ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

VIDEO: ಸಿಎಂ ಯಡಿಯೂರಪ್ಪ ಬದಲಾವಣೆ ಕುರಿತು ಸಿದ್ದಗಂಗಾ ಶ್ರೀ ಮಹತ್ವದ ಹೇಳಿಕೆ!

|
Google Oneindia Kannada News

ಬೆಂಗಳೂರು, ಜು. 21: ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಠಾಧೀಶರ ಬೆಂಬಲ ಹೆಚ್ಚಾಗುತ್ತಿದೆ. ಪಕ್ಷಬೇಧ ಬಿಟ್ಟು ಲಿಂಗಾಯತ ಸಮುದಾಯದ ನಾಯಕರು ಯಡಿಯೂರಪ್ಪ ಅವರ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಜ್ಯದ ಎಲ್ಲ ಸಮುದಾಯಗಳ ಮಠಾಧೀಶರೂ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಗೆ ಸ್ವಾಮೀಜಿಗಳು ಭೇಟಿ ನೀಡಿದ್ದಾರೆ. ನಂತರ ಸಿಎಂ ಗೃಹ ಕಚೇರಿ ಕೃಷ್ಣಾಕ್ಕೂ ಹಲವು ಮಠಾಧೀಶರು ಭೇಟಿ ನೀಡುತ್ತಿದ್ದಾರೆ. ಜೊತೆಗೆ ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಹಲವು ಮಠಾಧೀಶರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ನಿನ್ನೆ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದ್ದರು.

ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಬಿಜೆಪಿ ಹೈಕಮಾಂಡ್ ಮೇಲೆ ಮಠಾಧೀಶರು ಒತ್ತಡ ಹಾಕಿದ್ದಾರೆ. ಜೊತೆಗೆ 'ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜಯವಾಗಲಿ' ಎಂದು ಘೋಷಣೆ ಹಾಖುವ ಮೂಲಕ ಕೆಲವು ಸ್ವಾಮೀಜಿಗಳು ಅಚ್ಚರಿ ಮೂಡಿಸಿದ್ದಾರೆ. ತಮ್ಮನ್ನು ಭೇಟಿ ಮಾಡಿದ್ದ ಸ್ವಾಮೀಜಿಗಳಿಗೆ ಸಿಎಂ ಯಡಿಯೂರಪ್ಪ ಏನು ಹೇಳಿದ್ದಾರೆ? ಮುಂದಿದೆ ಮಾಹಿತಿ.

ಪಕ್ಷಕ್ಕೆ ನಾನು ಮೋಸ ಮಾಡುವುದಿಲ್ಲ

ಪಕ್ಷಕ್ಕೆ ನಾನು ಮೋಸ ಮಾಡುವುದಿಲ್ಲ

ಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ ಯಡಿಯೂರಪ್ಪ ಅವರನ್ನು ಮಠಾಧೀಶರುಗಳು ಭೇಟಿಯಾದಾಗ ತಮ್ಮ ಮನದ ಇಂಗಿತವನ್ನು ಸಿಎಂ ಯಡಿಯೂರಪ್ಪ ಹಂಚಿಕೊಂಡಿದ್ದಾರೆ. "ನಾನು ಈ ಸಂದರ್ಭದಲ್ಲಿ ಹೆಚ್ಚು ಮಾತನಾಡುವುದಿಲ್ಲ. ಹೈಕಮಾಂಡ್ ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮನ್ನು ಭೇಟಿಯಾಗಿದ್ದ ಸ್ವಾಮೀಜಿಗಳಿಗೆ ಹೇಳಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಇದೇ ಸಂದರ್ಭದಲ್ಲಿ ಮಠಾಧೀಶರಿಗೆ ಯಡಿಯೂರಪ್ಪ ತಿಳಿಸಿದ್ದಾರಂತೆ.

"ನಾನು ಪುಣ್ಯಶಾಲಿ ಇಷ್ಟೊಂದು ಮಠಾಧೀಶರುಗಳು ನನಗೆ ಬೆಂಬಲ ಕೊಡುತ್ತಿದ್ದೀರಿ. ತಾಯಿ ಪಕ್ಷಕ್ಕೆ ನಾನು ಮೋಸ ಮಾಡುವುದಿಲ್ಲ. ತಾಯಿಗೆ ನಾನು ಬೆಲೆ ಕೊಡಬೇಕಾಗುತ್ತೆ" ಎಂದೆಲ್ಲ ಯಡಿಯೂರಪ್ಪ ಅವರು ಸ್ವಾಮೀಜಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಸಿದ್ದಗಂಗಾ ಮಠದ ಸ್ವಾಮೀಜಿ ಹೇಳಿಕೆ

ಸಿದ್ದಗಂಗಾ ಮಠದ ಸ್ವಾಮೀಜಿ ಹೇಳಿಕೆ

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾಧ್ಯಮಗಳೊಂದಿಗೆ ಮಾತನಾಡಿದರು. "ಇಂದು ಯಡಿಯೂರಪ್ಪ ಅವರನ್ನು ಭೇಟಿ ಮಾದ್ದೇವೆ. ಕಳೆದು ಒಂದು ವಾರದಿಂದ ಸಿಎಂ ಬದಲಾವಣೆ ಬಗ್ಗೆ ಸುದ್ದಿ ಬರುತ್ತಿದೆ. ಆದರೆ ಯಡಿಯೂರಪ್ಪ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಶಕ್ತಿ ಮೀರಿ ಕೆಲಸ ಮಾಡುವ ಅವರನ್ನು ಯಾಕೆ ಬದಲಾವಣೆ ಮಾಡುತ್ತಾರೆ? ಅದಕ್ಕಾಗಿ ಅವರು ಉಳಿದಿರುವ ಮುಂದಿನ ಅವಧಿ ಪೂರ್ಣಗೊಳಿಸಬೇಕು ಎಂದು ನಾವೆಲ್ಲರೂ ಬಂದಿದ್ದೇವೆ ಎಂದು ಸಿದ್ದಲಿಂಗ ಶ್ರೀಗಳು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಏನು ಹೇಳಿದ್ದಾರೆ ಎಂಬುದದನ್ನೂ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದ್ದಾರೆ.

ರಾಜೀನಾಮೆ ಬಗ್ಗೆ ಯಡಿಯೂರಪ್ಪ ಏನು ಹೇಳಿದ್ರು?

ರಾಜೀನಾಮೆ ಬಗ್ಗೆ ಯಡಿಯೂರಪ್ಪ ಏನು ಹೇಳಿದ್ರು?

"ರಾಜೀನಾಮೆ ಬಗ್ಗೆ ಯಡಿಯೂರಪ್ಪ ಏನು ಹೇಳಿಲ್ಲ" ಎಂದು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ಹೇಳಿದ್ದಾರೆ. "ನಾವೆಲ್ಲರೂ ಇಷ್ಡೇ ಹೇಳುತ್ತೇವೆ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಈಗ ಇಂತಹ ಸಂದಿಗ್ಧ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸಿಎಂ ಬದಲಾವಣೆ ಮಾಡುವುದು ಸರಿಯಲ್ಲ. ನಾವು ಯಾರು ರಾಜಕಾರಣಿಗಳ ಜೊತೆ ಓಡಾಡುತ್ತಿಲ್ಲ. ಆದರೆ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಬೇಕು ಎಂಬದು ನಮ್ಮ ಅಪೇಕ್ಷೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಜಾತಿ ಇಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಆಗುವ ತೀರ್ಮಾನವೇ ಮುಖ್ಯಮಂತ್ರಿ ನಿರ್ಧಾರ ಆಗುವುದು. ಯಡಿಯೂರಪ್ಪ ಅಂತ ಅಲ್ಲ ಬೇರೆ ಇದ್ದರೂ ಅವರಿಗೆ ನಮ್ಮ ಬೆಂಬಲವಿದೆ. ಶಾಸಕಾಮಗ ಪಕ್ಷದ ಸಭೆಯಲ್ಲಿ ಆಯ್ಕೆಯಾದವರು ಪೂರ್ಣಾವಧಿಯಾಗಿ ಕೆಲಸ ಮಾಡಬೇಕು ಎಂಬುದು ನಮ್ಮ ಅಪೇಕ್ಷೆ" ಎಂದು ಸಿದ್ದಲಿಂಗ ಶ್ರೀಗಳು ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ಎಚ್. ವಿಶ್ವನಾಥ್ ಹೇಳಿಕೆಗೆ ಸಿದ್ದಗಂಗಾ ಶ್ರೀ ತಿರುಗೇಟು

ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಅವರ ಹೇಳಿಕೆಗೆ ಸಿದ್ದಗಂಗಾ ಶ್ರೀಗಳು ತಿರುಗೇಟು ಕೊಟ್ಟಿದ್ದಾರೆ. "ನಮ್ಮ ಮಠಗಳು ಯಾವುದೇ ರಾಜಕೀಯ ಮಾಡುತ್ತಿಲ್ಲ. ಯಾವುದೇ ರಾಜಕೀಯ ಪಕ್ಷದ ಜೊತೆಯೂ ನಾವಿಲ್ಲ. ರಾಜಕಾರಣಿಗಳ ಜೊತೆಯೂ ನಾವು ಇಲ್ಲ. ಎಲ್ಲಾ ಮುಖ್ಯಮಂತ್ರಿಗಳಿಗೂ ನಾವು ಬೆಂಬಲ ಕೊಟ್ಟಿದ್ದೇವೆ. ನಾವು ಕೊರೊನಾ ಸಂಕಷ್ಟದ ಸಮಯದಲ್ಲಿ ಮಠಗಳನ್ನು ಬಂದ್ ಮಾಡಿರಲಿಲ್ಲ. ಕೊರೊನಾ ಸಮಯದಲ್ಲಿ ಮಠಗಳು ಕೆಲಸ ಮಾಡಿವೆ. ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸಿದ್ದೇವು. ನಾವು ಯಾವುದೇ ರಾಜಕಾರಣಿ ಪರ ಇಲ್ಲ. ಆದ್ರೆ ಯಡಿಯೂರಪ್ಪ ಅವಧಿ ಪೂರ್ಣ ಮಾಡಲು ಅವಕಾಶ ಕೊಡಬೇಕು ಅನ್ನೋದು ನಮ್ಮ ಅಭಿಪ್ರಾಯ" ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ವಿಶ್ವನಾಥ್ ಅವರ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜೊತೆಗೆ ತಿಪಟೂರು ಷಡಾಕ್ಷರಿ ರುದ್ರಮುನಿ ಸ್ವಾಮೀಜಿ ಕೂಡ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬುದು ಮುಂದಿದೆ.

ಬ್ಯಾಟರಿ ಹಿಡಿದು ಬಿಜೆಪಿ ಹುಡುಕಬೇಕಾಗುತ್ತದೆ!

ಬ್ಯಾಟರಿ ಹಿಡಿದು ಬಿಜೆಪಿ ಹುಡುಕಬೇಕಾಗುತ್ತದೆ!

"ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದವರಲ್ಲಿ ಕೇವಲ ವೀರಶೈವ ಮಠದವರು ಮಾತ್ರವಿಲ್ಲ. ಇಲ್ಲಿ ಎಲ್ಲಾ ಮಠಾಧೀಶರೂ ಇದ್ದಾರೆ. ಹೀಗಾಗಿ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಆಗಿ ಮುಂದುವರೆಯಬೇಕು. ಹೈಕಮಾಂಡ್ ಮುಂದೆ ಅವರನ್ನು ಬದಲಾವಣೆ ಮಾಡಿದರೆ, ರಾಜ್ಯದಲ್ಲಿ ಬಿಜೆಪಿ ಎಲ್ಲಿದೆ? ಅಂತಾ ಬ್ಯಾಟರಿ ಲೈಟ್ ಬಿಟ್ಟು ಹುಡುಕಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅಂತಹ ಪರಿಸ್ಥಿತಿ ಬಿಜೆಪಿಗೆ ಬರುತ್ತದೆ" ಎಂದು ಕೇಂದ್ರ ಬಿಜೆಪಿ ನಾಯಕರಿಗೆ ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಎಚ್ಚರಿಕೆ ಕೊಟ್ಟಿದ್ದಾರೆ.

ಇನ್ನು ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ್ದಾರೆ. ಅವರೂ ಕೂಡ ಯಡಿಯೂರಪ್ಪ ಅವರವ ಕುರಿತು ಮಾತನಾಡಿದ್ದಾರೆ. ಅವರು ಹೇಳಿರುವುದು ಮುಂದಿದೆ.

ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ

ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಿಎಂ ಬದಲಾವಣೆ ಮಾಡದಂತೆ ಆಗ್ರಹಿಸಿದ್ದಾರೆ. ಭೇಟಿಯ ಬಳಿಕ ಮಾತನಾಡಿರುವ ಅವರು, "ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಉಳಿದಿರುವ ಎರಡು ವರ್ಷಗಳ ಕಾಲ ಅವಧಿ ಪೂರ್ಣಗೊಳಿಸಲು ಅವಕಾಶ ಕೊಡಬೇಕು" ಎಂದು ಈಶ್ವರಾನಂದಪುರಿ ಸ್ವಾಮೀಜಿ ಮನವಿ ಮಾಡಿದ್ದಾರೆ.

ಜೊತೆಗೆ, "ಅವರು ಕೇವಲ ಲಿಂಗಾಯತ ಸಮುದಾಯಕ್ಕೆ ಮಾತ್ರವಲ್ಲ, ಅವರು ಎಲ್ಲಾ ವರ್ಗಗಳ ನಾಯಕರು. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರ ಶ್ರಮ ಬಹಳ ದೊಡ್ಡದಿದೆ. ಸಿಎಂ ಯಡಿಯೂರಪ್ಪ ಅವರು ಪಕ್ಷಾತೀತ ನಾಯಕ. ಹೀಗಾಗಿ ಅವರನ್ನು ಎರಡು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಸುವ ಮೂಲಕ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಅವರಿಗೆ ಅವಕಾಶ ಮಾಡಿಕೊಡಬೇಕು" ಎಂದು ಈಶ್ವರಾನಂದಪುರಿ ಸ್ವಾಮೀಜಿ ಒತ್ತಾಯಿಸಿದ್ದಾರೆ.

ರಾಜಕೀಯಕ್ಕಿಂತ ಧಾರ್ಮಿಕ ಒತ್ತಡವೇ ಹೆಚ್ಚಾಗುತ್ತಿದೆ

ರಾಜಕೀಯಕ್ಕಿಂತ ಧಾರ್ಮಿಕ ಒತ್ತಡವೇ ಹೆಚ್ಚಾಗುತ್ತಿದೆ

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇವತ್ತು ಮತ್ತು ನಿನ್ನೆ ಶಾಸಕರಿಗಿಂತಲೂ ಹೆಚ್ಚಾಗಿ ಮಠಾಧೀಶರೇ ಭೇಟಿ ಮಾಡಿ ಬೆಂಬಲ ಸೂಚಿಸಿದ್ದಾರೆ. ಈಗಲೂ ಕೂಡ ಹಲವು ಸ್ವಾಮೀಜಿಗಳು ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಿಎಂ ಗೃಹಕಚೇರಿ ಕೃಷ್ಣಾಕ್ಕೆ ಆಗಮಿಸುತ್ತಿದ್ದಾರೆ. ನಿನ್ನೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದ ಮೂವತ್ತಕ್ಕೂ ಹೆಚ್ಚು ಶ್ರೀಗಳ ನಿಯೋಗದೊಂದಿಗೆ ಮತ್ತೆ ಇಂದೂ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು.

ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಮೇಲೆ ರಾಜಕೀಯಕ್ಕಿಂತ ಧಾರ್ಮಿಕ ಒತ್ತಡ ತೀರಾ ಹೆಚ್ಚಾಗುತ್ತಿದೆ. ಅದಕ್ಕೆ ಯಡಿಯೂರಪ್ಪ ಅವರು ಹೈಕಮಾಂಡ್ ಮೀರಿ ಬೆಳೆದಿರುವ ನಾಯಕ ಎಂಬುದು ಕೂಡ ಒಂದು ಕಾರಣ. ಒಟ್ಟಾರೆ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುವುದು ಅಂದುಕೊಂಡಷ್ಟು ಸುಲಭವಿಲ್ಲ ಎಂಬ ಸಂದೇಶ ಬಿಜೆಪಿ ಹೈಕಮಾಂಡ್‌ಗೆ ರವಾನೆ ಆಗುತ್ತಿದೆ. ಈ ಎಲ್ಲ ಬೆಳವಣಿಗೆಗೆಳ ಫಲಿತಾಂಶಕ್ಕೆ ಜುಲೈ 26ರ ವರೆಗೆ ಜನಸಾಮಾನ್ಯರು ಕಾಯಬೇಕಾಗಿದೆ!

English summary
All Community Seers from across Karnataka meet BS Yediyurappa at his official residence Krishna and home office Kaveri in Bengaluru. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X