ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋತು ಸೊರಗಿದ್ದ ಅತೃಪ್ತರನ್ನು ಬಡಿದೆಬ್ಬಿಸಿದ ಕೃಷ್ಣರ ಪಾಂಚಜನ್ಯ

|
Google Oneindia Kannada News

ಬೆಂಗಳೂರು, ಜನವರಿ 30: ರಾಜ್ಯ ಕಾಂಗ್ರೆಸ್ಸಿನಲ್ಲೀಗ ಇದ್ದಕ್ಕಿದ್ದಂತೆ ಹೊಸ ಸಂಚಲನ ಸೃಷ್ಟಿಯಾಗಿದೆ. ಹಳೇ ಹುಲಿಗಳು, ಧುರೀಣರು, ಮೂಲ ನಿವಾಸಿಗಳಲ್ಲಿ ಈಗ ಹೊಸ ಹುರುಪು ಉತ್ಸಾಹ ತುಂಬಿ ತುಳುಕಾಡುತ್ತಿದೆ. ಈ ಎಲ್ಲದಕ್ಕೂ ಶ್ರೀಕಾರ ಹಾಕಿದ್ದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜಿನಾಮೆ ವಿಚಾರ.

ಶನಿವಾರವಷ್ಟೇ, ಸದಾಶಿವ ನಗರದಲ್ಲಿ ಎಸ್.ಎಂ. ಕೃಷ್ಣ, ರಾಜಿನಾಮೆಯ ಪಾಂಚಜನ್ಯ ಊದುತ್ತಿದ್ದಂತೆ ಇತ್ತ ಬೇಸತ್ತು ಕಾಲು ಚಾಚಿ ಮಲಗಿದ್ದ ಕಾಂಗ್ರೆಸ್ಸಿನ ಭಿನ್ನಮತೀಯರೆಲ್ಲಾ ಗಕ್ಕನೆ ಎದ್ದು ಮುಂದಾಬಹುದಾದ ಕುರುಕ್ಷೇತ್ರಕ್ಕೆ ಶಸ್ತ್ರಸಜ್ಜಿತರಾಗಿ ತುದಿಗಾಲಲ್ಲಿ ನಿಂತಿದ್ದಾರೆ.

ಒಂದಾನೊಂದು ಕಾಲದಲ್ಲಿ ಪಾರ್ಟಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಅವರು ಕಾಲಕ್ರಮೇಣ ತಮ್ಮ ಪಕ್ಷದಲ್ಲೇ ವಲಸಿಗರ ದಾಂಧಲೆಯಿಂದ 'ಹಿಂದುಳಿದ ವರ್ಗ'ಕ್ಕೆ ಸೇರಿ ವರ್ಷಗಳೇ ಕಳೆದಿದ್ದವು.

ಅಸಮಾಧಾನದ ಧಗೆಯಲ್ಲೇ ಬೇಯುತ್ತಿದ್ದರೂ ತಮ್ಮ ಬೇಗುದಿಯನ್ನು ಬಹಿರಂಗವಾಗಿ ತೋಡಿಕೊಳ್ಳಲು ಸರಿಯಾದ ವೇದಿಕೆ ಸಿಗದೇ ಹಪಹಪಿಸುತ್ತಿರು. ಈ ಎಲ್ಲಾ ಭಿನ್ನಮತೀಯರಿಗೂ ಈಗ ಕೃಷ್ಣ ಪಾಂಚಜನ್ಯ ಮೊಳಗಿಸಿದ್ದು ರೆಕ್ಕೆ ಪುಕ್ಕ ತಂದಕೊಟ್ಟಂತಾಗಿದೆ.

ಹಳೇ ಹುಲಿಗಳ ಘರ್ಜನೆ

ಹಳೇ ಹುಲಿಗಳ ಘರ್ಜನೆ

ಮಂಗಳೂರಿನಿಂದ ಜನಾರ್ಧನ ಪೂಜಾರಿ, ಬೆಂಗಳೂರಿನಿಂದ ಜಾಫರ್ ಶರೀಫ್, ಮೈಸೂರು ಕಡೆಯಿಂದ ಮಾಜಿ ಕಾಂಗ್ರೆಸ್ಸಿಗ ಶ್ರೀನಿವಾಸ್ ಪ್ರಸಾದ್, ಮಾಜಿ ಸಚಿವರಾದ ಎಂ.ವಿ. ರಾಜಶೇಖರನ್, ಮಲಕರೆಡ್ಡಿ, ದಾವಣಗೆರೆ ಕಡೆಯಿಂದ ಶ್ಯಾಮನೂರು ಶಿವಶಂಕರಪ್ಪ... ಹೀಗೆ ಕರ್ನಾಟಕದ ದಶದಿಕ್ಕುಗಳಲ್ಲಿ ಹರಡಿರುವ ಸಿದ್ದರಾಮಯ್ಯ ವಿರೋಧಿ ಎಲ್ಲಾ ನಾಯಕರು ಈಗ ಪರಸ್ಪರ ಹತ್ತಿರವಾಗುವ ಕಾಲ ಬಂದೊದಗಿದೆ.

ಮೊದಲ ದಿನದಲೇ ಶುರು

ಮೊದಲ ದಿನದಲೇ ಶುರು

ಅಸಲಿಗೆ, ಕಾಂಗ್ರೆಸ್ ಪಕ್ಷದಲ್ಲಿ ಇಂಥ ಅಸಮಾಧಾನಿಗರ ದೊಡ್ಡ ಪಟ್ಟಿಯೇ ಇದೆ ಎಂಬುದು ಮುಚ್ಚಿಟ್ಟ ಸತ್ಯವೇನಲ್ಲ. ಮೂರು ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಅವರ ಸಂಪುಟ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿತ್ತು.

ಪರಮೇಶ್ವರ್, ಡಿಕೆಶಿ ನಿರ್ಲಕ್ಷ್ಯ

ಪರಮೇಶ್ವರ್, ಡಿಕೆಶಿ ನಿರ್ಲಕ್ಷ್ಯ

ಹೊಸ ಸರ್ಕಾರದಲ್ಲಿ ಅನುಭವಿ ರಾಜಕಾರಣಿ ಪರಮೇಶ್ವರ್ ಅವರಿಗೆ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಸ್ಥಾನ ಕೊಡದೇ ಇದ್ದಿದ್ದು ಅವರಿಗಷ್ಟೇ ಅಲ್ಲ, ಅವರ ಅಪಾರ ಬೆಂಬಲಿಗರಲ್ಲಿ ಅಸಮಾಧಾನ ಹುಟ್ಟುಹಾಕಿತ್ತು. ಮೇಲ್ನೋಟಕ್ಕೆ ಇದು ಪರಮೇಶ್ವರ್, ಡಿಕೆಶಿಯವರನ್ನು ದೂರ ಇಟ್ಟಂತೆ ಕಂಡರೂ ಇದರ ಹಿಂದೆ ಎಸ್.ಎಂ. ಕೃಷ್ಣ ಅವರ ಬೆಂಬಲಿಗರನ್ನು ಮೂಲೆ ಗುಂಪು ಮಾಡುವ ಯತ್ನವಲ್ಲದೇ ಬೇರೇನೂ ಆಗಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.

ಆದರೂ ಸಿಗಲಿಲ್ಲ ಪ್ರಾಮುಖ್ಯತೆ

ಆದರೂ ಸಿಗಲಿಲ್ಲ ಪ್ರಾಮುಖ್ಯತೆ

ಆದರೂ, ಹಠ ಬಿಡದ ಡಿಕೆಶಿ, ಪರಮೇಶ್ವರ್ ಹರಸಾಹಸ ಮಾಡಿ ಮಂತ್ರಿಮಂಡಲ ಸೇರಿದರು. ಆದರೆ, ಅಲ್ಲಿಗೆ ಎಲ್ಲವೂ ಸರಿ ಹೋಗಲಿಲ್ಲ.ಕೃಷ್ಣ ಅವರ ಬೆಂಬಲಿಗರಿಗೆ ಹೇಳಿಕೊಳ್ಳುವಂಥ ಬೆನಿಫಿಟ್ ಆಗಲಿಲ್ಲ. ಅದಕ್ಕೆ ಕಾರಣ, ಸಿದ್ದರಾಮಯ್ಯನವರ ಪ್ರಭಾವ. ಅದಕ್ಕೂ ಮಿಗಿಲಾಗಿ ಅವರ ಮೇಲಿರುವ ಹೈಕಮಾಂಡ್ ಕೃಪೆ.

ಅತೃಪ್ತರ ಬಣದಲ್ಲಿ ಏರಿದ ಕಾವು

ಅತೃಪ್ತರ ಬಣದಲ್ಲಿ ಏರಿದ ಕಾವು

ಇದರ ಪರಿಣಾಮವಾಗಿಯೇ, ಕೃಷ್ಣ ಬೆಂಬಲಿಗರಿಗೆ ಯಾವುದೇ ರೀತಿಯ ಪ್ರಾಮುಖ್ಯತೆ ಸಿಗಲೇ ಇಲ್ಲ. ಇನ್ನು ವೈಯಕ್ತಿಕವಾಗಿಯೂ ಕೃಷ್ಣ ಅವರ ಮಾತು ನಡೆಯದಂತೆ, ಅವರು ಕೂಗಿ ಹೇಳಿದರೂ ಕೇಳದಂಥ ದೂರಕ್ಕೆ ಅವರನ್ನು ನಿಲ್ಲಿಸಿಬಿಟ್ಟಿತ್ತು ಕಾಂಗ್ರೆಸ್ ಪಕ್ಷ. ಎಷ್ಟರ ಮಟ್ಟಿಗೆ ಅವರನ್ನು ನಿರ್ಲಕ್ಷಿಸಲಾಗಿತ್ತೆಂದರೆ ಬೆಂಗಳೂರಿನಲ್ಲೇ ನಡೆದ ಹಲವಾರು ಪಕ್ಷದ ಸಮಾವೇಶಗಳಿಗೆ ಸೌಜನ್ಯಕ್ಕಾದರೂ ಅವರನ್ನು ಆಹ್ವಾನಿಸಲಿಲ್ಲ. ಇದು ಕೃಷ್ಣ ಹಾಗೂ ಅವರ ಬೆಂಬಲಿಗರ ಬೇಸರ ಬೆಟ್ಟದಷ್ಟು ಬೆಳೆಯಲು ಕಾರಣವಾಯಿತು.

ಸಂಪುಟ ಪುನರಾಚನೆ ಭುಗಿಲು

ಸಂಪುಟ ಪುನರಾಚನೆ ಭುಗಿಲು

ಇದೆಲ್ಲದರ ಬೆನ್ನಿಗೆ ಕೆಲವಾರು ತಿಂಗಳುಗಳ ಹಿಂದಾದ ಸಂಪುಟ ಪುನಾರಚನೆ ಈ ಉರಿಯುವ ಬೆಂಕಿಗೆ ತುಪ್ಪ ಸುರಿಯಿತು. ಅವರ ಪರಿಣಾಮ, ಸಚಿವ ಸ್ಥಾನ ವಂಚಿತ ಶ್ರೀನಿವಾಸ್ ಪ್ರಸಾದ್ ಬಿಜೆಪಿಗೆ ವಲಸೆ ಹೋದರು. ಮಂಡ್ಯ ಪ್ರಾಂತ್ಯದ ಪ್ರಮುಖ ರಾಜಕಾರಣಿ ಅಂಬರೀಶ್ ಅವರೂ ನೊಂದುಕೊಂಡರು. ದಾವಣಗೆರೆಯ ಹಿರಿಯ ರಾಜಕಾರಣಿ ಶ್ಯಾಮನೂರು ಶಿವಶಂಕರಪ್ಪ ಸಂಪುಟದಿಂದ ಹೊರಬಂದ ಕೂಡಲೇ ಮರ್ಸಿಡಿಸ್ ಕಾರು ಕೊಂಡು ಸಿದ್ದರಾಮಯ್ಯನವರಿಗೆ ತಮ್ಮ ಗತ್ತು ತೋರಿಸಿದರು. ಪಟ್ಟಿ ಮಾಡಿದರೆ, ಇಂಥ ಅಸಮಾಧಾನಗಳು ಬೇಕಾದಷ್ಟು ಸಿಗುತ್ತವೆ.

ವಲಸಿಗರ ಅಳಲು

ವಲಸಿಗರ ಅಳಲು

ಒಟ್ಟಾರೆಯಾಗಿ ಈ ಎಲ್ಲಾ ಬೆಳವಣಿಗೆಗಳೂ ಕಾಂಗ್ರೆಸ್ಸಿನಲ್ಲಿ ಭಿನ್ನಮತೀಯರ ಸಂಖ್ಯೆಯನ್ನು ಹೆಚ್ಚಿಸಿತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಸಿದ್ದರಾಮಯ್ಯನವರ ಬಳಗದ ಮೇಲುಗೈ ಕಾಂಗ್ರೆಸ್ಸಿನಲ್ಲಿ ಮೂಲ ನಿವಾಸಿಗಳ, ವಲಸಿಗರ ನಡುವಿನ ದೊಡ್ಡ ಕಂದಕವನ್ನೇ ಸೃಷ್ಟಿಸಿತು. ದಿನೇ ದಿನೇ ಆ ಕಂದಕ ಮತ್ತಷ್ಟು ಮಗದಷ್ಟು ಹಿರಿದಾಗುತ್ತಾ ಸಾಗಿತು.

ಕೃಷ್ಣ ತಂದರು ಸಮಾನ ವೇದಿಕೆ

ಕೃಷ್ಣ ತಂದರು ಸಮಾನ ವೇದಿಕೆ

ಅಸಮಾಧಾನದಿಂದ ಬುಸುಗುಡುತ್ತಿದ್ದ ಈ ಎಲ್ಲಾ ನಾಯಕರಿಗೂ ಈಗ ಎಸ್. ಎಂ. ಕೃಷ್ಣ ಅವರ ರಾಜಿನಾಮೆ ಹೊಸತೊಂದು ಆಶಾಕಿರಣವನ್ನು ತಂದಿದೆ. ತಮ್ಮ ಸ್ವಾಭಿಮಾನಕ್ಕಾದ ಅಪಮಾನಗಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಸುಸಮಯ ಬಂದೊದಗಿತು ಎನ್ನುವಂತಾಗಿದೆ.

ಬಿಜೆಪಿಗೆ ಆಗಲಿದೆಯೇ ನೇರ ಲಾಭ?

ಬಿಜೆಪಿಗೆ ಆಗಲಿದೆಯೇ ನೇರ ಲಾಭ?

ಹಾಗಾಗಿಯೇ, ಕೃಷ್ಣ ಅವರ ಮುಂದಿನ ಹೆಜ್ಜೆ ಏನು ಎಂಬುದು ಸದ್ಯಕ್ಕೆ ಎಲ್ಲರ ಕುತೂಹಲ ಕೆರಳಿಸಿದೆ. ಒಂದೆಡೆ, ಕೃಷ್ಣ ಬಿಜೆಪಿಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ರಾಜಿನಾಮೆಗೂ ಮುನ್ನ ಕೃಷ್ಣ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿರುವ ಬಗ್ಗೆಯೂ ಸುದ್ದಿಗಳು ಇದಕ್ಕೆ ಪುಷ್ಟಿಯನ್ನು ನೀಡಿವೆ. ಅಲ್ಲದೆ, ಸೋಮವಾರ ತಮ್ಮ ಸೋಮನ ಹಳ್ಳಿಯಲ್ಲಿ ಮಾತನಾಡಿದ ಕೃಷ್ಣ, ಹಿಂದೆ ಕಾಂಗ್ರೆಸ್ ಪಕ್ಷದ ವಿರುದ್ಧವೇ ನಾನು ರಾಜಕೀಯ ಪ್ರವೇಶಿಸಿದ್ದೆ (ಸೋಷಿಯಲಿಸ್ಟ್ ಪಾರ್ಟಿ ಮೂಲಕ) ಎಂದು ಮಾರ್ಮಿಕವಾಗಿ ಹೇಳಿರುವುದು ಅವರ ದೃಷ್ಟಿ ಬೇರೆ ಕಡೆಗೆ ಇದೆ ಎನ್ನುವುದನ್ನು ಸೂಚ್ಯವಾಗಿದೆ.

ಹಳೇ ಹುಲಿಗಳ ಮುಂದಿನ ನಡೆಯೇನು?

ಹಳೇ ಹುಲಿಗಳ ಮುಂದಿನ ನಡೆಯೇನು?

ಹಾಗಾದಲ್ಲಿ ಕೃಷ್ಣ ಅವರಿಗೆ ಬಿಜೆಪಿ ಖಂಡಿತವಾಗಿಯೂ ಕೆಂಪು ಹಾಸಿನ ಸ್ವಾಗತ ನೀಡುವುದು ಶತ ಸಿದ್ಧ. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರೂ, ಕೃಷ್ಣ ಅವರು ಬಿಜೆಪಿಗೆ ಬಂದರೆ ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ. ಹಾಗೇನಾದರೂ, ಅವರು ಬಿಜೆಪಿಗೆ ಹೋದರೆ, ಅವರ ಬೆಂಬಲಿಗರು ಏನು ಮಾಡುತ್ತಾರೆ? ಕಾಂಗ್ರೆಸ್ಸಿನ ಮೂಲ ನಿವಾಸಿಗಳಾದ ಜಾಫರ್ ಶರೀಫ್, ಜನಾರ್ಧನ ಪೂಜಾರಿ, ಎಂ.ವಿ. ರಾಜಶೇಖರನ್ ಅವರಂಥವರ ಮುಂದಿನ ನಡೆಯೇನು?

ಮುತ್ಸದ್ದಿಯನ್ನು ಹಿಂಬಾಲಿಸುವರೇ?

ಮುತ್ಸದ್ದಿಯನ್ನು ಹಿಂಬಾಲಿಸುವರೇ?

ಅಷ್ಟೇ ಅಲ್ಲ, ಸಿದ್ದರಾಮಯ್ಯ ಸಂಪುಟದಲ್ಲಿರುವ ಪರಮೇಶ್ವರ್, ಡಿಕೆ ಶಿವಕುಮಾರ್ ತಮ್ಮ ಮೆಂಟರ್ ರನ್ನು ಹಿಂಬಾಲಿಸುತ್ತಾರಾ? ಅಥವಾ ಕಾಂಗ್ರೆಸ್ಸಿನಲ್ಲಿದ್ದುಕೊಂಡೇ ಅವರಿಗೆ ಪರೋಕ್ಷ ಬೆಂಬಲ ನೀಡುತ್ತಾರಾ ಅಥವಾ, ಪುರಾಣದ ಮಹಾಭಾರತದಲ್ಲಾದಂತೆ ನೇರವಾಗಿ ಯುದ್ಧದಲ್ಲಿ ಭಾಗವಹಿಸದೇ ಕೇವಲ ಸಾರಥಿಯಾಗಿದ್ದುಕೊಂಡೇ ಕುರುಕ್ಷೇತ್ರ ಸಮರಕ್ಕೆ ಮಹತ್ವದ ತಿರುವುಗಳನ್ನು ಕೊಟ್ಟ ಶ್ರೀಕೃಷ್ಣನಂತೆ, ಸೋಮನ ಹಳ್ಳಿಯ ಕೃಷ್ಣ ಸಹ ನಡೆದುಕೊಳ್ಳುತ್ತಾರಾ?

ಕಾದು ನೋಡುವ ತಂತ್ರವಿದೆಯೇ?

ಕಾದು ನೋಡುವ ತಂತ್ರವಿದೆಯೇ?

ಇದಷ್ಟೇ ಅಲ್ಲದೆ, ಕೃಷ್ಣ ಅವರ ಈ ನಿರ್ಧಾರ ಹಾಗೂ ಮುಂದಾಗಬಹುದಾದ ಕಾಂಗ್ರೆಸ್ ಇಬ್ಭಾಗದಿಂದ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಗೆ ಏನು ಲಾಭ ? ಈ ಎಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಲಿದೆ.

English summary
Former CM of Karnataka and former Minister in UPA government S M Krishnas resignation from Primary Membership of Congress party has infused freshness to bunch of senior but sidelined politicians in the State. Those who are hurt by Siddaramaiahs style of functioning have flocked together, for a Cause!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X