ಜಾರಕಿಹೊಳಿ ರಾಜೀನಾಮೆ : ಯಾರು, ಏನು ಹೇಳಿದರು?
ಬೆಂಗಳೂರು, ಜ.28 : ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಅವರಿಗೆ ಜಾರಕಿಹೊಳಿ ಅವರು ರಾಜೀನಾಮೆ ಪತ್ರವನ್ನು ಕಳುಹಿಸಿದ್ದರು. ಆದರೆ, ರಾಜೀನಾಮೆ ಇನ್ನೂ ಅಂಗೀಕಾರಗೊಂಡಿಲ್ಲ. ಸದ್ಯ ವಿವಿಧ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
'ಸಚಿವ ಸತೀಶ್ ಜಾರಕಿಹೊಳಿ ರಾಜೀನಾಮೆ ಪತ್ರ ತಲುಪಿದೆ. ಅವರ ರಾಜೀನಾಮೆಗೆ ಕಾರಣ ತಿಳಿದುಬಂದಿಲ್ಲ. ಈ ವಿಚಾರವಾಗಿ ಅವರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. [ಸತೀಶ್ ಜಾರಕಿಹೊಳಿ ಮನವೊಲಿಕೆ ಯತ್ನ ವಿಫಲ?]
ಅಬಕಾರಿ ಸಚಿವ ಸತೀಶ ಜಾರಕಿ ಹೊಳಿ ರಾಜೀನಾಮೆಯ ಮೂಲಕ ಸಿದ್ದರಾಮಯ್ಯ ಸರ್ಕಾರದ ಅವಸಾನ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿಕೆ ನೀಡಿದ್ದರೆ, ಜಾರಕಿಹೊಳಿ ಕಾಂಗ್ರೆಸ್ ಪಕ್ಷ ತೆರೆಯುವುದಿಲ್ಲ ಎಂದು ಗೃಹ ಸಚಿವ ಕೆಜೆ ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ. ಯಾರು, ಏನು ಹೇಳಿದರು? ನೋಡೋಣ ಬನ್ನಿ

ಅವರೊಂದಿಗೆ ಮಾತುಕತೆ ನಡೆಸುವೆ
'ಸಚಿವ ಸತೀಶ್ ಜಾರಕಿಹೊಳಿ ರಾಜೀನಾಮೆ ಪತ್ರ ತಲುಪಿದೆ. ಅವರ ರಾಜೀನಾಮೆಗೆ ಕಾರಣ ತಿಳಿದುಬಂದಿಲ್ಲ. ಈ ವಿಚಾರವಾಗಿ ಅವರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಂಜೆ ಸಿಎಂ ಜಾರಕಿಹೊಳೆ ಜೊತೆ ಚರ್ಚೆ ನಡೆಸಲಿದ್ದಾರೆ.

ಸರ್ಕಾರದ ಅವಸಾನ ಆರಂಭ
ಸತೀಶ್ ಜಾರಕಿ ಹೊಳಿ ರಾಜೀನಾಮೆಯ ಮೂಲಕ ಸಿದ್ದರಾಮಯ್ಯ ಸರ್ಕಾರದ ಅವಸಾನ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಜಾರಕಿಹೊಳಿ ರಾಜೀನಾಮೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಅವಸಾನ ಆರಂಭವಾಗಿದೆ. ಅಲ್ಲದೆ ಜಾರಕಿಹೊಳಿ ಅವರ ಮನವೊಲಿಸಲು ಸರ್ಕಾರಿ ಅಧಿಕಾರಿಗಳನ್ನು ಕಳುಹಿಸಿರುವುದು ಸರ್ಕಾರದ ಬೌದ್ಧಿಕ ದಿವಾಳಿತನದ ಪರಮಾವಧಿಯಾಗಿದೆ ಎಂದು ಜೋಷಿ ಕುಟುಕಿದ್ದಾರೆ.

ಇದೊಂದು ಸಣ್ಣ ಗೊಂದಲ ಬಗೆಹರಿಸುತ್ತೇವೆ
ಜಾರಕಿಹೊಳಿ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು, ಅಧಿವೇಶನ ಮುಂದಿರುವಾಗ ರಾಜೀನಾಮೆ ನೀಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ನನಗೂ ರಾಜೀನಾಮೆ ಪತ್ರ ಕಳಿಸಿದ್ದು, ಪಕ್ಷದಲ್ಲಿ ಕೆಲಸ ಮಾಡಲು ಅವಕಾಶ ಕೇಳಿದ್ದಾರೆ. ಇದೊಂದು ಸಣ್ಣ ಗೊಂದಲ, ಇದನ್ನು ಬಗೆಹರಿಸುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಈ ವಿಷಯದಲ್ಲಿ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ
ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೋಳಿ ಇಬ್ಬರೂ ಆತ್ಮೀಯರು, ರಾಜೀನಾಮೆ ವಾಪಸ್ ಪಡೆಯುವ ವಿಷಯದಲ್ಲಿ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ, ಇಬ್ಬರು ಕುಳಿತು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ಯಾರೂ ಕಾಂಗ್ರೆಸ್ ಬಿಡುವುದಿಲ್ಲ
ಸತೀಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಕೆ.ಜೆ.ಜಾರ್ಜ್, ರಾಜೀನಾಮೆಯನ್ನು ಅಂಗೀಕರಿಸುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ, ಆದರೆ, ಜಾರಕಿಹೊಳಿ ಅವರು ಪಕ್ಷ ಬಿಟ್ಟು ಹೋಗುತ್ತಿಲ್ಲ ಎಂದರು. ಕೆಂಪಯ್ಯ ಅವರು ಸಂಧಾನಕಾರರಾಗಿ ಹೋಗಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಜಾರ್ಜ್ ಹೇಳಿದರು.

ಸಿಎಂ ಮನವೊಲಿಸುತ್ತಾರೆ
ಸತೀಶ್ ಜಾರಕಿಹೊಳಿ ಮತ್ತು ಸಿಎಂ ಸಿದ್ದರಾಮಯ್ಯ ತುಂಬಾ ಆತ್ಮೀಯರು ಅವರು ಜಾರಕಿಹೊಳಿ ಅವರ ಮನವೊಲಿಸಿ ರಾಜೀನಾಮೆಯನ್ನು ವಾಪಸ್ ಪಡೆದುಕೊಳ್ಳುವಂತೆ ತಿಳಿಸುತ್ತಾರೆ. ಜಾರಕಿಹೊಳಿ ಸಚಿವರಾಗಿ ಮುಂದುವರೆಯುತ್ತಾರೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸಿಎಂ ನಿರ್ಧಾರಕ್ಕೆ ನಾನು ಬದ್ಧ
'ನಾನು ಮತ್ತು ಸತೀಶ್ ಜಾರಕಿಹೊಳಿ ಆತ್ಮೀಯ ಸ್ನೇಹಿತರು' ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಒಂದು ವೇಳೆ ನಿಮ್ಮ ಖಾತೆಯನ್ನು ಅವರು ಕೇಳಿದರೆ ಬಿಟ್ಟು ಕೊಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಆಂಜನೇಯ ಅವರು ಸಿಎಂ ಸಿದ್ದರಾಮಯ್ಯ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.












Click it and Unblock the Notifications