Siddaramaiah: ರಿಸಲ್ಟ್ ನೋಡ್ತೀನಿ; ಯೋಗೀಶ್ವರ್ 50 ಸಾವಿರ ಮತಗಳಿಂದ ಗೆಲ್ಬೇಕು: ಸಿಎಂ ಸಿದ್ದರಾಮಯ್ಯ ಕರೆ
ಚನ್ನಪಟ್ಟಣ, ಅಕ್ಟೋಬರ್ 24: ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶ ನಾನೂ ನೋಡ್ತೀನಿ. ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಯೋಗೀಶ್ವರ್ ಅವರು ಜಯಗಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಯೋಗೀಶ್ವರ್ ಪರ ರೋಡ್ ಶೋ ನಲ್ಲಿ ಭಾಗವಹಿಸಿ ಚನ್ನಪಟ್ಟಣ ಜನತೆಗೆ ಕರೆ ನೀಡಿದ್ದು, ಕೆರೆಗಳಿಗೆ ಜೀವದಾನ ಮಾಡಿದ ಯೋಗೀಶ್ವರ್ ಅಭಿವೃದ್ಧಿ ಪರವಾಗಿ ಇರುವುದರಿಂದಲೇ ಐದು ಬಾರಿ ಶಾಸಕರಾಗಿದ್ದು ಕಾಂಗ್ರೆಸ್ಸಿಗೆ ಮರಳಿದ್ದಾರೆ. ಇವರನ್ನು ನಾವೆಲ್ಲಾ ಸ್ವಾಗತಿಸಿದ್ದೇವೆ. ಯೋಗೀಶ್ವರ್ ಗೆಲ್ಲುವ ಮೂಲಕ ಚನ್ನಪಟ್ಟಣದಲ್ಲಿ ನಿಂತು ಹೋಗಿರುವ ಅಭಿವೃದ್ಧಿಗೆ ಮರು ಚಾಲನೆ ನೀಡಿ ಎಂದು ಕರೆ ನೀಡಿದರು.

ಕುಮಾರಸ್ವಾಮಿಗೆ ಚನ್ನಪಟ್ಟಣ ಮರೆತುಹೋಗಿ ಮಂಡ್ಯಕ್ಕೆ ಸೀಮಿತರಾಗಿದ್ದಾರೆ. ಬಿಜೆಪಿ ಒಕ್ಕೂಟದಿಂದ ಕುಮಾರಸ್ವಾಮಿಯೇ ನಿಲ್ಲಲಿ, ನಿಖಿಲ್ ಕುಮಾರಸ್ವಾಮಿಯೇ ನಿಲ್ಲಲಿ, ಶ್ರೀಮತಿ ಅನಿತಾ ಕುಮಾರಸ್ವಾಮಿಯವರೇ ನಿಲ್ಲಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಯೋಗೀಶ್ವರ್ ಅವರೇ ಭರ್ಜರಿ ಜಯಗಳಿಸೋದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.
ನಮ್ಮದು ಜನಕಲ್ಯಾಣದ ಸರ್ಕಾರ. ಈ ಸರ್ಕಾರದಲ್ಲಿ ಯೋಗೀಶ್ವರ್ ಅವರು ಇರಬೇಕು. ಹೆಚ್.ಡಿ.ಕುಮಾರಸ್ವಾಮಿಯವರು ಶಾಸಕರಾಗಿ, ಮುಖ್ಯಮಂತ್ರಿ ಆಗಿದ್ದಾಗಲೂ ಮಾಡದ ಚನ್ನಪಟ್ಟಣದ ಅಭಿವೃದ್ಧಿ ಕೆಲಸಗಳು ಮುಂದಿನ ತಿಂಗಳಿನಿಂದ ಶಾಸಕರಾಗಿ ಯೋಗೀಶ್ವರ್ ಅವರು ಮುಂದುವರೆಸುತ್ತಾರೆ. ಇವತ್ತು ನಾಮಪತ್ರ ಸಲ್ಲಿಕೆ ಬಳಿಕ ನಾನು ಮತ್ತೆ ಚನ್ನಪಟ್ಟಣಕ್ಕೆ ಪ್ರಚಾರಕ್ಕೆ ಬರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಚನ್ನಪಟ್ಟಣ ಕ್ಷೇತ್ರದ ಜನರು ಸಿ.ಪಿ.ಯೋಗೇಶ್ವರ ನ್ನು ಆಶೀರ್ವದಿಸಿ ಬೆಂಬಲಿಸುವ ನಂಬಿಕೆಯಿದೆ. ಕಾಂಗ್ರೆಸ್ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಚನ್ನಪಟ್ಟಣದ ಉಪಚುನಾವಣೆಯಲ್ಲಿ ಜೆಡಿಎಸ್ ನವರು ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ. ಸಿ.ಪಿ. ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದು, ಎರಡು ಬಾರಿ ಶಾಸಕರಾಗಿದ್ದರು. ಬಿಜೆಪಿ ಹಾಗೂ ಎನ್ ಡಿ ಎ ನಿಂದ ಅವರಿಗೆ ಅನ್ಯಾಯವಾದ ಕಾರಣ ಅವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ.
ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನೊಪ್ಪಿ ಮರಳಿ ಬಂದಿರುವ ಯೋಗೇಶ್ವರ್ ನ್ನು ಇಡೀ ಕಾಂಗ್ರೆಸ್ ಪಕ್ಷ ಸ್ವಾಗತಿಸಿದೆ. ಸಿ.ಪಿ.ಯೋಗೇಶ್ವರ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ. ಜೆಡಿಎಸ್ ಬಿಜೆಪಿಯವರು ಚನ್ನಪಟ್ಟಣ ಕ್ಷೇತ್ರಕ್ಕೆ ಯಾರನ್ನೇ ನಿಲ್ಲಿಸಿದರೂ ಕೂಡ, ಕಾಂಗ್ರೆಸ್ ನ ಅಭ್ಯರ್ಥಿಯೇ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಗ್ಯಾರಂಟಿ ಯೋಜನೆಗಳು ನುಡಿದಂತೆ ನಡೆಯುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದರು.
ಚನ್ನಪಟ್ಟಣ ಉಪಚುನಾವಣೆ ನಿಮಿತ್ತ ಚನ್ನಪಟ್ಟಣ ತಹಶೀಲ್ದಾರ್ ರವರ ಕಚೇರಿಯಲ್ಲಿ ಇಂದು ತಮ್ಮ ಪಕ್ಷದ ಅಭ್ಯರ್ಥಿಯಾದ ಸಿ ಪಿ ಯೋಗೇಶ್ವರ್ ರವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಹಲವು ನಾಯಕರಾದ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಬೈರತಿ ಸುರೇಶ್, ಎಂ.ಸಿ.ಸುಧಾಕರ್, ಮಾಜಿ ಸಚಿವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಮಾಜಿ ಸಂಸದರಾದ ಡಿ.ಕೆ.ಸುರೇಶ್ ಸೇರಿ ಹತ್ತಕ್ಕೂ ಹೆಚ್ಚು ಮಂದಿ ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications