RB Timmapur Profile: ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಪಡೆದ ಆರ್.ಬಿ.ತಿಮ್ಮಾಪೂರ
ಬಾಗಲಕೋಟೆ ಜಿಲ್ಲೆಯ ಮುಧೋಳ ಮೀಸಲು ಕ್ಷೇತ್ರದಲ್ಲಿ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ಮುಖಂಡ ಗೋವಿಂದ ಕಾರಜೋಳ ಅವರನ್ನು ಸೋಲಿಸಿರುವ ಶಾಸಕ ಆರ್.ಬಿ.ತಿಮ್ಮಾಪೂರ ಮತ್ತೊಮ್ಮೆ ಮಂತ್ರಿಗಿರಿ ಭಾಗ್ಯ ಪಡೆದ ಅದೃಷ್ಟವಂತ ರಾಜಕಾರಣಿ.
ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿರುವ ಆರ್ ಬಿ ತಿಮ್ಮಾಪೂರ ಅವರು ಸಿಎಂ ಸಿದ್ದರಾಮಯ್ಯ ಆಪ್ತರಾಗಿರುವ ದಲಿತ ನಾಯಕ. ಈ ಹಿಂದೆಯೂ ಅತಿ ಹೆಚ್ಚು ಸಚಿವ ಸ್ಥಾನ ಪಡೆದಿದ್ದು, ಶಾಸಕರಾಗಿ ಆಯ್ಕೆಯಾದಾಗಲೊಮ್ಮೆ ಇವರನ್ನು ಸಚಿವ ಸ್ಥಾನ ಅರಸಿ ಬಂದಿದೆ. ಇದೀಗ ಸಿದ್ದರಾಮಯ್ಯ ಸಂಪುಟದಲ್ಲಿ ಮತ್ತೊಮ್ಮೆ ಸಚಿವ ಸ್ಥಾನವನ್ನ ಪಡೆದುಕೊಂಡಿದ್ದಾರೆ.

ಬಾದಾಮಿ ತಾಲೂಕಿನ ಕಾಡರಕೊಪ್ಪದಲ್ಲಿ ರಾಮಪ್ಪ ಬಾಲಪ್ಪ ತಿಮ್ಮಾಪೂರ ಜನಿಸಿದ್ದು, ಕಾಲೇಜು ದಿನಗಳಿಂದ ರಾಜಕೀಯದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ಬಿಎ, ಎಲ್‌ಎಲ್‌ಬಿ ಪದವೀಧರರಾಗಿರುವ ತಿಮ್ಮಾಪೂರ ಅವರು 1989ರಲ್ಲಿ ಮೊದಲ ಬಾರಿ ಮುಧೋಳ ಕ್ಷೇತ್ರದಿಂದ ಆಯ್ಕೆಯಾದರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಕಾರ್ಯನಿರ್ವಹಿಸಿದ್ದಾರೆ. ಇನ್ನೂ 1999ರ ಉಪ ಚುನಾವಣೆಯಲ್ಲಿ ಮರು ಆಯ್ಕೆಯಾಗಿ ಎಪಿಎಂಸಿ ಸಚಿವರಾಗಿ ಕಾರ್ಯನಿರ್ವಹಿಸಿದರು.
ಇನ್ನೂ 2002ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯೋಜನೆ, ಸಾಂಖ್ಯಿಕ ಖಾತೆ ಸಚಿವರಾದರು. 2003ರಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರು, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪಕ್ಷ ಯಾವುದೇ ಜವಾಬ್ದಾರಿಯನ್ನು ವಹಿಸಿದರೂ ನಿಷ್ಠೆಯಿಂದ ಪಾಲಿಸಿದರು. ನಂತರ 2013ರಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳರ ವಿರುದ್ಧ ಪರಾಭವಗೊಂಡರು.

ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿರುವ ಆರ್ ಬಿ ತಿಮ್ಮಾಪೂರ ಅವರ ಕೆಲಸವನ್ನ ಗುರುತಿಸಿ 2016ರಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕಗೊಳಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಪಕ್ಷವಿಟ್ಟ ವಿಶ್ವಾಸದಿಂದ ತಿಮ್ಮಾಪೂರ ಮತ್ತೆ ಸಚಿವ ಸ್ಥಾನ ಪಡೆದರು. 2017ರಲ್ಲಿ ಅಬಕಾರಿ ಸಚಿವ ಸ್ಥಾನವನ್ನ ನಿರ್ವಹಿಸಿದ್ದಾರೆ. ನಂತರ ಸಕ್ಕರೆ, ಬಂದರು ಹಾಗೂ ಒಳನಾಡು ಮೀನುಗಾರಿಕೆ ಖಾತೆ ದೊರೆಯಿತು.
ಇನ್ನೂ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಾಂಪ್ರದಾಯಿಕ ಎದುರಾಳಿ, ಮಾಜಿ ಸಚಿವ, ಬಿಜೆಪಿ ಗೋವಿಂದ ಕಾರಜೋಳರನ್ನ ಸೋಲಿಸಿದ ಆರ್ ಬಿ ತಿಮ್ಮಾಪೂರ ಅವರು ಗೆಲುವು ಸಾಧಿಸಿ, ಇದೀಗ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ ಸ್ಥಾನ ಗಿಟ್ಟಿಸಿದ್ದಾರೆ.












Click it and Unblock the Notifications