ನಾನು ಎನ್ನುವುದು ಅಹಂಕಾರ, ನಾವು ಎನ್ನುವುದು ಸಂಸ್ಕಾರ ಡಿಕೆಶಿಗೆ ಹಿತವಚನ!
ಬೆಂಗಳೂರು, ಜುಲೈ 22: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿದು 7 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದ್ದು, ನಾಪತ್ತೆಯಾದ ಮೂವರಿಗಾಗಿ ಶೋಧ ನಡೆಯುತ್ತಿದೆ. ಸೇನಾಪಡೆಯು ಭಾನುವಾರದಿಂದ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದೆ.
ಮಂಡ್ಯ ಸಂಸದ, ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್. ಡಿ. ಕುಮಾರಸ್ವಾಮಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಕುರಿತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಎಚ್. ಡಿ. ಕುಮಾರಸ್ವಾಮಿ ಸೋಮವಾರ ಹಿತ ವಚನ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಕುಮಾರಸ್ವಾಮಿ, 'ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿದು 7 ಜನ ಸಾವನ್ನಪ್ಪಿದ್ದ ಶಿರೂರು ಗ್ರಾಮಕ್ಕೆ ನಾನು ಶನಿವಾರ ಭೇಟಿ ನೀಡಿದಾಗ ಈ ರಾಜ್ಯದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಲೇವಡಿ ಮಾಡಿದ್ದರು!' ಎಂದು ಹೇಳಿದ್ದಾರೆ.
'ಮಿಲಿಟರಿಯನ್ನು ಕರೆತಂದು ಫೀಲ್ಡಿಗೆ ಇಳಿಸಬೇಕಾಗಿತ್ತು. ಅವರೊಬ್ಬರೇ ಬಂದು ಏನು ಮಾಡುತ್ತಾರೆ ಎಂದು ಲಘುವಾಗಿ ಮಾತನಾಡಿದ್ದರು!!. ಮಾನ್ಯ ಡಿಸಿಎಂ ಅವರು ನನ್ನ ಬಗ್ಗೆ ಲಘುವಾಗಿ ಮಾತನಾಡುವ ಭರದಲ್ಲಿ ನಮ್ಮ ಹೆಮ್ಮೆಯ ಸೇನೆಯನ್ನೂ ಹೀಗಳೆದಿದ್ದರು. ಇದು ದುರ್ದೈವದ ಸಂಗತಿ' ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿದು 7 ಜನ ಸಾವನ್ನಪ್ಪಿದ್ದ ಶಿರೂರು ಗ್ರಾಮಕ್ಕೆ ನಾನು ಶನಿವಾರ ಭೇಟಿ ನೀಡಿದಾಗ ಈ ರಾಜ್ಯದ ಉಪ ಮುಖ್ಯಮಂತ್ರಿ @DKShivakumar ಲೇವಡಿ ಮಾಡಿದ್ದರು!
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 22, 2024
ಮಿಲಿಟರಿಯನ್ನು ಕರೆತಂದು ಫೀಲ್ಡಿಗೆ ಇಳಿಸಬೇಕಾಗಿತ್ತು. ಅವರೊಬ್ಬರೇ ಬಂದು ಏನು ಮಾಡುತ್ತಾರೆ ಎಂದು ಲಘುವಾಗಿ ಮಾತನಾಡಿದ್ದರು!!
ಮಾನ್ಯ ಡಿಸಿಎಂ ಅವರು ನನ್ನ…
'ಜಿಲ್ಲಾಡಳಿತ ರಕ್ಷಣಾ ಕಾರ್ಯ ಮಾಡುತ್ತಿಲ್ಲವೆಂದು ನಾನು ಹೇಳಿಲ್ಲ. ಸರಕಾರವನ್ನೂ ಟೀಕಿಸಿಲ್ಲ. ಆದರೂ, ನೊಂದ ಕುಟುಂಬಗಳ ಕಣ್ಣೀರಿಗೆ ಓಗೊಟ್ಟು ನಮ್ಮ ಹೆಮ್ಮೆಯ ಸೇನೆಯ 40ಕ್ಕೂ ಹೆಚ್ಚು ವೀರಯೋಧರು ರಕ್ಷಣಾ ಕಾರ್ಯಕ್ಕೆ ಧಾವಿಸಿ, ರಕ್ಷಣಾ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಿದ್ದಾರೆ. ಇದಕ್ಕೆ ಡಿಸಿಎಂ ಅವರ ಆಕ್ಷೇಪಣೆ ಇದೆಯಾ? ಈ ಬಗ್ಗೆ ಅವರೇ ಉತ್ತರಿಸಬೇಕು' ಎಂದು ಹೇಳಿದ್ದಾರೆ.
'ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ನಾನು ಎನ್ನುವುದು ಅಹಂಕಾರ, ನಾವು ಎನ್ನುವುದು ಸಂಸ್ಕಾರ.. ಇಷ್ಟು ಸರಳ ಸಾಮರಸ್ಯ ತತ್ತ್ವವೂ ಡಿಸಿಎಂ ಆಗಿರುವ ವ್ಯಕ್ತಿಗೆ ತಿಳಿದಿಲ್ಲ ಎಂದರೆ, ಇದಕ್ಕಿಂತ ತಿಳಿಗೇಡಿತನ ಇನ್ನೊಂದಿಲ್ಲ' ಎಂದು ಪೋಸ್ಟ್ ಹಾಕಿದ್ದು, #ನಮ್ಮಸೇನೆ_ನಮ್ಮಹೆಮ್ಮೆ ಎಂಬ ಹ್ಯಾಷ್‌ಟ್ಯಾಗ್ ಬಳಕೆ ಮಾಡಿದ್ದಾರೆ.
