Shyamaraj: ಉಡುಪಿ ಟೋಲ್ ಪ್ಲಾಜಾ: ನಿವೃತ್ತ ಆರ್ಮಿ ಕಮಾಂಡರ್ ಶ್ಯಾಮರಾಜ್‌ಗೆ ಅವಮಾನ, ವಿಡಿಯೋ ವೈರಲ್
ಉಡುಪಿ: 2026 ಜನವರಿ 26ರಂದು 77ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದೇವೆ. ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆದಿದೆ. ಆದರೆ, ಗಣರಾಜ್ಯೋತ್ಸವದ ಹಿಂದಿನ ದಿನ ಜನವರಿ 25ರ ಸಂಜೆ ಭಾನುವಾರ ಕರ್ನಾಟಕದಲ್ಲಿ ನಡೆದಿರುವ ಘಟನೆಯೊಂದು ದೇಶದಾದ್ಯಂತ ಭಾರೀ ಚರ್ಚೆಗೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಉಡುಪಿಯ ಟೋಲ್ ಪ್ಲಾಜಾದಲ್ಲಿ ನಿವೃತ್ತ ಯೋಧ ಶ್ಯಾಮರಾಜ್‌ಗೆ ಅವಮಾನ ಮಾಡಲಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶ್ಯಾಮರಾಜ್ ಅವರು ಆಪರೇಷನ್ ಪರಾಕ್ರಮ್ ವೇಳೆ ಉಗ್ರರ ವಿರುದ್ಧ ಜಯ ಸಾಧಿಸಿ ಹಿಂದಿರುಗುವಾಗ ದುರ್ಘಟನೆ ಸಂಭವಿಸಿತ್ತು.
Oneindia Kannadaದೊಂದಿಗೆ ಮಾತನಾಡಿದ ನಿವೃತ್ತ ಆರ್ಮಿ ಕಮಾಂಡರ್ ಶ್ಯಾಮರಾಜ್ ಅವರು ಈ ದೇಶಕ್ಕಾಗಿ ನಾನು ಜೀವದ ಹಂಗು ತೊರೆದು ಹೋರಾಟ ಮಾಡಿದ್ದೇನೆ. ನಾನು ಭಿಕ್ಷುಕ ಅಲ್ಲ, ಈ ರೀತಿ ನಡೆಸಿಕೊಂಡಿರುವುದು ತೀರ ಅವಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಕಾಸರಗೋಡಿನಿಂದ ದೆಹಲಿಗೆ ಹೋಗುತ್ತಿದ್ದೆ. ಆದರೆ, ದಾಖಲೆಗಳನ್ನು ತೋರಿಸಿದರೂ ಟೋಲ್ ಸಿಬ್ಬಂದಿ ಹಣ ಪಾವತಿ ಮಾಡದೆ ಮುಂದೆ ಹೋಗಲು ಸಾಧ್ಯವಿಲ್ಲ ಎಂದು ತಡೆದಿದ್ದಾರೆ. ನಿವೃತ್ತ ಯೋಧರಿಗೆ ವಿನಾಯಿತಿ ಇಲ್ಲ ಎಂದು ಟೋಲ್ ಸಿಬ್ಬಂದಿ ಹೇಳಿದರು. ನಾನು ನಿವೃತ್ತ ಯೋಧ ಮಾತ್ರವಲ್ಲ, ಆಪರೇಷನ್ ಪರಾಕ್ರಮ್‌ನಲ್ಲಿದ್ದೆ. ಸಂಪೂರ್ಣ ಅಂಗವೈಕಲ್ಯ ಇದೆ. ಇದೆಲ್ಲವನ್ನೂ ವಿವರಿಸಿದರೂ ಅವರು ಕೇಳಲಿಲ್ಲ.

ಅವರು ನನ್ನೊಂದಿಗೆ ಅಸಭ್ಯವಾಗಿ ಅಥವಾ ದೌರ್ಜನ್ಯದಿಂದ ವರ್ತಿಸಲಿಲ್ಲ. ವಿನಯದಿಂದಲೇ ನಡೆದುಕೊಂಡರು. ಅವರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕೊನೆಯದಾಗಿ ದುಡ್ಡು ಬೇಡ ಎಂದು ಹೇಳಿದರು. ನನಗೆ ದುಡ್ಡು ಖರ್ಚು ಮಾಡಬಾರದು ಎಂದಿಲ್ಲ. 120 ರೂಪಾಯಿ ದೊಡ್ಡ ವಿಚಾರವೂ ಅಲ್ಲ. ಆದರೆ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿರುವ ನನ್ನನ್ನು ಈ ರೀತಿ ನಡೆಸಿಕೊಂಡಿದ್ದು, ಬೇಸರವಾಗಿದೆ. ದೇಶದ ಹಲವು ಭಾಗದಲ್ಲಿ ಕರ್ನಾಟಕದ ಬೆಳಗಾವಿಯಲ್ಲೂ ನಾನು ಈ ರೀತಿ ಸಮಸ್ಯೆ ಎದುರಿಸಿದ್ದೇನೆ. ಇದು ನನ್ನೊಬ್ಬನ ಸಮಸ್ಯೆ ಅಲ್ಲ ದೇಶದ ಹಲವು ಯೋಧರಿಗೆ ಈ ರೀತಿಯ ಅವಮಾನವಾಗುತ್ತಿದೆ ಇದು ಅಂತ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ಉಡುಪಿಯ ಸಾಸ್ತಾನ ಟೋಲ್ ಪ್ಲಾಝಾದಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಭಾನುವಾರ ರಾತ್ರಿ ನಿವೃತ್ತ ಯೋಧರಾದ ಶ್ಯಾಮರಾಜ್‌ಗೆ ಅವಮಾನ ಮಾಡಿರುವ ಘಟನೆ ನಡೆದಿತ್ತು. ಕಾಸರಗೋಡು ಜಿಲ್ಲೆಯ ಶ್ಯಾಮರಾಜ್ ಅವರು ಇವಿ 21ನೇ ಪ್ಯಾರಾ ಸ್ಪೆಷಲ್ ಫೋರ್ಸ್‌ನ ಪ್ಯಾರಾಟ್ರೂಪರ್ ಆಗಿದ್ದು, ಇವರು ಕರ್ನಾಟಕದ ಉಡುಪಿಯ ಸಾಸ್ತಾನದ ಟೋಲ್ ಮೂಲಕ ಸಾಗುತ್ತಿದ್ದರು. ಶ್ಯಾಮ್ ಅವರ ಬಳಿ ಟೋಲ್ ವಿನಾಯಿತಿ ಬಗ್ಗೆ ಪತ್ರವಿದೆ. ಆದರೂ ಟೋಲ್ ವಿನಾಯಿತಿ ಕೊಡುವುದಕ್ಕೆ ಟೋಲ್ ಪ್ಲಾಝಾ ಸಿಬ್ಬಂದಿ ನಿರಾಕರಿಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಶ್ಯಾಮರಾಜ್ ಅವರ ಪತ್ನಿ ಸಹ ಮಿಲಿಟರಿ ನರ್ಸಿಂಗ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಪೋಸ್ಟಿಂಗ್‌ಗಾಗಿ ಸಾಸ್ತಾನ ಮೂಲಕ ಹೋಗುತ್ತಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಇನ್ನು ಕರ್ನಾಟಕದ ಉಡುಪಿ ಟೋಲ್‌ನಲ್ಲಿ ನಡೆದಿರುವ ಘಟನೆಯ ಬಗ್ಗೆ ಸ್ವತಃ ಶ್ಯಾಮರಾಜ್ ಅವರು ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೇಶದ ಎಲ್ಲಾ ಟೋಲ್‌ಗಳಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಆದರೆ ಸಾಸ್ತಾನ ಟೋಲ್ ನಲ್ಲಿ ವಿನಾಯಿತಿ ಕೊಟ್ಟಿಲ್ಲ. ಇದಕ್ಕೆ ಸಂಬಂಧಿತ ಆರ್ಎಂಎ ನೀಡಿದ ಟೋಲ್ ವಿನಾಯಿತಿ ಪತ್ರ ತೋರಿಸಿದರೂ ಸಿಬ್ಬಂದಿ ವಿನಾಯಿತಿ ನೀಡದೆ ತೊಂದರೆ ಕೊಟ್ಟಿದ್ದಾರೆ ಎಂದು ಶ್ಯಾಮ್‌ರಾಜ್ ಅವರು ಹೇಳಿದ್ದಾರೆ.
ದೇಶಕ್ಕಾಗಿ ಜೀವದ ಅಂಗು ತೊರೆದು ಹೋರಾಡಿದ್ದ ಶ್ಯಾಮ್‌ರಾಜ್
ಇನ್ನು ಶ್ಯಾಮರಾಜ್ ಅವರು ದೇಶಕ್ಕಾಗಿ ಜೀವದ ಹಂಗು ತೋರೆದು ಆಪರೇಷನ್ ಪರಾಕ್ರಮ್‌ನಲ್ಲಿ ಭಾಗಿಯಾಗಿದ್ದರು. ಆಪರೇಷನ್ ಪರಾಕ್ರಮ್‌ನಲ್ಲಿ ಉಗ್ರರ ವಿರುದ್ಧ ಜಯ ಸಾಧಿಸಿ ಹಿಂದಿರುಗುವ ಸಂದರ್ಭದಲ್ಲಿ ಸೇನಾ ವಾಹನ ಲ್ಯಾಂಡ್ ಮೈನ್ಸ್ ಮೇಲೆ ಹರಿದ ಪರಿಣಾಮ, ಲ್ಯಾಂಡ್ ಮೈನ್ಸ್ ಸ್ಫೋಟಗೊಂಡಿತ್ತು. ಸೇನಾ ವಾಹನ ಜಖಂಗೊಂಡಿದ್ದು, ಈ ದುರ್ಘಟನೆಯಲ್ಲಿ 15 ಸೈನಿಕರು ಹುತಾತ್ಮರಾಗಿದ್ದು. ಇಬ್ಬರು ಸೈನಿಕರು ಬದುಕುಳಿದಿದ್ದರು. ಬದುಕುಳಿದ ಸೈನಿಕರಲ್ಲಿ ಶ್ಯಾಮರಾಜ್ ಸಹ ಒಬ್ಬರಾಗಿದ್ದಾರೆ. ಶ್ಯಾಮ್‌ರಾಜ್ ಅವರು 15 ದಿನಗಳ ಕಾಲ ಕೋಮಾದಲ್ಲಿದ್ದರು, ಪ್ರಜ್ಞೆ ಬಂದಾಗ ಬೆನ್ನುಹುರಿಯ ಗಂಭೀರ ಗಾಯವಾಗಿರುವುದರಿಂದ ಶ್ಯಾಮರಾಜ್ ಅವರು ಸಂಪೂರ್ಣ ವಿಕಲಾಂಗರಾಗಿದ್ದಾರೆ.












Click it and Unblock the Notifications