9-12ನೇ ತರಗತಿ ವಿದ್ಯಾರ್ಥಿಗಳಿಗೆ BMTC ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
ಬೆಂಗಳೂರು, ಆಗಸ್ಟ್ 21: ಬಿಎಂಟಿಸಿ ಬಸ್‌ಗಳಲ್ಲಿ 9-12ನೇ ತರಗತಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ವಿದ್ಯಾರ್ಥಿಗಳು ಕಳೆದ ವರ್ಷದ ಸ್ಮಾರ್ಟ್ ಪಾಸ್ ಅಥವಾ ಈ ವರ್ಷದ ಶೈಕ್ಷಣಿಕ ದಾಖಲಾತಿ ರಶೀತಿ ತೋರಿಸಿ ಪ್ರಯಾಣಿಸಬಹುದಾಗಿದೆ.
ಮುಂದಿನ ಸೋಮವಾರ(ಆ.23) ರಾಜ್ಯಾದ್ಯಂತ 9ರಿಂದ 12ನೇ ತರಗತಿಯವರೆಗೆ ಶಾಲಾ-ಕಾಲೇಜುಗಳು ಪ್ರಾರಂಭವಾಗಲಿವೆ. ಈ ಸಂದರ್ಭದಲ್ಲಿ ಶಾಲೆಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸರ್ಕಾರ ಮತ್ತು ಖಾಸಗಿ ಶಾಲೆಗೆ ಮಕ್ಕಳನ್ನು .ಯಾವ ರೀತಿ ಕರೆತರಬೇಕು, ತರಗತಿಯಲ್ಲಿ ಯಾವ ರೀತಿ ಕೂರಿಸಬೇಕು, ಮಕ್ಕಳು ಶಾಲೆಯಲ್ಲಿ ಯಾವ ರೀತಿ ಇರಬೇಕು, ಶಿಕ್ಷಕರು ಯಾವ ರೀತಿ ಮುಂಗಾಗ್ರತಾ ಕೊರೋನಾ ನಿಯಮಗಳನ್ನು ಪಾಲಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಪಾಲಕರ ಅನುಮತಿ ಪಡೆದೇ ಶಾಲೆಗೆ ಬರಬೇಕು ಎಂದು ಹೇಳಿದ್ದಾರೆ.

ಸೋಮವಾರದಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರ ಜೊತೆ ಬೆಂಗಳೂರು ಮತ್ತು ಕೆಲವು ಜಿಲ್ಲೆಗಳ ಶಾಲೆಗಳಿಗೆ ಭೇಟಿ ನೀಡಿ ನೋಡುತ್ತೇನೆ. ಕೋವಿಡ್ ಸುರಕ್ಷತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಮಕ್ಕಳು ಶಾಲೆಗೆ ಬಂದು ಕಲಿಕೆಯಾಗಬೇಕು, ಒಂದೂವರೆ ವರ್ಷದಿಂದ ಮಕ್ಕಳು ಶಾಲೆಗೆ ಹೋಗಿಲ್ಲ, ನಿಧಾನವಾಗಿ ಅವರು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಶಾಲೆ ಪ್ರಾರಂಭಿಸುತ್ತಿದ್ದೇವೆ ಎಂದರು.
ಲಸಿಕೆ ಹಾಕಿಸಿಕೊಳ್ಳಿ: ಪೋಷಕರು ನಿರ್ಲಕ್ಷ್ಯ ತೋರದೆ, ಹಿಂಜರಿಯದೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ, ಮಕ್ಕಳ ಆರೋಗ್ಯ ಬಗ್ಗೆ ಗಮನ ಇರಲಿ, ಶಾಲೆಗೆ ಹೋಗಿ ಬಂದ ಮೇಲೆ ಮಕ್ಕಳ ಮೇಲೆ ನಿಗಾ ಇರಿಸಿ ಎಂದು ಮುಖ್ಯಮಂತ್ರಿ ಕಿವಿಮಾತು ಹೇಳಿದರು.

ಸಚಿವ ಆರ್ ಅಶೋಕ್ ಮಾತನಾಡಿ, ಇದೇ 23ರಿಂದ ಶಾಲಾ ಕಾಲೇಜುಗಳು ಆರಂಭವಾಗಲಿವೆ, ತರಗತಿಗಳಲ್ಲಿ ಎಷ್ಟು ವಿದ್ಯಾರ್ಥಿಗಳು ಇರಬೇಕು ಎಂಬ ಬಗ್ಗೆಯೂ ನಿರ್ಧರಿಸಲಾಗಿದೆ. ಆ ಮೂಲಕ ಕೊರೊನಾ ಸೋಂಕು ಹರಡದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಬಿಎಂಪಿ, ಸರ್ಕಾರಿ ಶಾಲೆ ತೆರೆಯಬೇಕು, ಆದರೆ, ತರಗತಿಯಲ್ಲಿ ಹೆಚ್ಚು ಮಕ್ಕಳು ಇರಬಾರದು ಎಂಬ ಆದೇಶ ಹೊರಡಿಸಲಾಗಿದೆ. ಸದ್ಯಕ್ಕೆ 9-12ನೇ ತರಗತಿಗಳನ್ನು ಆರಂಭಿಸಿ ಪ್ರಾಯೋಗಿಕವಾಗಿ ನೋಡಿಕೊಂಡು ಬಳಿಕ ಹಂತಹಂತವಾಗಿ ಬಾಕಿ ತರಗತಿಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಶಾಲಾ ವಾಹನಗಳಲ್ಲಿಯೂ ಸಹ ಸಾಮಾಜಿಕ ಅಂತರ ಕಾಪಾಡಬೇಕು. ಕೊಠಡಿಗಳಲ್ಲಿ ಎಲ್ಲ ವಸ್ತುಗಳನ್ನು ಸ್ಯಾನಿಟೈಸ್ ಮಾಡಬೇಕು. ಮಕ್ಕಳ ಆಗಮನ ಮತ್ತು ನಿರ್ಗಮನದ ದಾರಿ ಪ್ರತ್ಯೇಕವಾಗಿ ಮಾಡಬೇಕು.
ಶಾಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಶಾಲೆಯ ಅವರಣದಲ್ಲಿ ಬಾಕ್ಸ್ ನಿರ್ಮಾಣ ಮಾಡಬೇಕು. ವಿದ್ಯಾರ್ಥಿಗಳು ಸಾಮಾಜಿಕ ಅಂತರದೊಂದಿಗೆ ಶಾಲೆ ಪ್ರವೇಶ ಮಾಡಬೇಕು. ಶಾಲಾ ಪ್ರವೇಶಕ್ಕೆ ಮೊದಲು ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು.
ಸುಮಾರು ಒಂದು ವರ್ಷದಿಂದ ಶಾಲೆ ತೆರೆಯದ ಕಾರಣ ಶಾಲಾರಂಭಕ್ಕೂ ಮೊದಲು ಇಡಿ ಶಾಲೆ ಸ್ವಚ್ಛಗೊಳಿಸಬೇಕು. ಶಾಲೆಯ ಇಡಿ ಅವರಣ ಸ್ಯಾನಿಟೈಸ್ ಮಾಡಬೇಕು. ಕುಡಿಯುವ ನೀರಿನ ಸೌಲಭ್ಯ ಮಾಡಬೇಕು.
ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಶಾಲೆಯ ಶೌಚಾಲಯ ಶುಚಿಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು. ಶಾಲಾ ಕೊಠಡಿ, ಅಡುಗೆ, ದಾಸ್ತಾನು ಕೊಠಡಿ ಎಲ್ಲವನ್ನು ಶುಚಿಗೊಳಿಸಬೇಕು.












Click it and Unblock the Notifications