ಜೆಡಿಎಸ್ ಬಂಡಾಯ ಶಾಸಕರು ಬಿಜೆಪಿಗೆ ಸೇರುವ ಸುದ್ದಿಗೆ ತೆರೆ!
ಬೆಂಗಳೂರು, ಡಿಸೆಂಬರ್. 08 : ಜೆಡಿಎಸ್‌ನಿಂದ ಅಮಾನತುಗೊಂಡಿರುವ ಶಾಸಕರು ಬಿಜೆಪಿ ಸೇರುವ ವದಂತಿಗೆ ತೆರೆ ಬಿದ್ದಿದೆ. 'ಬಂಡಾಯ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬುದು ಸುಳ್ಳು. ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದೇವೆ' ಎಂದು ಎಚ್.ಸಿ.ಬಾಲಕೃಷ್ಣ ಹೇಳಿದರು.
ಶುಕ್ರವಾರ ಮಾಗಡಿಯಲ್ಲಿ ಮಾತನಾಡಿದ ಶಾಸಕರ ಎಚ್.ಸಿ.ಬಾಲಕೃಷ್ಣ ಅವರು, 'ಜೆಡಿಎಸ್‌ನ ಎಲ್ಲಾ 7 ಬಂಡಾಯ ಶಾಸಕರು ಕಾಂಗ್ರೆಸ್ ಸೇರುವುದು ಖಚಿತ. ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಬಂದಾಗ ಪಕ್ಷ ಸೇರುತ್ತೇವೆ' ಎಂದು ಸ್ಪಷ್ಟಪಡಿಸಿದರು.

'ನಾವು ಬಿಜೆಪಿ ಸೇರುತ್ತೇವೆ ಎಂದು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಹಿಂದೆ ನಾವು ಮಾಡಿದ ಕಾರ್ಯಕ್ರಮಗಳನ್ನು ಹಾಳು ಮಾಡಲು ಇಂತಹ ಸುದ್ದಿ ಹಬ್ಬಿಸುತ್ತಾರೆ. ಈ ಸುದ್ದಿಯ ಹಿಂದೆ ವಿರೋಧಿಗಳ ಕೈವಾಡವಿದೆ' ಎಂದರು.
ಡಿ.ಕೆ.ಸುರೇಶ್ ಹೇಳಿದ್ದೇನು? : 'ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಬಿಜೆಪಿ ಸೇರಲಿದ್ದಾರೆ ಎಂಬುದು ಸುಳ್ಳು. ಅವರು ನಮ್ಮ ಜೊತೆ ಇದ್ದಾರೆ' ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಹೇಳಿದರು.
'ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರು ಆಯ್ಕೆಯಾದ ಬಳಿಕ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಆಗ ಎಚ್.ಸಿ.ಬಾಲಕೃಷ್ಣ ಸೇರಿದಂತೆ ಬಂಡಾಯ ಶಾಸಕರು ಪಕ್ಷಕ್ಕೆ ಸೇರಲಿದ್ದಾರೆ. ಬಿಜೆಪಿ ಸೇರಲಿದ್ದಾರೆ ಎಂಬುದು ಕೇವಲ ವದಂತಿ' ಎಂದರು.
ಕಾಂಗ್ರೆಸ್ ಸೇರಲಿರುವ ಶಾಸಕರು : ರಮೇಶ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಎಚ್.ಸಿ.ಬಾಲಕೃಷ್ಣ (ಮಾಗಡಿ), ಚೆಲುವರಾಯಸ್ವಾಮಿ (ನಾಗಮಂಗಲ), ಇಕ್ಬಾಲ್ ಅನ್ಸಾರಿ (ಗಂಗಾವತಿ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ, ಬೆಂಗಳೂರು), ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ).












Click it and Unblock the Notifications