ಸಂಕನೂರ ಅವರ ಅಗ್ನಿ ಸುರಕ್ಷತಾ ನೀತಿಯ ಮಹಾ ಎಡವಟ್ಟುಗಳು!
ನೆಪದಲ್ಲಿ ಶಿಕ್ಷಣ ಇಲಾಖೆಯಲ್ಲಿ ಇನ್ನೊಂದು ಭ್ರಷ್ಟಾಚಾರ ಸೃಷ್ಟಿಸಿ ಅದನ್ನು ಅಗ್ನಿ ಶಾಮಕ ಮತ್ತು ಲೋಕೋಪಯೋಗಿ ಅಧಿಕಾರಿಗಳ ಕೈಗಿಡುವ ಹುನ್ನಾರವೇ ? ಇಲ್ಲಾ ಕಾರ್ಪೋರೇಟ್ ಶಾಲೆಗಳಿಗೆ ವೇದಿಕೆ ಹಾಕಲು ಮಧ್ಯಮ ವರ್ಗದ ಶಾಲೆಗಳನ್ನು ಮುಗಿಸುವ ಷಡ್ಯಂತ್ರವೇ ? ಶಾಲೆ ಗಳ ಅಗ್ನಿ ಸುರಕ್ಷತೆ ಕುರಿತು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ್ ನೇತೃತ್ವದ ಪರಿಶೀಲನಾ ಸಮಿತಿ ನೀಡಿರುವ ವರದಿಯ ಅಸಲಿ ಎಡವಟ್ಟುಗಳ ವಿವರ ಇಲ್ಲಿದೆ ನೋಡಿ.
ಇಂತಹ ಪ್ರಶ್ನೆಗಳು ಮೂಡಲು ಕಾರಣ ಎಸ್.ವಿ. ಸಂಕನೂರ ನೇತೃತ್ವದ ಪರಿಶೀಲನಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ಶಾಲೆಗಳ ಅಗ್ನಿ ಸುರಕ್ಷತಾ ಶಿಫಾರಸುಗಳ ವರದಿ. ಶಿಕ್ಷಣ ಎಲ್ಲರಿಗೂ ಸಮಾನವಾಗಿ ಸಿಗಬೇಕು. ಎಲ್ಲರನ್ನು ಸಮಾನ ದೃಷ್ಟಿಯಲ್ಲಿ ನೋಡಬೇಕು. ಅಗ್ನಿ ಸುರಕ್ಷತಾ ವಿಚಾರ ಬಂದರೆ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆ ಎಂಬ ತಾರತಮ್ಯ ಇರಬಾರದು. ಆದರೆ ಅಗ್ನಿ ಸುರಕ್ಷತಾ ನಿಯಮಗಳು ಕೇವಲ ಖಾಸಗಿ ಅನುದಾನ ಹಾಗೂ ಅನುದಾನ ರಹಿತ ಶಾಲೆಗಳಿಗೆ ಮಾತ್ರ ಅನ್ವಯ ವಾಗುವಂತೆ ಸಂಕನೂರ ಸಮಿತಿ ಶಿಫಾರಸು.
ನೆಲ ಮಹಡಿಯಿಂದ ಹದಿನೈದು ಮೀಟರ್ ಎತ್ತರ ಇರುವ ಕಟ್ಟಡಗಳಿಗೆ ಮಾತ್ರ ಅಗ್ನಿ ಸುರಕ್ಷತಾ ಉಪಕರಣ ಅಳವಡಿಸಬೇಕು. ಜಿಲ್ಲಾ ಅಗ್ನಿ ಸುರಕ್ಷತಾ ಅಧಿಕಾರಿಯಿಂದ ಅನುಮತಿ ಪಡೆಯಬೇಕು ಎಂದು ಶಿಫಾರಸು ಮಾಡಿದ್ದಾರೆ.
ಅಂದರೆ ನೆಲ ಮಹಡಿಯಲ್ಲಿ ಅಗ್ನಿ ದುರಂತ ಸಂಭವಿಸುವುದೇ ಇಲ್ಲವೇ ? ಅಗ್ನಿ ದುರಂತಕ್ಕೆ ನೆಲ ಮಹಡಿಯಲ್ಲಿ ನಾನು ಬೀಳಬಾರದು ಎಂಬ ತೀರ್ಮಾನ ತೆಗೆದುಕೊಂಡಿದೆಯೇ ? ಸಂಕನೂರ ಸಮಿತಿಗೂ ಗೊತ್ತು ರಾಷ್ಟ್ರೀಯ ವಿಪತ್ತು ಕಾಯ್ದೆ ಅಡಿಯಲ್ಲಿ ಉಲ್ಲೇಖಿಸಿರುವ ಅಗ್ನಿ ಸುರಕ್ಷತಾ ನಿಯಮಗಳನ್ನು ಸರ್ಕಾರಿ ಶಾಲೆಗಳಲ್ಲಿ ಅಳವಡಿಸಲು ಕಷ್ಟ ಸಾಧ್ಯ ಎಂಬುದು.
ಹೀಗಾಗಿ ನೆಲ ಮಹಡಿಯಲ್ಲಿರುವ ಶಾಲೆಗಳನ್ನು ಅಗ್ನಿ ಸುರಕ್ಷತಾ ನಿಯಮದಿಂದ ಕೈ ಬಿಡಲಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳನ್ನು ಅಗ್ನಿ ಸುರಕ್ಷತಾ ಪಾಲನೆ ಸಂಕಷ್ಟದಿಂದ ಸಂಕನೂರ ಅವರು ಪಾರು ಮಾಡುವ ಮೂಲಕ ತಾರತಮ್ಯ ನೀತಿ ಅನುಸರಿಸಿದ್ದಾರೆ ಎಂಬ ಮಾತು ಶಿಕ್ಷಣ ವಲಯದಿಂದ ಕೇಳಿ ಬರುತ್ತಿದೆ.

ಯಾವ ಶಾಲೆಗಳಲ್ಲಿವೆ ಬಿಸಿಯೂಟದ ಅಡಗೆ ಸಿಲಿಂಡರ್?
ರಾಜ್ಯದಲ್ಲಿ ಶೇ. 50 ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಬಹುತೇಕರು ಶಾಲಾ ಶುಲ್ಕ ಪಾವತಿ ಮಾಡಲಾಗದವರು. ಅದರಲ್ಲೂ ಬಿಸಿಯೂಟ ಯೋಜನೆ ಜಾರಿಯಿಂದಾಗಿ ಶಾಲೆಗಳಲ್ಲಿಯೇ ಅಡುಗೆ ಅನಿಲ ಸಿಲಿಂಡರ್ ಇಟ್ಟುಕೊಂಡಿರುವುದು ಸಾಮಾನ್ಯ.
ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿಯೇ ಅಗ್ನಿ ಅನಾಹುತ ಸಂಭವಿಸುವ ಪರಿಸ್ಥಿತಿಯಿದೆ. ಹೀಗಾಗಿ ಸಂಕನೂರ ಸಮಿತಿ ರಾಜ್ಯದ ಶಾಲೆಗಳಲ್ಲಿ ಅಸ್ತಿತ್ವದಲ್ಲಿರುವ ಬಿಸಿಯೂಟ ಯೋಜನೆ, ಅಗ್ನಿ ಅಡುಗೆ ತಯಾರಿಸುವ ಕೋಣೆಗಳು ಶಾಲೆಗಳಿಗೆ ಹೊಂದಿಕೊಂಡಿವೆ. ಬಡವರ ಮಕ್ಕಳ ಆರೋಗ್ಯ ಕೂಡ ಮಹತ್ವ ಆಗಿರುವುದರಿಂದ ಸಂಕನೂರ ಅವರು ನೆಲಮಹಡಿಯಲ್ಲಿದ್ದರೂ ಸರ್ಕಾರಿ ಶಾಲೆಗಳ ಅಗ್ನಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಿ ವರದಿಯಲ್ಲಿ ಶಿಫಾರಸು ಮಾಡಬೇಕಿತ್ತು.
ಆದರೆ, ಖಾಸಗಿ ಶಾಲೆಗಳಿಗೆ ಸೀಮಿತಗೊಳಿಸುವ ಉದ್ದೇಶದಿಂದಲೇ ನೆಲ ಮಹಡಿಯಲ್ಲಿರುವ ಶಾಲೆಗಳು ಅಗ್ನಿ ಸುರಕ್ಷತಾ ನಿಯಮ ಪಾಲನೆಯಿಂದ ವಿನಾಯಿತಿ ನೀಡಿ ಶಿಫಾರಸು ಮಾಡಿದ್ದಾರೆ ಎಂದು ಶಿಕ್ಷಣ ತಜ್ಞರೇ ಸಂಕನೂರ ಅವರ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆರ್‌ಟಿಐ ಹಾಗೂ ಅಧಿಕಾರಿಗಳ ಷಡ್ಯಂತ್ರವೇ
ಅಗ್ನಿ ಸುರಕ್ಷತಾ ನಿಯಮ ಜಾರಿಗೆ ತರುವುದಾದರೆ ಏಕ ರೂಪದ ನಿಯಮಗಳನ್ನು ಜಾರಿಗೆ ತರಬೇಕು. ಸರ್ಕಾರಿ ಖಾಸಗಿ ಎನ್ನುವ ತಾರತಮ್ಯವೇ ಇರಬಾರದು. ಮಧ್ಯಮ ವರ್ಗದ ಶಾಲೆಗಳು ಅಗ್ನಿ ಸುರಕ್ಷತಾ ಹಾಗೂ ಕಟ್ಟಡ ಸ್ಥಿರತೆ ನಿಯಮ ಪಾಲನೆ ಮಾಡದ ಅನರ್ಹತೆ ಕಾರಣ ನೀಡಿ ಸುಮಾರು ಶಾಲೆಗಳಿಗೆ ಬೀಗ ಜಡಿಯಬಹುದು. ಇದರಿಂದ ಖಾಸಗಿ ಶಾಲೆ ಮಕ್ಕಳ ಅರ್ಧ ಸಂಖ್ಯೆ ಸರ್ಕಾರಿ ಶಾಲೆಗಳಿಗೆ ಹೋಗಬಹುದು.
