₹1,200 ಕೋಟಿ ರೈತರ ಬಾಕಿ ಹಣ ಬಿಡುಗಡೆ ಮಾಡಿ; ಇಲ್ಲದಿದ್ದರೆ ಹೋರಾಟ: ಆರ್. ಅಶೋಕ್ ಎಚ್ಚರಿಕೆ

ರೈತರಿಂದ ಧಾನ್ಯ ಪಡೆದು ಹಣ ಕೊಡದೆ ರೈತ ವಿರೋಧಿ ನಿಲುವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ರೋಶ ಹೊರ ಹಾಕಿದ್ದಾರೆ. ರೈತರಿಂದ ಧಾನ್ಯ ಪಡೆದು ಹಣ ಕೊಡದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಇದೇನಾ ನಿಮ್ಮ 'ಗ್ಯಾರೆಂಟಿ' ಆಡಳಿತ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.

ಮಾರ್ಚ್ ತಿಂಗಳಲ್ಲೇ ರೈತರಿಂದ ರಾಗಿ ಮತ್ತು ಜೋಳ ಖರೀದಿಸಿದ್ದೀರಿ. ನಿಯಮದಂತೆ 15 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಬೇಕಿತ್ತು. ಆದರೆ ನಾಲ್ಕು ತಿಂಗಳು ಕಳೆದರೂ ಬರೊಬ್ಬರಿ ₹1,200 ಕೋಟಿ ಬೆಂಬಲ ಬೆಲೆ ಬಾಕಿ ಉಳಿಸಿಕೊಂಡು ಲಕ್ಷಾಂತರ ರೈತರನ್ನು ಸಂಕಷ್ಟಕ್ಕೆ ತಳ್ಳಿದ್ದೀರಿ. ಈಗ ಮಳೆ ಆರಂಭವಾಗಿದೆ. ಉಳುಮೆ, ಬಿತ್ತನೆ, ಬೀಜ, ಗೊಬ್ಬರ, ಕೂಲಿ - ಯಾವುದಕ್ಕೂ ರೈತರ ಕೈಯಲ್ಲಿ ಹಣವಿಲ್ಲ. ಬೆಳೆ ಬೆಳೆಸಿ ಸರ್ಕಾರಕ್ಕೆ ಮಾರಿದರೂ ಹಣ ಸಿಗದಿದ್ದರೆ ರೈತ ಬದುಕುವುದು ಹೇಗೆ ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.

1 200

ಮುಂದುವರಿದು ಗ್ಯಾರೆಂಟಿ ಅನುಷ್ಠಾನ ಸಮಿತಿ, 'ಭಾರತ್ ಜೋಡೋ ಕ್ಲಬ್', ಕುಮಾರಕೃಪಾ ನವೀಕರಣ ಸೇರಿದಂತೆ ತಮ್ಮ ರಾಜಕೀಯ, ವೈಯಕ್ತಿಕ ಆದ್ಯತೆಗಳಿಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡುವ ಕಾಂಗ್ರೆಸ್ ಸರ್ಕಾರಕ್ಕೆ, ರೈತರ ಬೆವರಿನ ಬೆಳೆಗೆ ಕೊಡಬೇಕಾದ ₹1,200 ಕೋಟಿ ಬಿಡುಗಡೆ ಮಾಡಲು ಮಾತ್ರ ಹಣವಿಲ್ಲವೇ. ಇದೇನಾ ನಿಮ್ಮ ರೈತಪರ ಆಡಳಿತ ಎಂದು ಕೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸರ್ಕಾರಕ್ಕೆ ರೈತರ ಮತ ಬೇಕು, ಆದರೆ ರೈತರ ಹಣ ಕೊಡಲು ಮನಸ್ಸಿಲ್ಲ. ಇದೇ ಈ ಸರ್ಕಾರದ ರೈತವಿರೋಧಿ ಮನಸ್ಥಿತಿಯ ಜೀವಂತ ಸಾಕ್ಷಿ. ಕೂಡಲೇ ಬಾಕಿ ಇರುವ ₹1,200 ಕೋಟಿ ಬೆಂಬಲ ಬೆಲೆಯನ್ನು ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಿ. ಇಲ್ಲವಾದರೆ ರಾಜ್ಯದ ಸಂತ್ರಸ್ತ ರೈತರೊಂದಿಗೆ ಬಿಜೆಪಿ ಕರ್ನಾಟಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ನಡೆಸಲಿದೆ. ರೈತನ ತಾಳ್ಮೆಯನ್ನು ಪರೀಕ್ಷಿಸಿದ ಯಾವ ಭಂಡ ಸರ್ಕಾರವೂ ಉಳಿದ ಇತಿಹಾಸವಿಲ್ಲ, ಎಚ್ಚರಿಕೆ ಎಂದೂ ಹೇಳಿದ್ದಾರೆ.

ಬಿತ್ತನೆ ಮಾಡಬೇಡಿ ಎನ್ನುತ್ತಿದೆ ಸರ್ಕಾರ ಎಂದ ಆರ್.ಅಶೋಕ್

ಇನ್ನು ಸೋಶಿಯಲ್ ಮೀಡಿಯಾದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಒಂದು ಕಡೆ "ಬಿತ್ತನೆ ಮಾಡಬೇಡಿ" ಎಂದು ರೈತನಿಗೆ ಉಪದೇಶ... ಮತ್ತೊಂದು "ಪರಿಹಾರ ಕೊಡಲು ಹಣವಿಲ್ಲ" ಎಂದು ಕೈಚೆಲ್ಲಿ ಜಾನುವಾರು ಸಾಕುವ ರೈತನಿಗೆ ಮೋಸ... ಇದೇನಾ ಕಾಂಗ್ರೆಸ್ ಸರ್ಕಾರದ ರೈತಪರ ಆಡಳಿತ ಎಂದು ಪ್ರಶ್ನೆ ಮಾಡಿದ್ದಾರೆ.

ಬರದಿಂದ ಕಂಗೆಟ್ಟ ರೈತನಿಗೆ ಬೆಳೆ ಬೆಳೆಯಬೇಡಿ ಎಂದು ಬಿಟ್ಟಿ ಸಲಹೆ ನೀಡುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಬದುಕಿನ ಕೊನೆಯ ಆಸರೆಯಾಗಿರುವ ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ನೀಡಬೇಕಾದ ₹62 ಕೋಟಿ ಪರಿಹಾರವನ್ನೂ ಒಂದು ವರ್ಷದಿಂದ ತಡೆಹಿಡಿದಿದೆ. ಬಾಗಲಕೋಟೆ ಜಿಲ್ಲೆಯೊಂದರಲ್ಲೇ 50,000ಕ್ಕೂ ಹೆಚ್ಚು ರೈತರು, 28,000ಕ್ಕೂ ಹೆಚ್ಚು ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಆದರೂ 'ಅನುಗ್ರಹ' ಮತ್ತು 'ಕಾಮಧೇನು' ಯೋಜನೆಯಡಿ ನೀಡಬೇಕಾದ ಪರಿಹಾರ ಬಿಡುಗಡೆಯಾಗಿಲ್ಲ. ಬೆಳೆ ಇಲ್ಲ... ಮೇವು ಇಲ್ಲ... ಜಾನುವಾರುಗಳಿಲ್ಲ... ಪರಿಹಾರವೂ ಇಲ್ಲ. ಹಾಗಾದರೆ ರೈತರು ಬದುಕುವುದು ಹೇಗೆ ಎಂದು ಕೇಳಿದ್ದಾರೆ.

ಇದು ಕೇವಲ ಆಡಳಿತ ವೈಫಲ್ಯವಲ್ಲ; ರೈತರ ಬದುಕಿನ ಮೇಲಿನ ಅಮಾನುಷ ನಿರ್ಲಕ್ಷ್ಯ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ರೈತರ ಕಣ್ಣೀರಿನ ಮೇಲೆ ರಾಜಕಾರಣ ಮಾಡಬೇಡಿ. ಕೂಡಲೇ ಬಾಕಿ ಇರುವ ₹62 ಕೋಟಿ ಜಾನುವಾರು ಪರಿಹಾರವನ್ನು ಬಿಡುಗಡೆ ಮಾಡಿ. ಇಲ್ಲವಾದರೆ ನಿಮ್ಮ ಅನ್ನದಾತನ ಆಕ್ರೋಶದ ಜ್ವಾಲೆಯಕ್ಕೂ ನಿಮ್ಮ ಕಾಂಗ್ರೆಸ್ ಪಕ್ಷ ಸುಟ್ಟು ಭಸ್ಮ ಆಗುವುದು ನಿಶ್ಚಿತ ಎಂದೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+