ಮಿಲಿಟರಿ ಕರೆದುಕೊಂಡು ಎಂಬ ಹೇಳಿಕೆ; ಶಿರೂರು ಘಟನಾ ಸ್ಥಳಕ್ಕೆ ಎಚ್. ಡಿ. ಕುಮಾರಸ್ವಾಮಿ ಭೇಟಿ ನೀಡಿದ ಕುರಿತು ಮಾತನಾಡಿದ್ದ ಡಿ. ಕೆ. ಶಿವಕುಮಾರ್, "ಅಂಕೋಲಾಕ್ಕೆ ಹೋಗಿರುವ ಎಚ್. ಡಿ. ಕುಮಾರಸ್ವಾಮಿ ಮಳೆ ಹಾನಿ ಸರಿಪಡಿಸಲು ಎಲ್ಲಿ ಫೀಲ್ಡ್‌ಗೆ ಇಳಿದಿದ್ದಾರೆ. ಅವರೇನು ಮಿಲಿಟರಿ ತಂದು ಕಾರ್ಯಾಚರಣೆ ಮಾಡಿಸಿದ್ದಾರಾ?" ಎಂದು ಪ್ರಶ್ನಿಸಿದ್ದರು.
"ಸುಮ್ಮನೆ ಒಂದು ಭೇಟಿ ನೀಡುವುದಲ್ಲ. ನಾವು ಒಂದು ಗಂಟೆಯಲ್ಲಿ ನಮ್ಮ ಸಚಿವರನ್ನು ಕ್ಯಾಬಿನೆಟ್‌ನಿಂದ ಅಲ್ಲಿಗೆ ಕಳಿಸಿದ್ದೇವೆ. ಕೃಷ್ಣಬೈರೇಗೌಡ, ಮಂಕಾಳ ವೈದ್ಯ ಏನು ಮಾಡಬೇಕೋ ಮಾಡಿದ್ದಾರೆ. ಕುಮಾರಸ್ವಾಮಿ ಬರಲಿ ಬೇಡ ಅಂದವರು ಯಾರು?. ಈ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ. ಅವರು ಹೋಗುವುದಕ್ಕೂ ನಾವ್ಯಾಕೆ ಅಡ್ಡಿ ಮಾಡೋಣ?" ಎಂದು ಹೇಳಿದ್ದರು.
ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು ಮಾಧ್ಯಮದವರೊಂದಿಗೆ ಮಾತನಾಡಿ, "ಶಿರೂರು ಭೂಕುಸಿತದ ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ ಎಸ್.ಡಿ.ಆರ್.ಎಫ್.ನಿಂದ 46 ಜನ, ಎನ್.ಡಿ.ಆರ್.ಎಫ್ ನಿಂದ 24 ಜನ ಹಾಗೂ 44 ಜನ ಮಿಲಿಟರಿಯವರು ಹಾಗೂ ನೌಕಾಪಡೆಯವರೂ ಕೂಡ ಕೈಜೋಡಿಸಿದ್ದಾರೆ" ಎಂದು ಹೇಳಿದ್ದರು.
"ಗೋವಾ ಮತ್ತು ಅಂಕೋಲಾ ನಡುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಭೂ ಕುಸಿತವಾಗಿದೆ. ಭೂ ಕುಸಿತದಿಂದ 10 ಜನ ಕಾಣೆಯಾಗಿದ್ದಾರೆ. ಅದರಲ್ಲಿ ಏಳು ಜನರ ಹೆಣಗಳು ಪತ್ತೆಯಾಗಿದ್ದು ಇನ್ನೂ ಮೂವರು ಕಾಣೆಯಾಗಿದ್ದು ಅವರ ಪತ್ತೆಗಾಗಿ ಪರಿಹಾರ ಕಾರ್ಯಾಚರಣೆ ಜಾರಿಯಲ್ಲಿದೆ" ಎಂದು ತಿಳಿಸಿದ್ದರು.
"ಘಟನೆಯಲ್ಲಿ ಖಾಲಿ ಗ್ಯಾಸ್ ಟ್ಯಾಂಕರ್ ಹಾಗೂ ಭರ್ತಿಯಾಗಿರುವ ಗ್ಯಾಸ್ ಟ್ಯಾಂಕರ್ ಕೂಡ ಹಾನಿಗೀಡಾಗಿವೆ. ಅಲ್ಲಿಯೇ ವಾಸವಾಗಿರುವ ಒಂದೇ ಕುಟುಂಬದವರು ಟೀ ಅಂಗಡಿಯನ್ನು ಇಟ್ಟುಕೊಂಡಿದ್ದರು. ಅವರಲ್ಲಿ ಐವರು ಭೂ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ರಿಸ್ಕ್ ಆಪರೇಶನನ್ನು ತ್ವರಿತವಾಗಿ ಮಾಡಬೇಕೆಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಪಷ್ಟವಾಗಿ ಸೂಚಿಸಿದ್ದೇನೆ" ಎಂದು ತಿಳಿಸಿದ್ದಾರೆ.












Click it and Unblock the Notifications