ಉಳಿದವರು ಅದಾಗಲೇ ಬಂಡವಾಳ ಶಾಹಿ ಉದ್ಯಮಿಗಳಿಂದ ಆರಂಭಿಸಲ್ಪಟ್ಟ ಕಾರ್ಪೋರೇಟ್ ಶಾಲೆಗಳ ಕದ ತಟ್ಟಬಹುದು. ಇನ್ನ ಅಗ್ನಿ ಸುರಕ್ಷತಾ ನಿಯಮ ಹಾಗೂ ಕಟ್ಟಡ ಸ್ಥಿರತೆ ಪಾಲಿಸದ ಶಾಲೆಗಳನ್ನು ಪತ್ತೆ ಹಚ್ಚಿ ಮಾಹಿತಿ ಹಕ್ಕು ಅಡಿ ಅರ್ಜಿ ಗುಜರಾಯಿಸಿ ಸುಲಿಗೆ ಮಾಡುವ, ಇಲ್ಲವೇ ಶಾಲೆ ಮುಚ್ಚಿಸುವ ಹೊಸ ವ್ಯವಸ್ಥೆ ಸೃಷ್ಠಿಗೆ ಈ ಶಿಫಾರಸು ಕಾರಣವಾಗಲಿದೆ.
ಹೀಗಾಗಿ ವಾಸ್ತವವಾಗಿ ಶಾಲೆಗಳ ಅಗ್ನಿ ಸುರಕ್ಷತೆಗೆ ಒತ್ತು ನೀಡುವುಕ್ಕಿಂತಲೂ ಇನ್ನೊಂದು ಭ್ರಷ್ಟ ವ್ಯವಸ್ಥೆಯ ಸೃಷ್ಠಿಗೆ ಈ ವರದಿ ಅವಕಾಶ ಕೊಡಲಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರು ವರದಿಯ ಲೋಪಗಳ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ.
ರಾಜ್ಯದಲ್ಲಿ ಶಿಕ್ಷಣ ಅಧಿಕಾರಿಗಳಿಗೆ ಆರ್‌ಟಿಐ ಕಾರ್ಯಕರ್ತರು ಎಂದರೇ ಭಯ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಅಗ್ನಿ ಸುರಕ್ಷತೆ ಬಗ್ಗೆ ಕಾಳಜಿ ಹೊಂದಿರುವ ಹೋರಾಟಗಾರರು ಈವರೆಗೂ ಒಂದೇ ಒಂದು ಸರ್ಕಾರಿ ಶಾಲೆಯಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಒಂದು ಅರ್ಜಿ ಸಲ್ಲಿಸಿ ಮಾಹಿತಿ ಪಡೆದಿಲ್ಲ.
ಅದೇ ಖಾಸಗಿ ಶಾಲೆಗಳಿಗೆ ಅಗ್ನಿ ಸುರಕ್ಷತೆ ಹೆಸರಿನಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬುದಕ್ಕೆ ಮಾಹಿತಿ ಹಕ್ಕು ಅಧಿನಿಯಮದಡಿ ಸಲ್ಲಿಸಿರುವ ಅರ್ಜಿಗಳನ್ನು ಸಂಗ್ರಹಿಸಿ ಸಂಕನೂರ ಸಮಿತಿ ಪರಿಶೀಲನೆ ನಡೆಸಬೇಕಿತ್ತು ಎಂದು ಅವರು ಸಲಹೆ ಮಾಡಿದ್ದಾರೆ.

ಹಾಗಾದರೆ ಶಾಲೆಗಳಿಗೆ ಅಗ್ನಿ ಸುರಕ್ಷತೆ ಹೇಗಿರಬೇಕು
ರಾಜ್ಯದಲ್ಲಿ ಅಗ್ನಿ ಸುರಕ್ಷತಾ ನಿಯಮ ಏಕ ರೂಪವಾಗಿರಬೇಕು. ಮೊದಲು ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಅಗ್ನಿಸುರಕ್ಷತಾ ಕ್ರಮ ಅಳವಡಿಕೆ ಕುರಿತು ಫೈಲಟ್ ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕಿತ್ತು.ಆ ಪೈಲಟ್ ಯೋಜನೆ ಆಧರಿಸಿ ಪರಿಶೀಲನಾ ವರದಿ ಆಧರಿಸಿ ಅಂಗನವಾಡಿ ಕೇಂದ್ರಗಳು ಸೇರಿದಂತೆ ರಾಜ್ಯದ ಎಲ್ಲಾ ಶಾಲೆಗಳಿಗೆ ಏಕ ರೂಪದ ಅಗ್ನಿ ಸುರಕ್ಷತಾ ನಿಯಮಗಳನ್ನು ರೂಪಿಸಬೇಕಿತ್ತು.
ಅದರಲ್ಲೂ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ದೇಶದಲ್ಲಿ ಶಾಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷತೆ ಹೆಚ್ಚು ಮಹತ್ವ ಪಡೆದುಕೊಂಡಿತು. ಕೇವಲ ಶಿಕ್ಷಣ ನೀಡುವ ಉದ್ದೇಶದೊಂದಿಗೆ ದಶಕಗಳ ಹಿಂದಿನಿಂದಲೂ ಮಧ್ಯಮ ವರ್ಗದ ಖಾಸಗಿ ಶಾಲೆಗಳು ಸಮಾಜಕ್ಕೆ ಕೊಡುಗೆ ನೀಡುತ್ತಿವೆ.
ಶೇ. 50 ರಷ್ಟು ಮಕ್ಕಳಿಗೆ ಶಿಕ್ಷಣ ಧಾರೆ ಎರೆಯುತ್ತಿವೆ. ಇಂತಹ ಶಾಲೆಗಳ ವಾಸ್ತವಿಕ ಸ್ಥಿತಿಯನ್ನು ಅಧ್ಯಯನ ಮಾಡದೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಅಗ್ನಿ ಸುರಕ್ಷತಾ ನಿಯಮ ಜಾರಿಗೆ ತರಬೇಕು ಎಂದು ಶಿಫಾರಸು ಮಾಡಿರುವ ಸಂಕನೂರ ಸಮಿತಿ ದೊಡ್ಡ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಭವಿಷ್ಯದಲ್ಲಿ ಇದೊಂದು ಭಷ್ಟಾಚಾರಕ್ಕೆ ನಾಂದಿ ಹಾಡಲಿದೆ ಬಿಟ್ಟರೆ, ಈಗಿನ ಪರಸ್ಥಿತಿಯಲ್ಲಿ ಶಾಲೆಗಳು ಎರಡು ದಶಕ ಕಳೆದರೂ ಅಗ್ನಿ ಸುರಕ್ಷತಾ ನಿಯಮ ಪಾಲನೆ ಮಾಡಲಾಗದಂತಹ ನಿಯಮಗಳನ್ನು ಹೇರಲಾಗಿದೆ.

ಸರ್ಕಾರಿ ಶಾಲೆಗಳ ಅರ್ಥಿಕ ದುಸ್ಥಿತಿ
ಅರ್ಹ ಶಿಕ್ಷಕರು ಇಲ್ಲದೇ ಸರ್ಕಾರಿ ಶಾಲೆಗಳು ಒದ್ದಾಡುತ್ತಿವೆ. 40 ಮಕ್ಕಳಿಗೆ ಒಬ್ಬ ಶಿಕ್ಷಕರು ಎಂಬ ನಿಯಮದಡಿ ಸರ್ಕಾರ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಒಂದು ಶಾಲೆಗೆ ಅಗ್ನಿ ಸುರಕ್ಷತಾ ಕ್ರಮ ಅಳವಡಿಸಬೇಕಾದರೆ ಕನಿಷ್ಠ 12 ರಿಂದ 30 ಲಕ್ಷ ರೂ. ವರೆಗೂ ವೆಚ್ಚ ಮಾಡಬೇಕು.
ನೂರು ರೂಪಾಯಿ ಮೌಲ್ಯದ ಸಮವಸ್ತ್ರ ಕೊಡುವುದರಲ್ಲೇ ಅಕ್ರಮ ಎಸಗುವ ಈ ವ್ಯವಸ್ಥೆಯಲ್ಲಿ ಸರ್ಕಾರಿ ಶಾಲೆಗಳಿಗೆ ನಿಜವಾಗಿಯೂ ಅಗ್ನಿ ಸುರಕ್ಷತಾ ಕ್ರಮ ಅಳವಡಿಸುತ್ತಾರಾ ? ಇಲ್ಲವೇ ಸರ್ಕಾರಿ ಶಾಲೆಗಳನ್ನು ದೂರ ಇಡುವ ಕಾರಣದಿಂದಲೇ ನೆಲ ಮಹಡಿ ಶಾಲೆಗಳಿಗೆ ವಿನಾಯಿತಿ ಘೋಷಣೆ ಮಾಡಲಾಗಿದೆಯೇ ಎಂಬ ದೊಡ್ಡ ಅನುಮಾನಕ್ಕೆ ಸಂಕನೂರ ನೇತೃತ್ವದ ಪರಿಶೀಲನಾ ಸಮಿತಿ ನೀಡಿರುವ ವರದಿ ಎಡೆ ಮಾಡಿಕೊಟ್ಟಿದೆ.

