Shreyas Iyer: ಟೀಂ ಇಂಡಿಯಾ ಟಿ-20ಗೆ ಶ್ರೇಯಸ್ ಅಯ್ಯರ್ ನಾಯಕ: ವರದಿ
Shreyas Iyer: ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ ಅವರು ಬ್ಯಾಟಿಂಗ್ ಪ್ರದರ್ಶನದಲ್ಲಿ ಸತತವಾಗಿ ವಿಫಲವಾಗುತ್ತಿದ್ದಾರೆ. ಆದ್ದರಿಂದ ಪಂಜಾಬ್ ಕಿಂಗ್ಸ್ ಪರ ನಾಯಕತ್ವದ ಜೊತೆಗೆ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಉತ್ತಮ ಫಾರ್ಮ್‌ನಲ್ಲಿರುವ ಶ್ರೇಯಸ್ ಅಯ್ಯರ್ ಹೆಗಲಿಗೆ ಟೀಂ ಇಂಡಿಯಾ ಟಿ20 ನಾಯಕತ್ವದ ಪಟ್ಟ ಕಟ್ಟುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡವು 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದರೂ, ಅವರ ಬ್ಯಾಟಿಂಗ್ ಫಾರ್ಮ್ ಕುರಿತು ಬಿಸಿಸಿಐ ಗಂಭೀರವಾಗಿ ಯೋಚಿಸುತ್ತಿದೆ. ಸೂರ್ಯಕುಮಾರ್ ಅವರ ಬ್ಯಾಟಿಂಗ್ ಲಯ ಕುಸಿಯುತ್ತಿರುವುದು ಮತ್ತು ಅವರ ಗಾಯದ ಸಮಸ್ಯೆಗಳಿಂದಾಗಿ ಆಯ್ಕೆ ಸಮಿತಿಯು ನಾಯಕತ್ವದ ಬದಲಾವಣೆಗೆ ಮುಂದಾಗಿದೆ ಎಂದು ತಿಳಿದಿಬಂದಿದೆ.

ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ಸ್ಥಾನ?
ಐಪಿಎಲ್ 2026ರ ನಂತರ ನಡೆಯಲಿರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಶ್ರೇಯಸ್ ಅಯ್ಯರ್ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಉತ್ತಮವಾಗಿ ಮುನ್ನಡೆಸುತ್ತಿರುವ ಹಿನ್ನೆಲೆ ಅವರು ಟೀಂ ಇಂಡಿಯಾ ಟಿ20 ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ರನ್ ಗಳಿಸಲು ಪರದಾಡುತ್ತಿರುವ ಸೂರ್ಯ
35 ವರ್ಷದ ಸೂರ್ಯಕುಮಾರ್ ಯಾದವ್ ಅವರು ವಿಶ್ವಕಪ್ ಮತ್ತು ಪ್ರಸಕ್ತ ಐಪಿಎಲ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲು ವಿಫಲರಾಗಿದ್ದಾರೆ. ಆದ್ದರಿಂದ ಮುಂಬರುವ 2028ರ ಒಲಿಂಪಿಕ್ಸ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಬಿಸಿಸಿಐ ಯುವ ನಾಯಕನ ಹುಟುಕಾಟದಲ್ಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೂರ್ಯಕುಮಾರ್ ಯಾದವ್ ಅವರ ಟಿ20 ಅಂಕಿಅಂಶಗಳು ಅದ್ಭುತವಾಗಿದ್ದರೂ, ಭಾರತ ತಂಡದ ನಾಯಕರಾದಾಗಿನಿಂದ ಅವರ ಬ್ಯಾಟಿಂಗ್ ಲಯ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಒಟ್ಟು 242 ರನ್ ಗಳಿಸಿದ್ದರು. ಇದರಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ದಾಖಲಾಗಿತ್ತು. ಅದು ಕೂಡ ಆರಂಭಿಕ ಪಂದ್ಯದಲ್ಲಿ ಅಮೆರಿಕ (ಯುಎಸ್ಎ) ವಿರುದ್ಧ ಬಂದಿತ್ತು.
ಪ್ರಸಕ್ತ ಐಪಿಎಲ್ 2026 ಸೀಸನ್‌ನಲ್ಲೂ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಪರ ಆಡಿದ 10 ಪಂದ್ಯಗಳಲ್ಲಿ ಕೇವಲ 195 ರನ್ ಗಳಿಸಿದ್ದಾರೆ. ಒಬ್ಬ ನಾಯಕನಾಗಿ ತಂಡವನ್ನು ಮುನ್ನಡೆಸುವಾಗ ಬ್ಯಾಟಿಂಗ್‌ನಲ್ಲಿ ಈ ರೀತಿಯ ಅಂಕಿಅಂಶಗಳನ್ನು ಹೊಂದಿರುವುದು ಅವರ ನಾಯಕತ್ವದ ಸ್ಥಾನದ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ಆಯ್ಕೆ ಸಮಿತಿಯು ಇವರನ್ನು ನಾಯಕತ್ವದಿಂದ ಕೆಳಗಿಳಿಸುವ ಆಲೋಚನೆಯಲ್ಲಿರಲು ಈ ಕಳಪೆ ಫಾರ್ಮ್ ಪ್ರಮುಖ ಕಾರಣವಾಗಿದೆ.
ಟಿ20 ಸರಣಿ ಸೋಲದ ಎಸ್‌ಕೆವೈ
ಬ್ಯಾಟಿಂಗ್‌ನಲ್ಲಿ ಫಾರ್ಮ್ ಕೊರತೆ ಎದುರಿಸುತ್ತಿದ್ದರೂ ರೋಹಿತ್ ಶರ್ಮಾ ಅವರ ನಿವೃತ್ತಿಯ ನಂತರ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಸೂರ್ಯಕುಮಾರ್ ಈವರೆಗೆ ಒಂದೂ ಟಿ20 ಸರಣಿಯನ್ನು ಸೋತಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಈ ಅವಧಿಯಲ್ಲಿ ಅವರು ಯಾವುದೇ ಟಿ20 ಸರಣಿಯನ್ನು ಎದುರಾಳಿಗಳಿಗೆ ಬಿಟ್ಟುಕೊಟ್ಟಿಲ್ಲ.
ಸೂರ್ಯಕುಮಾರ್ ಅವರು ಮುಂಬರುವ ಕನಿಷ್ಠ ಎರಡು ವರ್ಷಗಳ ಕಾಲ ಭಾರತ ತಂಡದ ನಾಯಕನಾಗಿ ಮುಂದುವರಿಯುವ ಇಚ್ಛೆಯನ್ನು ಹಲವು ಬಾರಿ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ರನ್‌ಗಳ ಗಳಿಕೆಯಲ್ಲಿ ಹಿನ್ನಡೆಯಾಗಿದ್ದರೂ ತಂಡವನ್ನು ಉತ್ತಮವಾಗಿ ಗೆಲುವಿನತ್ತ ಮುನ್ನಡೆಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ ಸಮಿತಿಯು ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ.
ಉತ್ತಮ ಫಾರ್ಮ್‌ನಲ್ಲಿರುವ ಶ್ರೇಯಸ್ ಅಯ್ಯರ್
ಮತ್ತೊಂದೆಡೆ ಭಾರತ ಟಿ20 ತಂಡದ ಮುಂದಿನ ನಾಯಕನಾಗಲು ಶ್ರೇಯಸ್ ಅಯ್ಯರ್ ಮುಂಚೂಣಿಯಲ್ಲಿದ್ದಾರೆ. ಪ್ರಸಕ್ತ ನಡೆಯುತ್ತಿರುವ ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಉತ್ತಮ ನಾಯಕತ್ವದ ಮೂಲಕ ಗಮನ ಸೆಳೆದಿದ್ದಾರೆ. ಅವರ ನೇತೃತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಆಡಿದ ಮೊದಲ ಏಳು ಪಂದ್ಯಗಳಲ್ಲಿ ಆರು ಗೆಲುವುಗಳನ್ನು ಸಾಧಿಸಿ ಭರ್ಜರಿ ಪ್ರದರ್ಶನ ನೀಡಿದೆ.
ಕೇವಲ ನಾಯಕತ್ವದಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಮಿಂಚುತ್ತಿರುವ ಅಯ್ಯರ್ ಈವರೆಗೆ ಆಡಿರುವ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 333 ರನ್ ಗಳಿಸಿದ್ದಾರೆ. ಈ ಅದ್ಭುತ ಫಾರ್ಮ್ ಮತ್ತು ತಂಡವನ್ನು ಮುನ್ನಡೆಸುವ ಅವರ ಕೌಶಲವೇ ಅವರನ್ನು ಟೀಂ ಇಂಡಿಯಾ ಟಿ20 ನಾಯಕತ್ವದ ಸ್ಪರ್ಧಿಯನ್ನಾಗಿ ಮಾಡಿದೆ. ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ಭಾರತ ತಂಡದ ನಾಯಕನನ್ನಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications