ಕನಸು ಬಿತ್ತಲಾಗದವರನ್ನು ಜನರು ಪಕ್ಕಕ್ಕೆ ಸರಿಸುತ್ತಾರೆ: ಕಾಂಗ್ರೆಸ್, ಎಡಪಕ್ಷಗಳ ಹಿನ್ನಡೆಗೆ ಏನು ಕಾರಣ - ವೈ.ಎನ್.ಮಧು ವಿಶ್ಲೇಷಣೆ
Congress & Left Decline: ಕನಸು ಬಿತ್ತಲಾಗದವರನ್ನು ಜನರು ಪಕ್ಕಕ್ಕೆ ಸರಿಸುತ್ತಾರೆ: ಕಾಂಗ್ರೆಸ್, ಎಡಪಕ್ಷಗಳ ಹಿನ್ನಡೆಗೆ ಏನು ಕಾರಣ - ವೈ.ಎನ್.ಮಧು ಅವರ ವಿಶ್ಲೇಷಣೆ ಬರಹ ಇಲ್ಲಿದೆ. ನನಗೆ ಪ್ರತಿಸಲ ಈ ಎಡಕ್ಕಿರುವವರ ಬಗ್ಗೆ ಅಯ್ಯೋ ಎಂದು ಮರುಗಬೇಕೋ ಅಥವಾ ಸಿಟ್ಟಿನಿಂದ ಏನಾದರೂ ಅನ್ನಬೇಕೋ ಅರ್ಥವಾಗದ ಬಿಕ್ಕಟ್ಟು. ಯಾಕೆಂದರೆ ಇವರಲ್ಲಿ ಬಹುತೇಕರು ವಯಸ್ಸಿನಲ್ಲಿ ಬಹಳ ಹಿರಿಯರು, ತಿಳಿದವರು, ಅವರ ಕಾಲದಲ್ಲಿ ಪ್ರಬುದ್ಧರು. ಆದ್ದರಿಂದ ತೀರ ಅವರ ಭಾಷೆಯಲ್ಲಿಯೇ ಉತ್ತರಿಸಲು ಹೋದರೆ ಮನಸ್ಸಿಗೆ ನೊಂದುಕೊಳ್ತಾರೆ. ಆದರೆ ಅವರು ಮಾತ್ರ ಲೀಲಾಜಾಲವಾಗಿ ಏನು ಬೇಕಾದರೂ ಅನ್ನುತ್ತಿರುತ್ತಾರೆ.
ನನಗನ್ಸುತ್ತೆ ಒಂದು ಹಂತದ ನಂತರ ಇವರ ಮೆದುಳು Observation ಶಕ್ತಿಯನ್ನು ಕಳೆದುಕೊಂಡುಬಿಟ್ಟಿದೆ ಎಂದು. ಅಂದಿನಿಂದ ಇವರು ತಮ್ಮನ್ನು ಒಪ್ಪದವರನ್ನು, ತಮ್ಮನ್ನು ಆಲಿಸಿಕೊಳ್ಳದವರನ್ನು ಗುಂಪುಗಟ್ಟಿ ಉಪ್ಪಿಟ್ಟು ತಿನ್ನುತ್ತ ಲಂಡಭಕ್ತ ಎನ್ನುತ್ತ ಕ್ಯಾಕ ಹೊಡೆದುಕೊಂಡು ತೃಪ್ತರಾಗಿ ವಯಸ್ಸು ಸವೆಸುತ್ತಿದ್ದಾರೆಯೇ ಹೊರತು ಸರಣಿ ಪಟಾಕಿ ಥರ ಮೂರು ನಾಲ್ಕು ದಶಕಗಳಿಂತ ಸೋತು ಸೋತು ಸುಣ್ಣವಾಗಿರುವ, ಅದು ಬಿಡಿ- ಸಮಾಜಕ್ಕೆ ತೀರಾ ಅಪ್ರಸ್ತುತರಾಗುತ್ತಿರುವ ಮಟ್ಟಕ್ಕೆ ತಲುಪಿರುವ ಬಗ್ಗೆ ಒಂದು ಚಿಕಿತ್ಸಕ ದೃಷ್ಟಿಯನ್ನೇ ಕಳೆದುಕೊಂಡಿರುವುದು ಯಾಕೆಂದು ಕೂತು ಯೋಚಿಸುವುದಿಲ್ಲ. ಗಂಭೀರ ಚಿಂತನೆ ನಡೆಸಿಲ್ಲ. ಸ್ವವಿಮರ್ಶೆಯಂತೂ ಇಲ್ಲವೇ ಇಲ್ಲ.

ತನ್ನ ಸೋಲಿಗೆ ಎದುರಾಳಿ ಕೆಟ್ಟದಾಗಿ ಆಡಿದ ಎಂಬುದು ಇವರಲ್ಲಿರುವ ಏಕೈಕ ಸಮಾಧಾನ. ಈ ರೋಗವನ್ನು ರಾಜಕೀಯ ಪಕ್ಷಗಳಿಗೂ ತುಂಬಿದ್ದಾರೆ. ವಿರೋಧ ಪಕ್ಷಗಳೂ ಕಡೆಯ ಐದಾರು ವರ್ಷಗಳಿಂದ ಅದೇ ರಾಗ ಹಾಡಿಕೊಂಡು ಸುಖಿಸುತ್ತಿರುವುದು ದುರಂತಗಳಲ್ಲಿ ದುರಂತ. ಭಕ್ತರು ಎರಡೂ ಕಡೆಗೆ ಇರುತ್ತಾರೆ. ನೀವು ಯಾವ ಸರ್ಕಸ್ ಮಾಡಿದರೂ ಅವರು ತಮ್ಮ ನಿಲುವನ್ನು, ಓಟನ್ನು ಬದಲಾಯಿಸುವುದಿಲ್ಲ.
ಆದರೆ ಈ ಭಕ್ತರು ಚುನಾವಣೆಯ ಫಲಿತಾಂಶ ನಿರ್ಧರಿಸುವುದಿಲ್ಲ. ಅದನ್ನು ನಿರ್ಧರಿಸುವುದು ತಮ್ಮ ಯೋಚನೆ ಮತ್ತು ಓಟನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುವವರು. ಅದರ ಅರ್ಥ ಅವರು ಯಾವುದೇ ತಂಡಕ್ಕೆ ಭಕ್ತರಾಗಿರುವುದಿಲ್ಲ. ವಿರೋಧ ಪಕ್ಷಗಳು ಪದೇ ಪದೇ ಸಾಲು ಸಾಲಾಗಿ ಚುನಾವಣೆಗಳನ್ನು ಸೋಲುತ್ತಿರುವುದು ಈ ಬಗೆಯ ಭಕ್ತರಲ್ಲದ ಜನರನ್ನು ಒಲಿಸಿಕೊಳ್ಳುವುದರಲ್ಲಿ. ಎಷ್ಟು ಸರಳವಿದೆ ಈ ಸತ್ಯ! ಪ್ರೊಫೌಂಡ್ ವಿಸ್ಡಮ್, ಆಳವಾದ ವಿಶ್ಲೇಷಣೆ, ಅತ್ಯುನ್ನತ ಬೌದ್ಧಿಕ ಶಕ್ತಿ: ಕುಟ್ಟಿ ಕುಟ್ಟಿ ಈ ತನಕ ತಾವೆಲ್ಲರೂ ಬಗೆದದ್ದೇನು?
ನಿಜವಾದ ಭಕ್ತರು ಯಾವಾಗಲೂ ತಮ್ಮ ತಮ್ಮ ಬಾವಿಯಲ್ಲೇ ಇರುವುದರಿಂದ ದಿನವೂ ತಮ್ಮ ಸುತ್ತಲಿನ ಕಪ್ಪೆಗಳ ವಟವಟವನ್ನೇ ಆಲಿಸುವುದರಿಂದ ಅವರಿಗೆ ಈ ಬಾವಿಯಿಂದ ಹೊರಗಿರುವ ಜನ ಹೇಗೆ ಯೋಚಿಸುತ್ತಾರೆಂದು ಸ್ವಲ್ಪವೂ ಕಲ್ಪನೆಯಲ್ಲಿ ಇರುವುದಿಲ್ಲ, ವಟರ್ ವಟರ್‌ಗಿಂತ ಮಧುರವಾದ್ದು ಏನೂ ಕೇಳಿಸುವುದಿಲ್ಲ. ಇದ್ದಿದ್ದರೆ ಸಾಮಾನ್ಯ ಜನರನ್ನು ಅವಿವೇಕಿಗಳು, ಲಂಡಭಕ್ತರು ಎಂದು ಬೈದುಕೊಂಡು ತಿರುಗುತ್ತಿರಲಿಲ್ಲ. ಯಾಕಂದರೆ ಮೇಲೆ ಹೇಳಿದ ಮ್ಯಾಥ್ಸ್‌ನಂತೆ ಭಕ್ತರು ಬದಲಾಗುವುದಿಲ್ಲ. ಬದಲಾಗುವವರು ಭಕ್ತರಲ್ಲ!
2024ರಲ್ಲಿ ಶೇ. 60% ಜನ ಬಿಜೆಪಿಗೆ ಓಟು ಹಾಕಿಲ್ಲ. ಸಂಸತ್ತಿನಲ್ಲಿ 250 ಸಂಸದರು ಎನ್‌ಡಿಯೇತ ರರಿದ್ದಾರೆ. ಅಂದರೆ ಶೇ.50 ರಷ್ಟು. ಅಂದರೆ ಆಡಳಿತ ಪಕ್ಷದ ನಡೆ ನುಡಿಯ ಮೇಲೆ ಸುಮಾರು ಅರ್ಧ ದೇಶದ ಕಣ್ಣುಗಳ ಕಾವಲು ಇದೆ. ಈ ಮಟ್ಟದ ಕಾವಲು ತಪ್ಪಿಸಿ ಒಂದು ಸರಕಾರ, ಒಂದಷ್ಟು ಅಧಿಕಾರಿಗಳು ವಿವಿಪ್ಯಾಟ್ ಹಿಡಿದುಕೊಂಡು ಚುನಾವಣೆಯ ಮಟ್ಟದಲ್ಲಿ ಮೋಸ ಎಸಗುತ್ತಾರೆ ಎಂದು ನಂಬಿ ಕೂರುತ್ತೀರಲ್ಲ ನೀವು.
ಅಟೋಮೇಟೆಡ್ ಇರುವ, ಪ್ರತಿ ಸಲ ಪರೀಕ್ಷಿಸಿ ರುಜುವಾತು ಪಡಿಸಬಹುದಾದ ಟೆಕ್ನಾಲಜಿ ಬಿಟ್ಟು ಪುರಾತನ ಕಾಲದ ಬ್ಯಾಲೆಟ್ ಕೇಳ್ತಿದ್ದೀರಿ ಎಂದರೆ ಜನರು ಹೆಚ್ಚಾಗಿ ನಿಮ್ಮನ್ನು ಅನುಮಾನಿಸುತ್ತಾರೆ, ಇದು ನಿಜ, ಇದು ಯಾಕೆ ನಿಮಗೆ ಅರ್ಥವಾಗುತ್ತಿಲ್ಲ, ಯಾರೂ ಯಾಕೆ ನಿಮಗೆ ಇದನ್ನು ಬಿಡಿಸಿ ಹೇಳ್ತಿಲ್ಲ ಎಂಬುದು ನನಗೆ ಮಿಸ್ಟರಿ.
ಅಕಸ್ಮಾತ್ ಮೋಸ ಆಗ್ತಿದ್ದರೆ ಅದು ಆಗಲು ಬಿಟ್ಟಿರುವ ಹೊಣೆ ವಿರೋಧ ಪಕ್ಷಗಳ ಮೇಲೆಯೇ ಇರುತ್ತದೆ. ಯಾಕಂದರೆ ಆರೋಪ ಮಾಡಿ ನೀವು ಪ್ರೂವ್ ಮಾಡಲಿಲ್ಲಾಂದರೆ ಜನ ನಿಮ್ಮನ್ನು ಕಳ್ಳ ಸುಳ್ಳ ಎಂದು ಭಾವಿಸುತ್ತಾರೆ! ಎಷ್ಟು ಅಧಿಕಾರಿಗಳು ಬಿಜೆಪಿ ಪರ ಇರಲು ಸಾಧ್ಯ ಹೇಳಿ. ಉಳಿದ ಅರ್ಧ ಭಾರತದಲ್ಲಿ ಯಾರೂ ಈ ಎಲೆಕ್ಷನ್ ಡಿಪಾರ್ಟ್‌ಮೆಂಟಿನೊಳಗೆ ಇಲ್ಲವೇ, ಅವರಿಗೆ ವಾಸನೆ ಹೊಡಿದಿಲ್ಲವೇ, ಸತ್ಯ ಗೊತ್ತಿಲ್ಲವೇ. ಎಸ್‌ಐಆರ್ ಬಗ್ಗೆ ಕಂಪ್ಲೇಂಟು.
ಇಲ್ಲಿಯೂ ಸಹ ಅನರ್ಹಗೊಂಡ ವೋಟರ್ ಐಡಿ ಯಾವ ಪಕ್ಷಕ್ಕೆ ಓಟ್ ಹಾಕ್ತಾನೆ ಎಂದು ಅಧಿಕಾರಿಗಳಿಗೆ ಹೇಗೆ ಗೊತ್ತಿರುತ್ತದೆ. ಒಂದು ಅಂದಾಜಿನ ಮೇಲೆ ಮುಸ್ಲಿಂ ಹೆಸರುಗಳನ್ನು ಹೆಚ್ಚಾಗಿ ತೆಗೆದಿರುತ್ತಾರೆ ಎಂದಿಟ್ಟುಕೊಳ್ಳೋಣ. ಇದು ಆಗಿದ್ದಲ್ಲಿ ಲಕ್ಷ ಲಕ್ಷ ತೆಗೆದಿದ್ದಾರೆ, ನಿಮಗೆ ಒಂದು ಸಾವಿರ ಜನ ಅನ್ಯಾಯಕ್ಕೊಳಗಾದವರು ಸಿಗಲಿಲ್ಲವೇ. ಅವರನ್ನು ಕರೆದುಕೊಂಡು ಹೋಗಿ ಕೇಸ್ ದಾಖಲಿಸಬಹುತ್ತಿಲ್ಲ? ಒಂದು ಹೋರಾಟ ಎಂದು ಮಾಡಬಹುದಿತ್ತಲ್ಲ? ಜನರ ಎದುರು ನಿಲ್ಲಿಸಿ ನೋಡಿ ಇಲ್ಲಿ ಮೋಸ ಆಗ್ತಿದೆ ಎಂದು ಅರಿವು ಮೂಡಿಸಬಹುದಿತ್ತಲ್ಲ?
ಇನ್ನೊಂದು ಗೊಣಗಾಟ. ವಿರೋಧ ಪಕ್ಷಗಳು ಒಂದಾಗಿ ಹೋರಾಡ್ತಿಲ್ಲ ಎಂದು. 43, 40, 35 ಹೀಗೆ ಮೊದಲ ಮೂರು ಸ್ಥಾನಗಳಲ್ಲಿ ಮೊದಲು ಬಿಜೆಪಿ ಇದ್ದರೆ ಎರಡು ಮತ್ತು ಮೂರನ್ನು ಕೂಡಿಸಿ ನೊಂದುಕೊಳ್ಳುವುದು. ಚಿಕ್ಕಮಕ್ಕಳು ಸುಳ್ಳೇ ದುಡ್ಡು ಎಣಿಸುತ್ತಾರಲ್ಲ ಹಾಗೆ. ಐಪಿಎಲ್ ಪಟ್ಟಿಯಲ್ಲಿ ಮೊದಲ ತಂಡದ ಅಂಕಗಳನ್ನು ಎರಡು ಮತ್ತು ಮೂರನೇ ಸ್ಥಾನದ ಎರಡು ತಂಡಗಳ ಅಂಕ ಸೇರಿಸಿ ಚ್ಚೊ ಚ್ಚೊ ಚ್ಚೊ ಎಂದು ಲೊಚಗುಟ್ಟಿದರೆ ಏನು ಅರ್ಥ ಬಂತು? ಬಿಜೆಪಿ ಒಂದು ನಿರ್ದಿಷ್ಟ ಐಡಿಯಾಲಜಿ. ಕಾಂಗ್ರೆಸ್ ಒಂದು ನಿರ್ದಿಷ್ಟ ಐಡಿಯಾಲಜಿ.
ಇನ್ನೊಂದು ಪಕ್ಷ ಇನ್ನೊಂದು ನಿರ್ದಿಷ್ಟ ಐಡಿಯಾಲಜಿ. ಮೂರೂ ಬೇರೆ, ಬೇರೆ. ಅದಕ್ಕೆ ನಾ ಹೇಳ್ತಿದ್ದೆ, ನೀವು ಬಿಜೆಪಿಯನ್ನು ಸೋಲಿಸಬೇಕೆಂದರೆ ನಿಮಗೆ ನಿಮ್ಮದೇ ಆದ ನಿರ್ದಿಷ್ಟವಾದ ಐಡಿಯಾಲಜಿ ಇರಬೇಕು. ಅದು ಬಿಜೆಪಿ ನೀತಿಗಳಿಂತ ಪ್ರಖರವಾಗಿರಬೇಕು. ನಮಗೆ ಆಗಲ್ಲ ನಮ್ಮತ್ರ ಅಂಥ ಶಕ್ತಿಯುತವಾದ್ದು ಏನೂ ಇಲ್ಲ ಈಗ ಎಂದರೆ ಇದ್ದ ಹಾಗೆಯೇ ಎಷ್ಟು ಸೀಟು ಬರುತ್ತದೆಯೋ ಅಷ್ಟು ಗಳಿಸಿ ಅದರೊಂದಿಗೆ ಹೋರಾಡುವುದು ಉತ್ತಮ ಮತ್ತು ಅದೇ ಪ್ರಾಮಾಣಿಕ.
ಹಾಡು ಹಗಲು ಜನರ ಕಣ್ಣಿಗೆ ರಾಚಿದಂತೆ ಚುನಾವಣೆ ಸಮಯದಲ್ಲಿ ಇಂಡಿಯಾ ಎಂಬ ಹೆಸರಿನಲ್ಲಿ ಒಂದುಗೂಡ್ತಾರೆ. ಆಮೇಲೆ ಒಂದೊಂದು ದಿಕ್ಕಿಗೆ ಮೂತಿ ತಿರುಗಿಸಿಕೊಂಡು ಹೋಗ್ತಾರೆ. ಇಲ್ಲಿಯೇ ಮತದಾರನಿಗೆ ಅವಿಶ್ವಾಸ ಮೂಡುವುದು. ಇವರಿಗೆ ನಾಯಕನೂ ಇಲ್ಲ, ನೀತಿಯೂ ಇಲ್ಲ ಎಂದು. ಇದೂ ಎಷ್ಟು ಸರಳ!
ಹಾಗಾದರೆ ಈ ಜನರಿಗೆ ಬಿಜೆಪಿಯ ತಪ್ಪುಗಳು ದ್ರೋಹಗಳು ಕಾಣಿಸುತ್ತಿಲ್ಲವೋ ಎಂಬ ಪ್ರಶ್ನೆ ಸಹಜ. ಕಾಣಿಸ್ತಿದೆ ಮಾರಾಯ್ರೇ. ಎಲ್ಲರಿಗೆ ಎಲ್ಲವೂ ಕಾಣಿಸ್ತಿದೆ. ಒಂದು ವಿಮಾನ ಹಾರಬೇಕೆಂದರೆ ಪೈಲಟ್ ಇರಬೇಕು, ಎಟಿಸಿ ಇರಬೇಕು, ರನ್‌ವೇ, ಜಿಪಿಎಸ್ ಏನೆಲ್ಲ ಇರಬೇಕು. ಪೈಲೆಟ್ ಎಂಥವನೇ ಇರಲಿ, ಅಲ್ಲಿ ಇಲ್ಲಿ ಒಂದು ಅಪಘಾತವಾಗಲಿ, ದುಡ್ಡು ಹೆಚ್ಚೇ ತೆಗೆದುಕೊಳ್ಳಲಿ, ಗಮ್ಯ ಮುಖ್ಯ. ಸುರಕ್ಷತೆಯ ಭಾವನೆ ಮುಖ್ಯ. ಒಂದು ಸಿಸ್ಟಂ ಇದೆ ಎಂಬ ನಂಬಿಕೆ ಮುಖ್ಯ ಎಂದು ನಿಮ್ಮಲ್ಲಿ ಒಬ್ಬ ನಾಯಕ, ಒಂದು ಧ್ವನಿ, ಒಂದು ನೀತಿ, ಒಂದು ತಂಡ ಎಂಬ ಸ್ಪಷ್ಟ ಪ್ಯಾಕೇಜ್ ಹೊರ ಬರುತ್ತದೆಯೋ ಅಂದು ಈ ಜನ ಖಂಡಿತ ನಿಮ್ಮ ಕಡೆಗೆ ತಿರುಗುತ್ತಾರೆ.
2014ರಲ್ಲಿ ಮೋದಿ ಅಧಿಕಾರಕ್ಕೆ ಬರುವಾಗ ಬರೀ ಮನಮೋಹನ್ ಸಿಂಗ್‌ರ ಆಡಳಿತ ಬೈದುಕೊಂಡು ಬರಲಿಲ್ಲ. ಅದು ಬಿಜೆಪಿಯ ಎಲೆಕ್ಷನ್ ಕ್ಯಾಂಪೇನಿನ ಅರ್ಧ ಭಾಗವಾಗಿತ್ತಷ್ಟೇ. ಇನ್ನರ್ಧ ಭಾಗದಲ್ಲಿ ನಾನು ಅಧಿಕಾರಕ್ಕೆ ಬಂದರೆ ಭಾರತವನ್ನು ಹೇಗೆ ಬದಲಾಯಿಸುತ್ತೇನೆ ಎಂಬ ಕಲ್ಪನೆ ತುಂಬಿಸುವುದರಲ್ಲಿತ್ತು. ಅದರಲ್ಲಿ ಬಹಳಷ್ಟು ಉತ್ಪ್ರೇಕ್ಷೆಯಿತ್ತು ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದು.
ನೀವು ಅಂಥದನ್ನು ಹಿಡಿದುಕೊಂಡು ರೀಲ್ ಮೇಲೆ ರೀಲ್ ಮಾಡಿಕೊಂಡು ಪುನರಾವರ್ತಿಸುತ್ತಿದ್ದರೆ ಅಪ್ರಸ್ತುತರಾಗುವುದು ನೀವೇ. ವಿರೋಧ ಪಕ್ಷಗಳ ಕ್ಯಾಂಪೇನ್‌ನಲ್ಲಿ ಎರಡನೆಯದು ದೊಡ್ಡಮಟ್ಟದಲ್ಲಿ ಮಿಸ್ ಹೊಡೆಯುತ್ತಿದೆ. ನಾಯಕನಾದವನು ಆದಷ್ಟೂ ಆಪಾದನೆಗಳನ್ನು ಕಡಿಮೆ ಮಾಡಬೇಕು. ಹೊಸ ಕನಸುಗಳನ್ನು ಬಿತ್ತಬೇಕು. ಇಲ್ಲವಾದರೆ ಜನ ಒಳ್ಳೆಯ ಮನುಷ್ಯ, ಒಳ್ಳೆಯ ನಡತೆ ಇದೆಲ್ಲವನ್ನೂ ಮೆಚ್ಚುತ್ತಲೇ ಪಾಪ ಎಂದುಕೊಂಡು ಪಕ್ಕಕ್ಕೆ ಸರಿಸುತ್ತಾರೆ.
ಬರಹ: ವೈ.ಎನ್.ಮಧು












Click it and Unblock the Notifications