ಶಾಲೆಗಳಲ್ಲಿ ಅಗ್ನಿ ಸುರಕ್ಷತೆ ಇತಿಹಾಸ
ತಮಿಳುನಾಡಿನ ಕುಂಬಕೋಣಂನಲ್ಲಿ ಶಾಲೆಯೊಂದರಲ್ಲಿ 2004 ರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಇದರಲ್ಲಿ 94 ಮುಗ್ಧ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. 40 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂಕೋರ್ಟ್ 2009 ರಲ್ಲಿ ಶಾಲೆಗಳಲ್ಲಿ ಅಗ್ನಿ ಸುರಕ್ಷತಾ ನಿಯಮ ಪಾಲನೆ ಕುರಿತು ಕ್ರಮ ಜರುಗಿಸಲು ಸೂಚಿಸಿತು.
ಮಧ್ಯಂತರದ ಆದೇಶದಲ್ಲಿ ಎಲ್ಲಾ ಶಾಲೆಗಳಲ್ಲಿ ಅಗ್ನಿ ನಂದಕ ಹಾಕಬೇಕು ಎಂದು ಎಲ್ಲಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿತು. 2017 ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸಭೆ ಕರೆದು ಚರ್ಚಿಸಿತು. ಇದೇ ವೇಳೆಗೆ ಕೇಂದ್ರ ಮಕ್ಕಳ ಆಯೋಗ ಕೂಡ ಹಲವು ಶಿಫಾರಸು ಮಾಡಿತು. ವಿಪರ್ಯಾಸವೆಂದರೆ ಶಾಲೆಗಳು, ಘಟನೆ ಮುನ್ನ ಅರಂಭವಾಗಿರುವ ಶಾಲೆಗಳ ಸ್ಥಿತಿಗತಿ, ಕ್ರಮಾನುಸಾರ ಶಾಲೆಗಳು ಕೈಗೊಳ್ಳಬೇಕಾದ ಅಗ್ನಿ ಸುರಕ್ಷತಾ ನಿಯಮ ಹಾಗೂ ಪಾಲನೆ ಕುರಿತು ಈವರೆಗೂ ಯಾವುದೇ ಸ್ಪಷ್ಟ ನಿಯಮ ರೂಪಿಸಿ ಅಂತಿಮ ನಿರ್ಧಾರ ಜಾರಿಗೆ ತಂದಿಲ್ಲ. ಈ ಕುರಿತು ಕೆಲವು ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದ್ದವರು.
ಇದರ ನಡುವೆ ದೇಶದಲ್ಲಿ ಕಟ್ಟಡಗಳ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸ್ಥಿರತೆ ನಿಯಮದಲ್ಲಿ ಉಲ್ಲೇಖಿಸಿರುವ ನಿಯಮಗಳನ್ನೇ ಶಾಲೆಗಳು ಪಾಲನೆ ಮಾಡುವ ಬಗ್ಗೆ ಉಲ್ಲೇಖಿಸಲಾಗಿತ್ತು.

ರಾಜ್ಯದಲ್ಲಿ ಶಾಲೆಗಳ ಅಗ್ನಿ ಸುರಕ್ಷತಾ ಕ್ರಮ ಇತಿಹಾಸ
ರಾಜ್ಯದಲ್ಲಿ ಶಾಲಾ ಕಾಲೇಜುಗಳು ಅಗ್ನಿ ಸುರಕ್ಷತಾ ಕ್ರಮ ಪಾಲನೆ ಕುರಿತು ರಾಷ್ಟ್ರೀಯ ವಿಪತ್ತು ಕಾಯ್ದೆ ನಿರ್ವಹಣೆ ಹಾಗೂ ನ್ಯಾಷನಲ್ ಬಿಲ್ಡಿಂಗ್ ಕೋಡ್ ಅನ್ವಯ, ಸುಪ್ರೀಂಕೋರ್ಟ್ ಹಾಗೂ ಸರ್ಕಾರದ ಆದೇಶಗಳ ಅನ್ವಯ ಕರ್ನಾಟಕ ಶಿಕ್ಷಣ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿತು. ಕಾಯ್ದೆಗಳಲ್ಲಿ ಉಲ್ಲೇಖಿಸಿರುವ ಕಠಿಣ ನಿಯಮಗಳನ್ನು ಪಾಲಿಸಲು ಶಾಲೆಗಳಿಗೆ ಎದುರಾಗಿದ್ದ ಸಂಕಷ್ಟ ಕುರಿತು ಖಾಸಗಿ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್ ಮೊರೆ ಹೋಗಿದ್ದವು.
ನಿರ್ಧಿಷ್ಟ ಅಗ್ನಿ ಸುರಕ್ಷತಾ ನಿಯಮ ಅಲ್ಲದೇ ರಾಷ್ಟ್ರೀಯ ವಿಪತ್ತು ಕಾಯ್ದೆ ಹಾಗೂ ನ್ಯಾಷನಲ್ ಬಿಲ್ಡಿಂಗ್ ಕೋಡ್ ಅನ್ವಯ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಕ್ಯಾಮ್ಸ್ ಸೇರಿದಂತೆ ಹಲವು ಖಾಸಗಿ ಶಾಲೆಗಳ ಒಕ್ಕೂಟಗಳು ಮನವಿ ಮಾಡಿದ್ದವು. ಅಲ್ಲದೇ 2017 ಕ್ಕೂ ಮೊದಲು ಆರಂಭವಾಗಿರುವ ಶಾಲೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಸುರಕ್ಷತೆ ಕ್ರಮಗಳು ಪಾಲನೆ ಮಾಡುವ ನೀತಿ ಜಾರಿಗೆ ತರುವಂತೆ ಕೋರಿದ್ದವು. ವಾದ ವಿವಾದ ಆಲಿಸಿದ್ದ ಹೈಕೋರ್ಟ್ ಈ ಕುರಿತು ಪರಿಶೀಲನಾ ಸಮಿತಿ ರಚಿಸಿ ಮೂರು ತಿಂಗಳ ಕಾಲಮಿತಿ ನೀಡಿತ್ತು.

ಕೊರೊನಾ ಸಂಕಷ್ಟದದಲ್ಲಿ ಅಗ್ನಿಗೆ ನಾಂದಿ ಹಾಡಿದ ಮಾಜಿ ಶಿಕ್ಷಣ ಸಚಿವರು:
2020 ರಲ್ಲಿ ಕೊರೊನಾ ಮಹಾ ಮಾರಿ ಸೋಂಕಿನಿಂದ ಇಡೀ ಶಿಕ್ಷಣ ವ್ಯವಸ್ಥೆ ಹಳಿ ತಪ್ಪಿತು. ರಾಜ್ಯದ ಖಾಸಗಿ ಶಾಲೆಗಳು ಕೇವಲ ಟ್ಯೂಷನ್ ಶುಲ್ಕ ಪಡೆಯಬೇಕು ಎಂದು ಆದೇಶಿಸಿತು. ಇತರೆ ಯಾವುದೇ ಶುಲ್ಕ ಪಡೆಯಬಾರದು ಎಂದು ಸುತ್ತೋಲೆ ಹೊರಡಿಸಿತು. ಇದರಿಂದ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ದೊಟ್ಟ ಕಂದಕ ಉಂಟಾಗಿ ಶಾಲಾ ಶುಲ್ಕ ವಸೂಲಿಯಾಗದೇ ಆರ್ಥಿಕ ಸಂಕಷ್ಟಕ್ಕೆ ಶಾಲೆಗಳು ಒಳಗಾಗಿದ್ದವು. ಇದರ ನಡುವೆಯೇ ರಾಜ್ಯದಲ್ಲಿ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಅಗ್ನಿ ಸುರಕ್ಷತಾ ನಿಯಮ ಅಳವಡಿಸಿಕೊಳ್ಳಬೇಕು.
ಕೇವಲ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಮಾತ್ರ ಪಾಲನೆಗೆ ಸೀಮಿತಗೊಳಿಸಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದರು. ಮೊದಲೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಖಾಸಗಿ ಶಾಲೆಗಳು ಕಡ್ಡಾಯವಾಗಿ ಅಗ್ನಿ ಸುರಕ್ಷತಾ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ಮಾನ್ಯತೆ ನವೀಕರಣ ಮಾಡಬೇಡಿ ಎಂದು ಸುತ್ತೋಲೆ ಹೊರಡಿಸಿದ್ದರು. ಮೊದಲೇ ಆರ್ಥಿಕ ಸಂಕಷ್ಟದಿಂದ ಜರ್ಜರಿತವಾಗಿದ್ದ ಶಾಲೆಗಳು ಸರ್ಕಾರಿ ಶಾಲೆಗಳಿಗೆ ಇಲ್ಲದ ನಿಯಮಗಳು ಖಾಸಗಿ ಶಾಲೆಗಳಿಗೆ ಮಾತ್ರ ಯಾಕೆ ಎಂದು ಪ್ರಶ್ನಿಸಿ ಬೀದಿಗೆ ಇಳಿಯಲು ಮುಂದಾಗಿದ್ದವು. ಇದರ ನಡುವೆಯೇ ರಾಜಕೀಯದಲ್ಲಿ ಆದ ಬದಲಾವಣೆಯಿಂದ ಸುರೇಶ್ ಕುಮಾರ್ ಶಿಕ್ಷಣ ಸಚಿವ ಸ್ಥಾನದಿಂದ ನಿರ್ಗಮಿಸಿದರು.

