮಾಡಲು ಆಗುತ್ತಿರಲಿಲ್ಲ ಎಂದು ಕರಾಳ ಅನುಭವವನ್ನು ಹಂಚಿಕೊಂಡರು.
ಸಿದ್ದರಾಮಯ್ಯ ಇದಕ್ಕೆ ಪ್ರತಿಕ್ರಿಯೆ ನೀಡಿ, ನನಗೆ ಮರುದಿನ ವಿಚಾರ ತಿಳಿಯಿತು, ನೀವು ತುಂಬಾ ಲಕ್ಕಿ ಎಂದರು. ಇನ್ನು ಈ ಬಾರಿ ಪ್ರಚಾರ ಹೇಗಾಯ್ತು ಎಂದು ಕೇಳಿದ್ದಕ್ಕೆ ಮಾತನಾಡಿದ ಸಿದ್ದರಾಮಯ್ಯ, ಜನರ ಸ್ಪಂದನೆ ಉತ್ತಮವಾಗಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ 5 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ
ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ನಾನು ಪ್ರಚಾರ ಮಾಡಿದ್ದೇನೆ, ಕಲ್ಯಾಣ ಕರ್ನಾಟಕ ಕೂಡ ಕಳೆದ ಬಾರಿಗಿಂತ ಕಾಂಗ್ರೆಸ್ ಜಾಸ್ತಿ ಸ್ಥಾನಗಳಲ್ಲಿ ಗೆಲ್ಲುತ್ತೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಹಳೇ ಮೈಸೂರಿನಲ್ಲಿ ಹೆಚ್ಚಾಗಿ ಪ್ರಚಾರ ಮಾಡಲಾಗಲಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಹಳೇ ಮೈಸೂರು ಸಂಪೂರ್ಣವಾಗಿ ಪ್ರಚಾರ ಮಾಡಿದ್ದೇನೆ, ಬೆಂಗಳೂರು ನಗರದಲ್ಲಿ ಕೂಡ ಪ್ರಚಾರ ಮಾಡಿದ್ದೇನೆ, ನನ್ನ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ ಕನಿಷ್ಠ 5 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನ ನಮ್ಮ ಬಗ್ಗೆ ಸಾಕಷ್ಟು ವಿಶ್ವಾಸ ಇಟ್ಟುಕೊಂಡಿದ್ದಾರೆ, 13ನೇ ತಾರೀಕು ಫಲಿತಾಂಶ ಬಂದ ತಕ್ಷಣ ಮೊದಲನೇ ಕ್ಯಾಬಿನೆಟ್‌ನಲ್ಲೇ ಭರವಸೆಗಳನ್ನು ಜಾರಿಗೆ ತರಬೇಕು ಎಂದು ಹೇಳಿದ್ದಾರೆ. ನಾವು ಬಿಜೆಪಿಯವರ ತರ ಇವತ್ತು ನಾಳೆ ಎಂದು ಹೇಳಕ್ಕಾಗಲ್ಲ, ಸರ್ಕಾರ ಬಂದ ತಕ್ಷಣ ಮೊದಲನೇ ಕ್ಯಾಬಿನೇಟ್‌ನಲ್ಲಿ ಒಪ್ಪಿಗೆ ಪಡೆದು ಆದೇಶ ಹೊರಡಿಸಬೇಕು ಎಂದಿದ್ದಾರೆ.
ಇಬ್ಬರೂ ರಾಜ್ಯದ ಜನತೆಗೆ ಮಾತು ಕೊಟ್ಟಿದ್ದೇವೆ, ಭರವಸೆ ಈಡೇರಿಸದಿದ್ದರೆ ಮತ್ತೆ ವೋಟು ಕೇಳೋಕೆ ಬರಲ್ಲ ಎಂದಿದ್ದೇವೆ, ಆದ್ದರಿಂದ ಮಾಡಬೇಕು, ನರೇಂದ್ರ ಮೋದಿ ಇದನ್ನು ಪ್ರಚಾರ ಮಾಡಿಕೊಂಡು ತಿರುಗುತ್ತಿದ್ದಾರೆ ಎಂದರು.
ಎಲ್ಲಾ ಆಶ್ವಾಸನೆಗಳನ್ನು ಈಡೇರಿಸುತ್ತೇವೆ
ಬಿಜೆಪಿಯವರು ಉಚಿತ ಕೊಡ್ತಿದ್ದೇವೆ ಎಂದು ಟೀಕಿಸುತ್ತಿದ್ದವರು, ಅವರೇ ಈಗ ಉಚಿತ ಸಿಲಿಂಡರ್ ಕೊಡ್ತೀವಿ ಅಂತಿದ್ದಾರೆ ಎಂದು ಡಿಕೆಶಿ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಬಿಜೆಪಿಯವರು ಯಾವತ್ತೂ ಭರವಸೆಗಳನ್ನು ಈಡೇರಿಸಲ್ಲ, ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಅನುಷ್ಠಾನಕ್ಕೆ ತರಲ್ಲ, ಅದನ್ನು ಮರೆತುಬಿಡ್ತಾರೆ. ನಾನು ಅಧಿಕಾರದಲ್ಲಿದ್ದಾಗ ಭರವಸೆಗಳನ್ನು ಈಡೇರಿಸುವ ಬಗ್ಗೆ ನೋಡುತ್ತಿದ್ದೆ, ಈ ಬಾರಿ ಕೂಡ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸಬೇಕು ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ಜನ ನಮ್ಮ ಮೇಲೆ ಭಾರಿ ಪ್ರೀತಿ ಇಟ್ಟುಕೊಂಡಿದ್ದಾರೆ. ಬಿಜೆಪಿ ಅಧಿಕಾರವಾಧಿಯಲ್ಲಿ ಕರವಾಳಿ, ಮಲೆನಾಡಿನಲ್ಲಿ ಒಬ್ಬರೂ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications