Gold: ನಿಧಿ ಒಪ್ಪಿಸಿ ಬೀದಿಪಾಲಾದ ಕುಟುಂಬದ ಕಣ್ಣೀರಿನ ಕಥೆ, ಪ್ರಾಮಾಣಿಕತೆಗೆ ಸಿಕ್ಕ ಬಹುಮಾನವೇ
ಗದಗ: ಕರ್ನಾಟಕದಲ್ಲಿ ಈಗ ನಿಧಿ ವಿಚಾರವು ಭಾರೀ ಚರ್ಚೆ ಆಗುತ್ತಿದೆ. ಇಲ್ಲಿನ ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮನೆ ಕಟ್ಟುವುದಕ್ಕೆ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ನಿಧಿ ಪತ್ತೆಯಾಗಿದೆ. ತಂಬಿಗೆಯಲ್ಲಿ ಅಂದಾಜು ಒಂದು ಕೆಜಿ ನಿಧಿ ಪತ್ತೆಯಾಗಿದೆ. ಗಂಗವ್ವ ಬಸವರಾಜ ರಿತ್ತಿ ಮನೆ ಜಾಗದಲ್ಲಿ ಈ ನಿಧಿ ಪತ್ತೆಯಾಗಿದ್ದು, ಇದೀಗ ನಿಧಿಯೋ ಅಲ್ಲವೋ ಎನ್ನುವ ಚರ್ಚೆಯೂ ನಡೆದಿದೆ. ಪ್ರಾಮಾಣಿಕವಾಗಿ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಈ ಕುಟುಂಬವು ಇದೀಗ ಅಡಕತ್ತರಿಯಲ್ಲಿ ಸಿಲುಕಿದಂತೆ ಆಗಿದೆ. ನಿಧಿ ಒಪ್ಪಿಸಿ ಬೀದಿಪಾಲಾದ ಕುಟುಂಬದ ಕಣ್ಣೀರಿನ ಕಥೆ, ಪ್ರಾಮಾಣಿಕತೆಗೆ ಸಿಕ್ಕ ಬಹುಮಾನವೇ ಸಂದೀಪ್ ಕೊಡ್ಲಾಡಿ (Sandeep Kodladi) ಅವರ ಬರಹ ಇಲ್ಲಿದೆ.
ಪ್ರಾಮಾಣಿಕತೆಗೆ ಸಿಕ್ಕ ಬಹುಮಾನವೇ, ಗದಗದಲ್ಲಿ ನಿಧಿ ಒಪ್ಪಿಸಿ ಬೀದಿಪಾಲಾದ ಕುಟುಂಬದ ಕಣ್ಣೀರಿನ ಕಥೆ. ನಿಧಿಯ ಕನಸು ನುಚ್ಚುನೂರಾದಾಗ. ಭೂಮಿಯಲ್ಲಿ ಅಡಗಿರುವ ನಿಧಿ ಸಿಕ್ಕರೆ ಹೇಗಿರಬಹುದು ಎಂಬುದು ಬಹುತೇಕರ ಕನಸು. ಆದರೆ ಗದಗ ಜಿಲ್ಲೆಯ ಲಕ್ಕುಂಡಿಯ ಒಂದು ಬಡ ಕುಟುಂಬಕ್ಕೆ, ಈ ಕನಸೇ ಶಾಪವಾಗಿ ಪರಿಣಮಿಸಿದೆ. ಪ್ರಾಮಾಣಿಕತೆ ಮೆರೆದು ಸರ್ಕಾರಕ್ಕೆ ನಿಧಿ ಒಪ್ಪಿಸಿದ ಈ ಕುಟುಂಬ ಇಂದು ಸ್ವಂತ ಸೂರು ಇಲ್ಲದೆ ಬೀದಿಗೆ ಬೀಳುವ ಆತಂಕದಲ್ಲಿದೆ. ಮನೆ ನಿರ್ಮಾಣಕ್ಕಾಗಿ ಅಡಿಪಾಯ ಅಗೆಯುವಾಗ ಸಿಕ್ಕ ಚಿನ್ನದ ನಿಧಿ ಸಿಕ್ಕಿದೆ.

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ, ತಮಗಿದ್ದ ಜಮೀನನ್ನೇ ಮಾರಿ, ಅದರಿಂದ ಬಂದ ಹಣದಲ್ಲಿ ಬದುಕಿಗೊಂದು ಸೂರು ಕಟ್ಟಿಕೊಳ್ಳುವ ಮಹದಾಸೆ ಹೊತ್ತಿತ್ತು ಆ ಬಡ ಕುಟುಂಬ. ಮನೆಯ ಅಡಿಪಾಯಕ್ಕಾಗಿ ನೆಲ ಅಗೆಯುತ್ತಿದ್ದಾಗ, ಅವರಿಗೆ ಚಿನ್ನದ ನಿಧಿಯೊಂದು ಪತ್ತೆಯಾಯಿತು. ನಿಧಿ ಸಿಕ್ಕಿದ ಕೂಡಲೇ ಆ ಕುಟುಂಬ ಯಾವುದೇ ದುರಾಸೆಗೆ ಒಳಗಾಗಲಿಲ್ಲ. ಬದಲಿಗೆ, ತಮ್ಮ ಪ್ರಾಮಾಣಿಕತೆಯನ್ನು ಮೆರೆದು, ಸಿಕ್ಕ ಸಂಪೂರ್ಣ ನಿಧಿಯನ್ನು ಜಿಲ್ಲಾಡಳಿತಕ್ಕೆ ಯಾವುದೇ ವೈಯಕ್ತಿಕ ಹಕ್ಕು ಸಾಧಿಸದೆ ಒಪ್ಪಿಸಿದರು.
ಕುಟುಂಬದ ಪ್ರಾಮಾಣಿಕತೆಗೆ ಮೆಚ್ಚುಗೆ ಸಿಗುವ ಬದಲು, ಅವರಿಗೆ ಅನಿರೀಕ್ಷಿತ ಆಘಾತ ಕಾದಿತ್ತು. ನಿಧಿ ಪತ್ತೆಯಾದ ಸ್ಥಳವನ್ನು ಅಧಿಕಾರಿಗಳು 'ನಿಷಿದ್ಧ ಪ್ರದೇಶ' ಎಂದು ಘೋಷಿಸಿದರು. ಈ ಆದೇಶದಿಂದಾಗಿ, ಅವರು ಕಟ್ಟಲು ಆರಂಭಿಸಿದ್ದ ಮನೆಯ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಬೀದಿಪಾಲಾದ ಬಡ ಕುಟುಂಬ...
ಈ ಘಟನೆಯಿಂದಾಗಿ ಆ ಕುಟುಂಬಕ್ಕೆ ಗಂಭೀರ ಪರಿಣಾಮ ಬೀರಿದೆ. ಮನೆಯ ಯಜಮಾನನನ್ನು ಕಳೆದುಕೊಂಡು ತಾಯಿ ಮತ್ತು ಮಗನನ್ನೊಳಗೊಂಡ ಈ ಬಡ ಕುಟುಂಬ, ಈಗ ಮನೆ ಇಲ್ಲದೆ ಅಕ್ಷರಶಃ ಬೀದಿಪಾಲಾಗಿದೆ. ಸದ್ಯಕ್ಕೆ ಅವರು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅವರ ನೋವಿನ ನುಡಿಗಳು ಅವರ ಸ್ಥಿತಿಗೆ ಕನ್ನಡಿ ಹಿಡಿಯುತ್ತವೆ: ನಮ್ಮ ಅಣ್ಣನ ಮನೆ ಅಥವಾ ಸಣ್ಣ ಮಾವನ ಮನೆಯಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದೇವೆ. ಚಿನ್ನದ ನಿಧಿ ನಮಗೆ ಬೇಡ, ಸರ್ಕಾರ ನಮಗೆ ಬದುಕಲು ಒಂದು ಮನೆ ನೀಡಿದರೆ ಸಾಕು. ಮಗನಿಗೆ ಶಿಕ್ಷಣ ಕೊಡಿಸಿ, ಅವನ ಭವಿಷ್ಯ ರೂಪಿಸಲು ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ.
ಸಮುದಾಯದ ಸ್ಪಂದನೆ: ಕುಟುಂಬದ ನೆರವಿಗೆ ನಿಂತ ಗ್ರಾಮಸ್ಥರು...
ಕುಟುಂಬದ ಈ ದುಸ್ಥಿತಿಯನ್ನು ಕಂಡು ಇಡೀ ಲಕ್ಕುಂಡಿ ಗ್ರಾಮವೇ ಅವರ ಬೆಂಬಲಕ್ಕೆ ನಿಂತಿದೆ. ಗ್ರಾಮಸ್ಥರೆಲ್ಲರೂ ಒಗ್ಗೂಡಿ, ಸರ್ಕಾರವು ಮಾನವೀಯ ನೆಲೆಯಲ್ಲಿ ಈ ಕುಟುಂಬಕ್ಕೆ ಪರ್ಯಾಯ ನಿವೇಶನ ಅಥವಾ ಹೊಸ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಅವರ ನಷ್ಟವನ್ನು ಭರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಅನಿರೀಕ್ಷಿತವಾಗಿ ಸಿಕ್ಕ ಚಿನ್ನದ ನಿಧಿಯು ಈ ಕುಟುಂಬಕ್ಕೆ ನೆಮ್ಮದಿ ತರುವ ಬದಲು, ಕಷ್ಟವನ್ನೇ ತಂದೊಡ್ಡಿದೆ. ಅವರ ಪ್ರಾಮಾಣಿಕತೆಯೇ ಅವರ ಮನೆಗೆ ಮುಳುವಾದದ್ದು ವಿಪರ್ಯಾಸ. ಪ್ರಾಮಾಣಿಕತೆಯೇ ಶಿಕ್ಷೆಯಾಗುವ ಈ ವ್ಯವಸ್ಥೆಯಲ್ಲಿ, ನಾವು ಮುಂದಿನ ಪೀಳಿಗೆಗೆ ಯಾವ ಮೌಲ್ಯವನ್ನು ದಾಟಿಸಿದಂತೆ ಆಗುತ್ತದೆಯೇ..
ಸರ್ಕಾರದ ಮಧ್ಯಪ್ರವೇಶ
ಇನ್ನು ಈ ವಿಚಾರದಲ್ಲಿ ಸರ್ಕಾರವು ಮಧ್ಯಪ್ರವೇಶ ಮಾಡಿದ್ದು, ನಿಧಿ ಒಪ್ಪಿಸಿದ ಕುಟುಂಬಕ್ಕೆ ನಿವೇಶನ ಸೇರಿದಂತೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದೆ.












Click it and Unblock the Notifications