ಕಠಿಣ ಅಗ್ನಿ ಸುರಕ್ಷತಾ ನಿಯಮ ಪಾಲನೆ
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಚನೆಯಾಗಿದ್ದ ಎಸ್.ವಿ. ಸಂಕನೂರ ನೇತೃತ್ವದ ಪರಿಶೀಲನಾ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಅದರಲ್ಲಿ ಪ್ರಮುಖ ಹದಿನಾಲ್ಕು ಶಿಫಾರಸುಗಳನ್ನು ಮಾಡಿದೆ. ಕಠಿಣ ಅಗ್ನಿ ಸುರಕ್ಷತಾ ನಿಯಮ ಪಾಲನೆ ಮಾಡಲಾಗದ ಹಿನ್ನೆಲೆಯಲ್ಲಿ ರಚನೆಯಾದ ಸಮಿತಿ ತನ್ನ ಮೊದಲ ಉದ್ದೇಶವನ್ನೇ ಮರೆತು ವರದಿ ನೀಡಿದೆ. 2017 ಕ್ಕಿಂತಲೂ ಮೊದಲು ಆರಂಭವಾಗಿರುವ ಶಾಲೆಗಳು ಕನಿಷ್ಠ ಅಗ್ನಿ ಸುರಕ್ಷತೆ ಮತ್ತು ಸುರಕ್ಷತಾ ನಿಯಮ ಪಾಲನೆ ಬಗ್ಗೆ ಸ್ಪಷ್ಟ ಅಧ್ಯಯನ ನಡೆಸಿದಂತೆ ವರದಿಯಲ್ಲಿ ಕಾಣುತ್ತಿಲ್ಲ.
ಕೇವಲ ನೆಲ ಮಹಡಿ ಹೊಂದಿರುವ ಶಾಲೆಗಳು ಅಗ್ನಿ ಸುರಕ್ಷತೆ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರಿ ಶಾಲೆಗಳನ್ನು ಅಗ್ನಿ ಸುರಕ್ಷತಾ ನಿಯಮ ಪಾಲನೆಯಿಂದ ದೂರ ಇಡಲಾಗಿದೆ. ವಾಸ್ತವದಲ್ಲಿ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಆರ್.ಆರ್. ಮಾನ್ಯತೆ ಮಾಡುವ ಪ್ರಮೇಯವೇ ಬರಲ್ಲ. ಹೀಗಾಗಿ ಅಗ್ನಿ ಸುರಕ್ಷತಾ ನಿಯಮ ಪಾಲನೆ ಮಾಡದ ಸರ್ಕಾರಿ ಶಾಲೆಗಳ ಮೇಲೆ ಯಾವ ಕ್ರಮ ಜರುಗಿಸಲು ಸಾಧ್ಯವಿಲ್ಲ. ಇನ್ನು ಖಾಸಗಿ ಹಾಗು ಅನುದಾನಿತ ಶಾಲೆಗಳನ್ನೇ ಉದ್ದೇಶವಾಗಿಟ್ಟುಕೊಂಡು 2017 ಕ್ಕಿಂತಲೂ ಮುನ್ನ ಆರಂಭವಾಗಿರುವ ಶಾಲೆಗಳು ಪಾಲಿಸಬೇಕಾದ ಸ್ಪಷ್ಟ ಸುರಕ್ಷತಾ ನಿಯಮಗಳನ್ನು ಉಲ್ಲೇಖಿಸಿಲ್ಲ.
ಸಂಕನೂರ್ ಸಮಿತಿ ಎಡವಿತೆ?
ಖಾಸಗಿ ಶಾಲೆಗಳು ಕಠಿಣ ಅಗ್ನಿ ಸುರಕ್ಷತಾ ನಿಯಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಮೂರು ತಿಂಗಳಲ್ಲಿ ಅಳವಡಿಸಿಕೊಂಡು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಯಿಂದ ಪ್ರಮಾಣ ಪತ್ರ ಪಡೆಯಬೇಕು.
ಇಲ್ಲದಿದ್ದರೆ ಶಾಲಾ ಮಾನ್ಯತೆ ರದ್ದು ಮಾಡಬೇಕೆಂದು ಸೂಚಿಸಲಾಗಿದೆ. ಖಾಸಗಿ ಶಾಲೆಗಳು ಮೂರು ಲಕ್ಷ ರೂ. ಹಣವನ್ನು ಬಿಇಓ ಕಚೇರಿಯಲ್ಲಿ ಡೆಪಾಸಿಟ್ ಇಡಬೇಕು. ಕಟ್ಟಡ ಸ್ಥಿರತೆ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಶಿಫಾರಸು ಮಾಡಿದ್ದಾರೆ.
