ಶ್ರೀನಿವಾಸಗೌಡಗೆ ಮಾನ ಮರ್ಯಾದೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ: ಎಚ್‌ಡಿಕೆ
ಬೆಂಗಳೂರು, ಜೂ.10: ಕಾಂಗ್ರೆಸ್ ಪರ ಮತ ಚಲಾಯಿಸಿದ ಶಾಸಕ ಶ್ರೀನಿವಾಸಗೌಡಗೆ ಮಾನ ಮರ್ಯಾದೆ ಇದ್ದರೆ ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶ್ರೀನಿವಾಸಗೌಡ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಬೆಳಗ್ಗೆಯೇ ಹೇಳಿದ್ದೆ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಶಾಸಕ ಸ್ಥಾನ ಉಳಿಸಿಕೊಳ್ಳುವುದು ಕೋಲಾರ ಜನತೆಗೆ ಮಾಡಿದ ಅವಮಾನ. ಕಾಂಗ್ರೆಸ್‌ಗೆ ಮತವೂ ಹಾಕಬೇಕು, ಶಾಸಕ ಸ್ಥಾನವೂ ಉಳಿಯಬೇಕು ಎಂದರೆ ಯಾವ ನೈತಿಕತೆ ಇದೆ. ಮಾನ ಮರ್ಯಾದೆ ಎಂಬುದು ಇದ್ದರೆ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಹೋಗಲಿ ಎಂದು ಹೇಳಿದ್ದಾರೆ.
ಜೆಡಿಎಸ್‌ಗೆ ಮತ ಚಲಾಯಿಸಬೇಕು ಎಂದು ವಿಪ್ ಜಾರಿ ಮಾಡಿದ್ದೆವು ನಿಜ. ಆದರೆ, ಅದರಿಂದ ಏನು ಪ್ರಯೋಜನ ಇದೆ. ಭಾರತದಲ್ಲಿ ಕಾನೂನುಗಳು ಇವೆ. ಆದರೆ, ಅದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತಹ ಅವಕಾಶ ನೀಡಿಲ್ಲ. ಆ ಮನುಷ್ಯ ಜೆಡಿಎಸ್ ಸಿಂಬಲ್‌ನಿಂದ ಗೆದ್ದು, ಕಾಂಗ್ರೆಸ್ ಜೊತೆ ಒಡನಾಟ ಇಟ್ಟುಕೊಂಡು ಯಾವ ರೀತಿ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಸಿದ್ದರಾಯ್ಯ ಕೀಳು ರಾಜಕಾರಣ:
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದ ಶಾಸಕರನ್ನು ಹೈಜಾಕ್ ಮಾಡಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇವರು ಪ್ರಜಾಪ್ರಭುತ್ವ ಉಳಿಸಬ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಏನಾದರೂ ಗೌರವ ಇದೆಯಾ? ಬಿಜೆಪಿ ಇಡೀ ದೇಶದಲ್ಲಿ ಇಂತಹ ರಾಜಕಾರಣ ಮಾಡಿದೆ. ಕಾಂಗ್ರೆಸ್ ಸಹ ಅಂತಹ ರಾಜಕಾರಣವನ್ನೇ ಮುಂದುವರಿಸುತ್ತಿದೆ ಎಂದು ಹೇಳಿದರು.
ಬಿಜೆಪಿಯನ್ನು ಗೆಲ್ಲಿಸುವುದಕ್ಕಾಗಿಯೇ ಶ್ರೀನಿವಾಸಗೌಡ ಅವರ ಕ್ರಾಸ್ ಓಟಿಂಗ್ ಮಾಡಿಸಲಾಗಿದೆ. ಕಾಂಗ್ರೆಸ್‌ನ ಇನ್ನೂ ಬಹುತೇಕ ಶಾಸಕರು ಬಿಜೆಪಿಗೆ ಓಟು ಹಾಕುವುದಕ್ಕಾಗಿ ಕಾದು ಕುಳಿತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನವರು ಶ್ರೀನಿವಾಸಗೌಡ ಅವರಿಂದ ಓಟು ಹಾಕಿಸಿಕೊಂಡು ಕನಿಷ್ಠ ಕಾಂಗ್ರೆಸ್ ಅಭ್ಯರ್ಥಿಯನ್ನಾದರೂ ಗೆಲ್ಲಿಸಿಕೊಳ್ಳುತ್ತಾರೆ ಎಂದರೆ ಅದೂ ಇಲ್ಲ. ಬಿಜೆಪಿ ಗೆಲ್ಲುವುದಕ್ಕೆ ಮತ್ತಷ್ಟು ನೆರವಾಗಿದ್ದಾರೆ. ಈ ಹಿಂದೆ 8 ಜನ ಜೆಡಿಎಸ್ ಶಾಸಕರಿಂದ ಕ್ರಾಸ್ ಓಟಿಂಗ್ ಮಾಡಿಸಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಎಂಬುವವರನ್ನು ಗೆಲ್ಲಿಸಿದ್ದರು. ಬಳಿಕ ರಾಮಮೂರ್ತಿ ಬಿಜೆಪಿ ಸೇರಿದರು. ಇವರು ಮಾಡಿದ್ದೆಲ್ಲವೂ ಇಂತಹದ್ದೇ ಎಂದು ಲೇವಡಿ ಮಾಡಿದರು.
ಗುಬ್ಬಿ ಶಾಸಕನ ಬಂಡವಾಳ ಸಂಜೆ ಗೊತ್ತಾಗುತ್ತದೆ:
ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಖಾಲಿ ಬ್ಯಾಲೆಟ್ ಪೇಪರ್ ಅನ್ನು ಡಬ್ಬಕ್ಕೆ ಹಾಕಿ ಬಂದಿದ್ದಾರೆ. ಆದರೆ, ಹೊರಗೆ ಬಂದು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಓಟ್ ಹಾಕಿದ್ದೇನೆ ಎಂದು ಹೇಳುವ ಮೂಲಕ ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ. ಸಂಜೆ ಇವರ ಬಂಡವಾಳ ಗೊತ್ತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications