ಬೆಂಗಳೂರಿಗೆ ಸೇರಲು ಶಾರ್ಟ್‌ಕಟ್ ದಾರಿ: ಡಿಕೆಶಿಗೆ ಅಶ್ವಥ್ ನಾರಾಯಣ್ ಟಾಂಗ್
ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿಗೆ ಕನಕಪುರವನ್ನು ಸೇರಿಸುವ ಡಿಕೆ ಶಿವಕುಮಾರ್ ಚಿಂತನೆಯನ್ನು ಮಾಜಿ ಸಚಿವ ಸಿಎನ್ ಅಶ್ವಥ್ ನಾರಾಯಣ್ ಖಂಡಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಬೆಂಗಳೂರಿಗೂ ತಮಗೂ ಏನು ಸಂಬಂಧ ಎಂದು ಕೇಳಿದಾಗಲೆಲ್ಲ ಉತ್ತರಿಸಲಾಗದೇ ತಡಬಡಿಸುತ್ತಿದ್ದ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಜತೆ ಸಂಬಂಧ ಕಲ್ಪಿಸಿಕೊಳ್ಳಲು ಶಾರ್ಟ್‌ಕಟ್ ಮಾರ್ಗ ಅನುಸರಿಸಿದಂತಿದೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸಿದರೆ ತಾವು ಬೆಂಗಳೂರಿನವರು ಎಂದು ಹೇಳಿಕೊಳ್ಳಬಹುದು ಎನ್ನುವ ಆಲೋಚನೆ ಅವರದ್ದಾಗಿರಬಹುದು ಎಂದು ಟಾಂಗ್ ನೀಡಿದ್ದಾರೆ.

ಕನಕಪುರವನ್ನು ಬೆಂಗಳೂರಿಗೆ ಸೇರಿಸಿದರೆ ಆಸ್ತಿಯ ಮೌಲ್ಯ ಹತ್ತುಪಟ್ಟು ಹೆಚ್ಚಾಗಲಿದೆ ಎನ್ನುವ ಮೂಲಕ ನಿಮ್ಮ ಕೃಷಿ ಭೂಮಿಯನ್ನು ಮಾರಿಕೊಳ್ಳಿ ಎಂದು ಡಿಕೆ ಶಿವಕುಮಾರ್ ಅವರು ಪರೋಕ್ಷವಾಗಿ ರೈತರಿಗೆ ಕರೆ ನೀಡಿದ್ದಾರೆ. ಕನಕಪುರವನ್ನು ಕನಕಪುರವಾಗಿ ಅಭಿವೃದ್ಧಿಪಡಿಸಲಾಗದ ಡಿಕೆ ಶಿವಕುಮಾರ್ ಅವರಿಗೆ ಈ ಆಲೋಚನೆ ಬಂದಿರುವುದು ಹಾಸ್ಯಾಸ್ಪದ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬೆಂಗಳೂರಿಂದ ಕನಕಪುರ ಮಾರ್ಗವಾಗಿ ದಿಂಡಿಗಲ್ಲಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಿತ್ತಿದ್ದು, ಕನಕಪುರದ ಆರ್ಥಿಕ ಚಟುವಟಿಕೆಗೆ ವೇಗ ಸಿಗಲಿದೆ. ಜಲ ಜೀವನ್ ಮಿಷನ್ ಅಡಿ ರಾಮನಗರದ ಮನೆ ಮನೆಗೂ ಕುಡಿಯುವ ನೀರು ಸೌಲಭ್ಯ ಕಲ್ಪಿಸಿದ್ದೇವೆ ಎಂದು ಹೇಳಿದರು.
ಬೆಂಗಳೂರಿಗೂ ತಮಗೂ ಏನು ಸಂಬಂಧ ಎಂದು ಕೇಳಿದಾಗಲೆಲ್ಲ ಉತ್ತರಿಸಲಾಗದೇ ತಡಬಡಿಸುತ್ತಿದ್ದ @DKShivakumar ಅವರು ಬೆಂಗಳೂರಿನ ಜತೆ ಸಂಬಂಧ ಕಲ್ಪಿಸಿಕೊಳ್ಳಲು ಶಾರ್ಟ್‌ಕಟ್ ಮಾರ್ಗ ಅನುಸರಿಸಿದಂತಿದೆ.
— Dr. C.N. Ashwath Narayan (@drashwathcn) October 26, 2023
ಕನಕಪುರವನ್ನು ಬೆಂಗಳೂರಿಗೆ ಸೇರಿಸಿದರೆ ತಾವು ಬೆಂಗಳೂರಿನವರು ಎಂದು ಹೇಳಿಕೊಳ್ಳಬಹುದು ಎನ್ನುವ ಆಲೋಚನೆ ಅವರದ್ದಾಗಿರಬಹುದು.
1/6
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬೆಂಗಳೂರು ಸ್ಯಾಟಲೈಟ್ ಟೌನ್‌ಶಿಪ್ ರಿಂಗ್ ರೋಡ್ ನಿರ್ಮಾಣವಾಗುತ್ತಿದೆ, ಸಬ್ ಅರ್ಬನ್ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕನಕಪುರದ ಜನತೆಯ ಜೀವನ ಮಟ್ಟ ಸುಧಾರಿಸಲು ಅಭಿವೃದ್ಧಿಯ ಮಾರ್ಗ ಹಿಡಿಯುವುದನ್ನು ಬಿಟ್ಟು ಈ ರೀತಿಯ ಅಡ್ಡ ಮಾರ್ಗ ಹಿಡಿದರೆ ಕಬ್ಬಾಳಮ್ಮ ಮೆಚ್ಚುವಳೇ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸುಧಾರಣೆಗೆ ಆದ್ಯತೆ ನೀಡಿದ್ದೇವೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸುವುದರಿಂದ ಭೂಮಿಯ ಮೌಲ್ಯ ಹೆಚ್ಚಾಗುತ್ತದೆ ಎಂಬ ಕಪೋಲ ಕಲ್ಪಿತ ಆಲೋಚನೆಯನ್ನು ಮುಗ್ಧ ಜನರ ತಲೆಯಲ್ಲಿ ತುಂಬಿ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಬದಲಾಗಿ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದ್ದಾರೆ.
ಕೆಂಗಲ್ ಹನುಮಂತಯ್ಯ, ಶಿವಕುಮಾರ ಸ್ವಾಮೀಜಿಗಳು, ಬಾಲಗಂಗಾಧರನಾಥ ಸ್ವಾಮೀಜಿಯವರು ಜನಿಸಿದ ಪುಣ್ಯ ಭೂಮಿಯಲ್ಲಿ ಸೇವೆ ಮಾಡುವ ಸದವಕಾಶವನ್ನು ಈ ಭಾಗದ ಜನತೆ ತಮಗೆ ಕಲ್ಪಿಸಿದ್ದಾರೆ. ಆದರೆ, ನಾವು ರಾಮನಗರದವರೇ ಅಲ್ಲ ಎನ್ನುವ ನಿಮ್ಮ ಮಾತನ್ನು ರಾಮದೇವರ ಬೆಟ್ಟದ ಮೇಲಿರುವ ಆ ಶ್ರೀರಾಮಚಂದ್ರನು ಮೆಚ್ಚುವನೇ? ಎಂದು ಅವರು ಕೇಳಿದ್ದಾರೆ.












Click it and Unblock the Notifications