ಅಗ್ನಿ ಸುರಕ್ಷತಾ ನಿಯಮ ಪಾಲಿಸದ ನೆಪದಲ್ಲಿ ಖಾಸಗಿ ಶಾಲೆಗಳ ವಿರುದ್ಧ ಮತ್ತೊಂದು ಷಡ್ಯಂತ್ರದ ಭಾಗವೇ ಎಂದು ಅನುಮಾನ ಮೂಡಿಸುವಂತಿದೆ. 2017 ಕ್ಕಿಂತಲೂ ಮೊದಲು ಆರಂಭವಾದ ಶಾಲೆಗಳಿಗೆ, ಸರ್ಕಾರಿ ಶಾಲೆಗಳಿಗೆ ಏಕ ರೂಪದ ಅಗ್ನಿ ಸುರಕ್ಷತಾ ನಿಯಮ, ಹೊಸದಾಗಿ ನಿರ್ಮಾಣ ವಾಗುವ ಶಾಲಾ ನಿರ್ಮಾಣಕ್ಕೆ ಇರುವ ಕಡ್ಡಾಯ ಷರತ್ತುಗಳ ಪಾಲನೆ ಕುರಿತು ಸ್ಪಷ್ಟ ಅಧ್ಯಯನ ಮಾಡಿ ವರದಿ ನೀಡುವಲ್ಲಿ ಸಂಕನೂರ್ ಸಮಿತಿ ಎಡವಿದಂತೆ ಕಾಣುತ್ತಿದೆ.
Recommended Video

ಸಂಕನೂರ್ ವರದಿ ಬಗ್ಗೆ ಕ್ಯಾಮ್ಸ ಅಸಮಾಧಾನ
ಅಗ್ನಿ ಸುರಕ್ಷತೆ ವಿಚಾರ ಬಂದಾಗ ಯಾವುದೇ ರಾಜಿಯಿಲ್ಲದೇ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸಮಾನ ರೀತಿಯಲ್ಲಿ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು. ಹೊಸ ಶಾಲೆಗಳ ಪ್ರಾರಂಭಕ್ಕೆ ವಿಧಿಸಿರುವ ಷರತ್ತುಗಳನ್ನು ಹಳೇ ಶಾಲೆಗಳು ಪಾಲಿಸಬೇಕು ಎಂಬುದು ಅವೈಜ್ಞಾನಿಕವಾದುದು. ಸಾಧ್ಯವಾಗದ ರೀತಿಯಲ್ಲಿ ನಿಯಮಗಳನ್ನು ಹೊರಿಸುವುದರಿಂದ ಇದೊಂದು ಭ್ರಷ್ಟಾಚಾರಕ್ಕೆ ನಾಂದಿ ಹಾಡುತ್ತದೆ ವಿನಃ ಮಾನ್ಯ ನ್ಯಾಯಾಲಯದ, ಮಕ್ಕಳ ಅಗ್ನಿ ಸುರಕ್ಷತೆ ಉದ್ದೇಶ ಈಡೇರುವುದಿಲ್ಲ.
ಕೇವಲ ಖಾಸಗಿ ಶಾಲೆಗಳನ್ನು ಹೆದರಿಸುವ ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡಿರುವರು ಅಧಿಕಾರಿಗಳನ್ನು ಹೆದರಿಸಿ ವಾಮ ಮಾರ್ಗ ಹಿಡಿಯುವ ಅಪಾಯವೂ ಕಾಣುತ್ತಿದೆ. ಸರ್ಕಾರಿ ಶಾಲೆಗಳ ಸೌಲಭ್ಯದ ಬಗ್ಗೆ ಚಿಂತನೆ ಇಲ್ಲದೇ ಖಾಸಗಿ ಶಾಲೆಗಳನ್ನೇ ಟಾರ್ಗೆಟ್ ಮಾಡಿ ಕೆಲವು ಹೋರಾಟಗಾರರು ದಂಧೆಯನ್ನಾಗಿ ಬದಲಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ. ವಾಸ್ತವಗಳ ಆಧಾರದ ಮೇಲೆ ಸಂಕನೂರ್ ಸಮಿತಿ ವರದಿ ನೀಡುವಲ್ಲಿ ಎಡವಿತೇ ಎಂಬ ಅನುಮಾನ ಕಾಡುತ್ತಿದೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಪ್ರಶ್ನಿಸಿದ್ದಾರೆ.












Click it and Unblock the Notifications