Karnataka Weather: ಕೊಡಗು, ಕೋಲಾರದಲ್ಲಿ ಆಲಿಕಲ್ಲು ಮಳೆ ದಾಖಲು, ಬೆಂಗಳೂರಿಗೆ 3 ದಿನ ಮಳೆ ನಿರೀಕ್ಷೆ, ಮುನ್ಸೂಚನೆ
ಕರ್ನಾಟದಾದ್ಯಂತ ಬದಲಾದ ಹವಮಾನದಿಂದಾಗಿ ಆಗುಂಬೆ, ಮಲೆನಾಡು, ಕರಾವಳಿ ಭಾಗದ ಬಳಿಕ ಬುಧವಾರ ಕೊಡಗು ಮತ್ತು ಗುರುವಾರ ಕೋಲಾರದಲ್ಲಿ ಆಲಿಕಲ್ಲು ಸಹಿತ ಜೋರು ಮಳೆ ದಾಖಲಾಗಿದೆ. ಮುನ್ಸೂಚನೆ ಏನಿದೆ ತಿಳಿಯಿರಿ.
ಬೆಂಗಳೂರು, ಮಾರ್ಚ್ 17: ಕರ್ನಾಟದಾದ್ಯಂತ ಬಿರು ಬೇಸಿಗೆಯಲ್ಲೂ ಮಳೆಯಾಟ ಮುಂದುವರಿದಿದೆ. ಬದಲಾವಣೆಗೊಂಡ ಹವಮಾನದಿಂದಾಗಿ ಆಗುಂಬೆ, ಮಲೆನಾಡು, ಕರಾವಳಿ ಭಾಗದ ಬಳಿಕ ಬುಧವಾರ ಕೊಡಗು ಮತ್ತು ಗುರುವಾರ ಕೋಲಾರದಲ್ಲಿ ಆಲಿಕಲ್ಲು ಸಹಿತ ಜೋರು ಮಳೆ ದಾಖಲಾಗಿದೆ. ಬೆಂಗಳೂರಿಗೆ ಜೋರು ಮಳೆಯ ಆಗಮನವಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಕರಾವಳಿ ಭಾಗದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿ ಅಂತ್ಯಗೊಂಡಿದೆ. ದಿನೇ ದಿನೆ ತಾಪಮಾನದಲ್ಲಿ ಬದಲಾವಣೆ ಆಗುತ್ತಿದೆ. ಕಳೆದ ತಿಂಗಳು ಈ ಭಾಗದಲ್ಲಿ ಅಸಹಜ ಬಿಸಿಯಿಂದ ತಾತ್ಕಾಲಿಕವಾದ ಶಾಖದ ಅಲೆ ಕಂಡು ಬಂದಿತ್ತು. ಈಗ, ತೇವಾಂಶವು ಹೆಚ್ಚುತ್ತಿದ್ದು, ಅರಬ್ಬಿ ಸಮುದ್ರ ಚಂಡಮಾರುತದಂತಹ ಅಲೆಗಳನ್ನು ಬೀಸುತ್ತಿದೆ. ಈ ಕಾರಣದಿಂದ ಮಳೆ ಮತ್ತು ಗುಡುಗು ಸಹಿತ ಮಳೆಯು ಆಗುತ್ತಿದೆ ಎಂದು ಐಎಂಡಿ ಕರ್ನಾಟಕ ಕೇಂದ್ರದ ವಿಜ್ಞಾನಿ ಪ್ರಸಾದ್ ತಿಳಿಸಿದರು.

ಗುರುವಾರ ಕೋಲಾರ ಭಾಗದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಗಾಳಿ ಹೊಡೆತಕ್ಕೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಧೂಳು ಆವರಿಸಿಕೊಂಡಿತ್ತು. ರಸ್ತೆ ಮೇಲೆಲ್ಲ ನೀರು ತುಂಬಿ ಕೋಡಿ ಹರಿಯರಿತು. ಕೋಲಾರದ ಮುಳಬಾಗಿಲು ತಾಲೂಕಿನ ಒಕ್ಕಲೇರಿ ಹೂಬಳಿಯಲ್ಲಿ ನೆಲ ಕಾಣದಷ್ಟು ರೀತಿಯಲ್ಲಿ ಆಲಿಕಲ್ಲು ಬಿದ್ದಿವೆ.
ತಮಿಳುನಾಡಿನ ದಕ್ಷಿಣದಿಂದ ಕೊಂಕಣ ಪ್ರದೇಶದವರೆಗೆ ಕರ್ನಾಟಕದ ಕರಾವಳಿ ವರೆಗೆ ಸಮುದ್ರ ಮಟ್ಟದಲ್ಲಿ ಸುಳಿಗಾಳಿ ನಿರ್ಮಾಣವಾಗಿತ್ತು. ಇದರಿಂದ ತಾಪಮಾನ ತಗ್ಗಿದ್ದು, ಗುಡುಗು ಸಹಿತ ಮಳೆ ಸುರಿಯಲು ಕಾರಣವಾಗಿದೆ. ವೈಪರಿತ್ಯಗಳ ಪರಿಣಾಮವಾಗಿ ಮುಂದಿನ 4-5 ದಿನ ಸಂಜೆ ಹಲವೆಡೆ ರಾತ್ರಿ ಜೋರು ಮಳೆ, ಆಲಿಕಲ್ಲು ಸಹಿತ ಮಳೆ ನೀರಿಕ್ಷೆ ಇದೆ. ಉತ್ತರ ಕರ್ನಾಟಕದ ಒಳನಾಡು ಪ್ರದೇಶ, ಮಳೆನಾಡು ಜಿಲ್ಲೆ ಒಳಗೊಂಡಿರುವ ದಕ್ಷಿಣ ಕರ್ನಾಟಕದ ಹಲವು ಪ್ರದೇಶಗಳು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.

ಬೆಂಗಳೂರಿಗೆ ಗುರುವಾರ ಸಂಜೆಯಿಂದ ತಡರಾತ್ರಿವರೆಗೆ ಜೋರು ಮಳೆ ಆಗಿದೆ. ಇದೇ ರೀತಿ ವಾತಾವರಣ ಮುಂದುವರಿಯಲಿದೆ. ಮುಂದಿನ ಮೂರು ದಿನ ಸಂಜೆ ಇಲ್ಲವೇ ರಾತ್ರಿ ಗುಡುಗು ಸಹಿತಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ತೀವ್ರ ಗುಡುಗು ಮತ್ತು ಆಳಿಕಲ್ಲು ಮಳೆ ಹೆಚ್ಚಾಗಿದೆ. ಈ ಭಾಗದಲ್ಲಿ ಶೇಕಡಾ 25-50ರಷ್ಟು ಗುಡುಗು ಸಿಡಿಲುಗಳನ್ನು ವರದಿ ಆಗಿದೆ. ಇದ ಪೂರ್ವ ಮುಂಗಾರು ಋತುವಾಗಿದ್ದರಿಂದ ಗುಡುಗು ಸಹಿತ ಮಳೆ ಸಾಮಾನ್ಯ ಎಂಬಂತಾಗಿದೆ. ಇನ್ನೂ ಬುಧವಾರ ರಾತ್ರಿ ಕೊಡಗಿನ ಕೆಲವೆಡೆ ಅಲ್ಪ ಕಾಲವೇ ಮಳೆಯಾದರೂ ಅದು ಧಾರಾಕಾರವಾಗಿ ಸುರಿದಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಜಿಲ್ಲಾವಾರು ಮುನ್ಸೂಚನೆ ಏನಿದೆ?
ಸಮುದ್ರ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ಕರಾವಳಿ ಭಾಗದಲ್ಲಿ ನಾಳೆಯಿಂದ ಮಳೆ ಸುರಿಸುವ ಮಾರುತಗಳ ಸಕ್ರಿಯತೆ ತುಸು ಕಡಿಮೆಯಾಗಲಿದೆ. ಇನ್ನೂ ಉತ್ತರ ಒಳನಾಡಿನ ಬೀದರ್, ಧಾರವಾಡ, ಕಲಬುರಗಿ, ಕೊಪ್ಪಳ್ಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮುಂದಿನ ಎರಡು ದಿನ ಮಳೆ ಬೀಳಲಿದೆ. ಇಲ್ಲಿ ಸಹ ತಾಪಮಾನ ಕಡಿಮೆಯಾಗಿ, ಮಬ್ಬು ವಾತಾವರಣ ಕಂಡು ಬರಲಿದೆ.
ಅದೇ ರೀತಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮೈಸೂರು, ರಾಮನಗರ, ತುಮಕೂರಿ ಜಿಲ್ಲೆಗಳಲ್ಲ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಸಾಧ್ಯತೆ ಇದೆ. ಉಳಿದೆಡೆ ಹಗುರು ಮಳೆ ಬರುವ ನಿರೀಕ್ಷೆ ಇದೆ.












Click it and Unblock the Notifications