ಎರಡನೇ ಉಪಲೋಕಾಯುಕ್ತ ಭರ್ತಿ ಪ್ರಕ್ರಿಯೆ ಆರಂಭ
ಬೆಂಗಳೂರು, ಜನವರಿ 04: ಸದ್ಯ ಖಾಲಿ ಇರುವ ಎರಡನೇ ಉಪಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.
ಎರಡು ಉಪ ಲೋಕಾಯುಕ್ತ ಹುದ್ದೆಗಳ ಪೈಕಿ ಒಂದು ಹುದ್ದೆ ಭರ್ತಿಯಾಗದಿರುವುದರಿಂದ ಮತ್ತೊಬ್ಬರಿಗೆ ಕಾರ್ಯಭಾರ ಹೆಚ್ಚಿದೆ. ಹೀಗಾಗಿ, ಇನ್ನೊಂದು ಉಪಲೋಕಾಯುಕ್ತರ ಹುದ್ದೆಗೆ ನೇಮಕ ಮಾಡಬೇಕು ಎಂದು ಕೋರಿ ಹಿರಿಯ ವಕೀಲ ಬಸವರಾಜ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಉಲ್ಲೇಖಿಸಿದರು.
ಫೆಬ್ರವರಿಗೆ ಮುಂದೂಡಿಕೆ; ಆಗ ಸರ್ಕಾರಿ ವಕೀಲರು, ವಿರೋಧ ಪಕ್ಷದ ನಾಯಕರ ನೇಮಕವಾಗದಿದ್ದರಿಂದ ಉಪಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿತ್ತು. ಈಗ ಪ್ರಕ್ರಿಯೆ ಆರಂಭವಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಸಿಜೆ ಅವರು ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದು, ಅರ್ಜಿಯ ವಿಚಾರಣೆಯನ್ನು ಫೆಬ್ರವರಿಗೆ ಮುಂದೂಡಿದರು.
ಉಪ ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾ. ಬಿ. ಎಸ್. ಪಾಟೀಲ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಒಂದು ಉಪ ಲೋಕಾಯುಕ್ತ ಹುದ್ದೆ ಖಾಲಿ ಇದೆ. ಎರಡು ಉಪ ಲೋಕಾಯುಕ್ತ ಹುದ್ದೆಗಳ ಪೈಕಿ ಒಂದರಲ್ಲಿ ನಿವೃತ್ತ ನ್ಯಾ. ಕೆ. ಎನ್. ಫಣೀಂದ್ರ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ಆಯ್ಕೆಗೆ ಸಮಿತಿ ಇದೆ. ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವಾರು ಜನರು ಈ ಸಮಿತಿಯಲ್ಲಿದ್ದಾರೆ. ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆ ಮೇ ತಿಂಗಳಿನಲ್ಲಿ ಮುಗಿಯಿತು. ಬಳಿಕ ವಿರೋಧ ಪಕ್ಷವಾದ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ವಿಳಂಬ ಮಾಡಿದ ಕಾರಣಕ್ಕೆ ಸಮಿತಿ ಸಭೆ ನಡೆಯಲಿಲ್ಲ.












Click it and Unblock the Notifications