ರೇವಣ್ಣ ಮತ ಸಿಂಧು: ಬಿಜೆಪಿ ,ಕಾಂಗ್ರೆಸ್ ಕೊಟ್ಟ ದೂರಿಗೆ ಸೊಪ್ಪು ಹಾಕದ ಆಯೋಗ!
ಬೆಂಗಳೂರು, ಜೂ. 10: ಮಾಜಿ ಸಚಿವ ಎಚ್.ಡಿ. ರೆವಣ್ಣ ಅವರ ಮತ ಅಸಿಂಧು ಗೊಳಿಸುವಂತೆ ಬಿಜೆಪಿ ಮತ್ತು ಕಾಂಗ್ರೆಸ್ ನೀಡಿದ್ದ ದೂರು ಅನೂರ್ಜಿತಗೊಂಡಿದೆ. ಎಚ್. ಡಿ. ರೇವಣ್ಣ್ ಅವರ ಮತವನ್ನು ಸಿಂಧುಗೊಳಿಸಿ ಕೇಂದ್ರ ಚುನಾವಣಾ ಆಯೋಗ ಅದೇಶ ಹೊರಡಿಸಿದೆ.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಿದ ಎಚ್. ಡಿ. ರೇವಣ್ಣ ಅವರು ಬ್ಯಾಲೆಟ್ ಪೇಪರ್ ತೋರಿಸಿ ಮತ ಹಾಕಿದ್ದರು ಎಂದು ವಿರೋಧ ಪಕ್ಷಗಳು ಅರೋಪಿಸಿದ್ದವು. ಮತದಾನ ಗೌಪ್ಯತೆ ನಿಯಮ ಉಲ್ಲಂಘನೆಯಾಗಿದೆ. ರೇವಣ್ಣ ಅವರ ಮತವನ್ನು ಅಸಿಂಧುಗೊಳಿಸಿ ಎಂದು ಚುನಾವಣಾ ಅಧಿಕಾರಿ ವಿಶಾಲಾಕ್ಷಿ ಅವರಿಗೆ ದೂರು ನೀಡಲಾಗಿತ್ತು.

ದೂರಿನ ಕುರಿತು ಚುನಾವಣಾ ಅಧಿಕಾರಿ ವಿಚಾರಣೆ ನಡೆಸಿ ಕೇಂದ್ರ ಚುನಾವಣಾ ಅಯೋಗಕ್ಕೆ ವರದಿ ನೀಡಿದ್ದರು. ಚುನಾವಣಾ ಅಧಿಕಾರಿ ನೀಡಿದ ವರದಿ ಅಂಗೀಕರಿಸಿರುವ ಅಯೋಗ, ರೇವಣ್ಣ ಮತವನ್ನು ಸಿಂಧುಗೊಳಿಸಿ ಆದೇಶ ಹೊರಡಿಸಿದೆ. ರೇವಣ್ಣ ಅವರನ್ನು ಕಾಲು ಎಳೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಬೆಳಗಿನಿಂದ ನಡೆಸಿದ ಪ್ರಹಸನಕ್ಕೆ ಸಂಜೆ ವೇಳೆಗೆ ತೆರೆ ಬಿತ್ತು.

ಮತ ಅಸಿಂಧುಗೊಳಿಸುವಂತೆ ಎರಡು ಪಕ್ಷಗಳು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ನಾನು ಯಾರಿಗೂ ಮತವನ್ನು ತೋರಿಸಿ ಹಾಕಿಲ್ಲ. ಅವರೆಲ್ಲರೂ ಬೇಕಾಗಿ ದೂರು ನೀಡಿದ್ದಾರೆ. ದೂರು ಕೊಡಲಿ ಬಿಡಿ. ಚುನಾವಣಾ ಆಯೋಗ ಎಲ್ಲಾ ನೋಡಿಕೊಳ್ಳುತ್ತದೆ. ನನ್ನ ಮತ ಅಸಿಂಧುಗೊಳಿಸುವ ತಪ್ಪು ನಾನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಂತಿಮವಾಗಿ ರೇವಣ್ಣ ಮತ ಸಿಂಧುಗೊಳಿಸಿ ಚುನಾವಣಾ ಆಯೋಗ ಆದೇಶಿಸಿದೆ.












Click it and Unblock the Notifications