ಅಮೂಲ್‌ಗಿಂತ ನಂದಿನಿಯೇ ಮೇಲು: ಡಿಕೆ ಶಿವಕುಮಾರ್
ಬೆಂಗಳೂರು, ಏಪ್ರಿಲ್ 8: ಕರ್ನಾಟಕದಲ್ಲಿ ಅಮುಲ್ ವಿರುದ್ಧ ಅಭಿಯಾನದ ಕಾವು ಹೆಚ್ಚಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶನಿವಾರ ನಮಗೆ ಅಮುಲ್‌ಗಿಂತ ನಂದಿನಿ ಹಾಲು ಉತ್ತಮ ಬ್ರಾಂಡ್. ನಾವು ಕರ್ನಾಟಕದ ಹಾಲು ಮತ್ತು ರೈತರನ್ನು ರಕ್ಷಿಸುತ್ತೇವೆ ಎಂದು ಹೇಳಿದರು.
ಸುದ್ದಿ ಸಂಸ್ಥೆ ಎಎನ್‌ಎಯೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಗುಜರಾತ್ ಮೂಲದ ಡೈರಿ ಸಹಕಾರಿ ಸೊಸೈಟಿ ಅಮುಲ್ ಕರ್ನಾಟಕ ಡೈರಿ ಮಾರುಕಟ್ಟೆಗೆ ಪ್ರವೇಶಿಸಿರುವುದನ್ನು ಟೀಕಿಸಿದ ಅವರು, "ನಾವು ನಮ್ಮ ಹಾಲು ಮತ್ತು ನಮ್ಮ ರೈತರನ್ನು ರಕ್ಷಿಸಲು ಬಯಸುತ್ತೇವೆ. ರಾಜ್ಯದಲ್ಲಿ ಈಗಾಗಲೇ ನಂದಿನಿಯನ್ನು ಹೊಂದಿದ್ದೇವೆ. ನಮ್ಮ ನಂದಿನಿ ಅಮುಲ್‌ಗಿಂತ ಉತ್ತಮ ಬ್ರಾಂಡ್ ಆಗಿದೆ. ಹಾಗಾಗಿ ನಮಗೆ ಯಾವುದೇ ಅಮುಲ್ ಅಗತ್ಯವಿಲ್ಲ. ನಮ್ಮ ನೀರು, ನಮ್ಮ ಹಾಲು ಮತ್ತು ನಮ್ಮ ಮಣ್ಣು ಬಲವಾಗಿದೆ" ಎಂದರು.

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ರಾಜ್ಯದಲ್ಲಿ ಹಾಲು ಮತ್ತು ಮೊಸರನ್ನು 'ನಂದಿನಿ' ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತದೆ. ಬುಧವಾರ ಅಮುಲ್ ತನ್ನ ಡೈರಿ ಉತ್ಪನ್ನಗಳ ವಿತರಣೆಯನ್ನು ಸಕ್ರಿಯಗೊಳಿಸಲು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲಾಗುವುದು ಎಂದು ಬೆಂಗಳೂರಿನಲ್ಲಿ ತನ್ನ ಪ್ರಾರಂಭವನ್ನು ಘೋಷಿಸಿತ್ತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್‌ನಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದಾಗ ಕೆಎಂಎಫ್ ಮತ್ತು ಗುಜರಾತ್‌ನ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ನಡುವೆ ವಿಲೀನದ ಊಹಾಪೋಹಗಳನ್ನು ಹುಟ್ಟುಹಾಕಿದಾಗಿನಿಂದ ಅಮುಲ್ ಮತ್ತು ನಂದಿನಿ ನಡುವಿನ ಜಗಳ ಉಲ್ಬಣಗೊಂಡಿದೆ. #GoBackAmul ಮತ್ತು #SaveNandini ಎಂಬ ಹ್ಯಾಶ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ತೆರೆದುಕೊಳ್ಳುವುದರೊಂದಿಗೆ ಈ ಹೋರಾಟವು ಸಾಮಾಜಿಕ ಮಾಧ್ಯಮದಲ್ಲಿಯೂ ಹರಡಿದೆ.
ಶುಕ್ರವಾರ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮುಲ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕನ್ನಡಿಗರನ್ನು ಒತ್ತಾಯಿಸಿದ್ದರು. ಹಿಂದಿ ಹೇರಿಕೆಯಿಂದ ಭಾಷಾ ದ್ರೋಹ, ರಾಜ್ಯದ ಗಡಿಯಲ್ಲಿ ಅತಿಕ್ರಮ ಪ್ರವೇಶ ಮಾಡುವ ಮೂಲಕ ಭೂ ದ್ರೊ ⁇ ಹದ ಜತೆಗೆ ಇದೀಗ ಬಿಜೆಪಿ ಸರ್ಕಾರ ರೈತರಿಗೆ ಜೀವನಾಧಾರವಾಗಿರುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಬಂದ್ ಮಾಡುವ ಮೂಲಕ ರೈತರಿಗೆ, ದೇಶದಲ್ಲಿ ಲಕ್ಷಾಂತರ ಹೈನುಗಾರ ಕುಟುಂಬಗಳಿಗೆ ದ್ರೋಹ ಬಗೆಯಲು ಹೊರಟಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಅಮುಲ್ ಹಿಂಬಾಗಿಲ ಪ್ರವೇಶದ ಮೂಲಕ ಕೆಎಂಎಫ್ ಅನ್ನು ಮುಗಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಜನತಾ ದಳ (ಜಾತ್ಯತೀತ) ಕೂಡ ಅಮುಲ್ ಕರ್ನಾಟಕಕ್ಕೆ ಕಾಲಿಡುವುದನ್ನು ಮತ್ತು ನಂದಿನಿಯನ್ನು ಹೊರಹಾಕಲು ಪ್ರಯತ್ನಿಸುವುದನ್ನು ಬಲವಾಗಿ ವಿರೋಧಿಸಿದೆ.
ನಂದಿನಿ ಹಾಗೂ ಅಮೂಲ್ ವಿವಾದ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಇರುವಾಗಲೇ ಭುಗಿಲೆದ್ದ ವಿವಾದಕ್ಕೆ ತುಪ್ಪು ಸುರಿಯುವ ಕೆಲಸವನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಶಾಸಕ ಸಿಟಿ ರವಿ ಮಾಡಿದ್ದಾರೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಗುಲಾಮರಿಗೆ ಇಟಾಲಿಯನ್ ಆಳ್ವಿಕೆಯಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ಭಾರತೀಯ ಬ್ರಾಂಡ್ ಅಮುಲ್ ತನ್ನ ಉತ್ಪನ್ನಗಳನ್ನು ಇತರ ಹಲವು ಬ್ರಾಂಡ್‌ಗಳಂತೆ ಕರ್ನಾಟಕದಲ್ಲಿ ಮಾರಾಟ ಮಾಡುವಾಗ ಅವರಿಗೆ ಸಮಸ್ಯೆ ಆಗಿದೆ. ಅವರದ್ದು ಸೋತವರ ಗುಂಪು' ಎಂದು ಹೇಳಿದ್ದಾರೆ.












Click it and Unblock the Notifications