Ramzan 2023 : ರಂಜಾನ್ ತಿಂಗಳು ಉರ್ದು ಶಾಲೆಗಳ ವೇಳಾಪಟ್ಟಿ ಬದಲು, ವಿವರಗಳು
ರಂಜಾನ್ ತಿಂಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಉರ್ದು ಶಾಲೆಗಳ ಸಮಯದ ಅವಧಿ ಬದಲಾವಣೆಯಾಗಲಿದೆ. ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ.
ಬೆಂಗಳೂರು, ಮಾರ್ಚ್ 17; ರಂಜಾನ್ ಮಾಸದ ಅವಧಿಯಲ್ಲಿ ಕರ್ನಾಟಕದಲ್ಲಿ ಉರ್ದು ಶಾಲೆಗಳ ಸಮಯ ಬದಲಾವಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಶಾಲಾ ಅವಧಿ ಬದಲಾವಣೆ ಮಾಡುವಂತೆ ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ (ರಿ.) ಸರ್ಕಾರಕ್ಕೆ ಮನವಿ ಮಾಡಿತ್ತು. ಈಗ ಈ ಕುರಿತು ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಹೊಸ ವೇಳಾಪಟ್ಟಿಯನ್ನು ಸಹ ಪರಕಟಿಸಲಾಗಿದೆ.
ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು. ಆಯುಕ್ತರು ಡಾ. ವಿಶಾಲ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರು, ಎಲ್ಲಾ ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರಿಗೆ ಈ ಆದೇಶದ ಮೂಲಕ ವೇಳಾಪಟ್ಟಿ ಬದಲಾವಣೆ ಕುರಿತು ಮಾಹಿತಿ ನೀಡಲಾಗಿದೆ.

ಈ ಸುತ್ತೋಲೆ ರಂಜಾನ್ ಮಾಹೆಯಲ್ಲಿ ರಾಜ್ಯದ ಉರ್ದು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಾಲಾ ಅವಧಿ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ನಿರ್ದೇಶನವಿರುತ್ತದೆ.
ಅದರಂತೆ ಶಾಲೆಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಸಲಹಾತ್ಮಕ ವೇಳಾ ಪಟ್ಟಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4.20ರವರೆಗೆ ಶಾಲಾ ಅವಧಿ ನಿಗದಿಪಡಿಸಲಾಗಿರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಸರ್ಕಾರದ ಪತ್ರಗಳಲ್ಲಿ ರಂಜಾನ್ ಮಾಸದ ಪ್ರಯುಕ್ತ ರಾಜ್ಯದಲ್ಲಿನ ಉರ್ದು ಮಾಧ್ಯಮದ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಗಳನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.45ರವರೆಗೆ ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ ಒಂದು ತಿಂಗಳವರೆಗೆ ಮಾತ್ರ ನಡೆಸಲು ಈ ಹಿಂದೆ ದಿನಾಂಕ 31/10/2002ರಲ್ಲಿ ಹೊರಡಿಸಲಾಗಿದ್ದ ಸ್ಟ್ಯಾಂಡಿಂಗ್ ಆರ್ಡರ್ (Standing Order) ಅನ್ನು ಯಥಾವತ್ತು ಹೊರಡಿಸಲು ಸ್ವೀಕೃತವಾದ ಮನವಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಈ ಬಗ್ಗೆ ಈ ಕಛೇರಿಗೆ ಸಲ್ಲಿಸಲಾಗಿರುವ ಮನವಿಗಳನ್ನು ಪರಿಶೀಲಿಸಿ, ಈ ಕೆಳಗಿನಂತೆ ಆದೇಶಿಸಿದೆ ಎಂದು ಸುತ್ತೋಲೆ ಹೇಳಿದೆ. 2022-23ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳು ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ 10/4/2023ರವರೆಗೆ ಮಾತ್ರ ಶಾಲಾ ಅವಧಿಯ ವೇಳಾ ಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಬದಲಾವಣೆ ವಿವರಗಳು; ಬೆಳಗ್ಗೆ 8 ಗಂಟೆಯಿಂದ 8.40 ರವರೆಗೆ, 8.40 ರಿಂದ 9.20 ರವರೆಗೆ, 9.20 ರಿಂದ 10 ರವರೆಗೆ, 10 ರಿಂದ 10.15 ರವರೆಗೆ (ವಿರಾಮ). 10.15 ರಿಂದ 10.55 ರವರೆಗೆ, 10.55 ರಿಂದ 11.35 ರವರೆಗೆ, 11.35 ರಿಂದ 12.10 ರವರೆಗೆ 12.10 ರಿಂದ 12.45 ರವರೆಗೆ ಉರ್ದು ಶಾಲೆಗಳಲ್ಲಿ ತರಗತಿಗಳು ನಡೆಯಲಿವೆ. ಈ ವ್ಯವಸ್ಥೆಯಿಂದ ಶಾಲೆಗಳ ಕೆಲಸದ ಅವಧಿಯಲ್ಲಿ ಕಡಿಮೆ ಆಗುವ ಅವಧಿಯನ್ನು ಇತರೆ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಸರಿದೂಗಿಸಿಕೊಳ್ಳತ್ತಕ್ಕದ್ದು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.
ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ರಂಜಾನ್ ಮಾಹೆಯಲ್ಲಿ ಉಪವಾಸ ವ್ರತವನ್ನು ಕೈಗೊಳ್ಳುವುದರಿಂದ ಅವರುಗಳಿಗೆ ರಂಜಾನ್ ಮಾಹೆಯಲ್ಲಿ ಪ್ರತಿ ದಿನ ಸಂಜೆ ಅರ್ಧ ಗಂಟೆ ಮುಂಚಿತವಾಗಿ ತೆರಳಲು ಅನುಮತಿಸಬಹುದು. 2022-23ನೇ ಸಾಲಿಗೆ ನಿಗದಿಪಡಿಸಿರುವ ಎಸ್.ಎಸ್.ಎಲ್.ಸಿ, 5ನೇ ಹಾಗೂ 8ನೇ ತರಗತಿ ಬೋರ್ಡ್ ಪರೀಕ್ಷಾ ವೇಳಾ ಪಟ್ಟಿಯಂತೆ ಕ್ರಮವಹಿಸುವುದು ಎಂದು ಸುತ್ತೋಲೆ ಹೇಳಿದೆ.












Click it and Unblock the Notifications