ರಾಹುಲ್ ಗಾಂಧಿ ನೇತೃತ್ವದಲ್ಲಿ ಏಪ್ರಿಲ್ 5 ರಿಂದ ಸತ್ಯಮೇವ ಜಯತೆ ಹೋರಾಟ ಆರಂಭ: ಡಿ.ಕೆ.ಶಿವಕುಮಾರ್
ಬೆಂಗಳೂರು, ಮಾರ್ಚ್28: ರಾಜ್ಯ ವಿಧಾನಸಭಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳು ಚುರುಕುಗೊಂಡಿದ್ದು, ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಜೊತೆಗೆ ಸತ್ಯಮೇವ ಜಯತೆ ಹೋರಾಟ ಆರಂಭಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 5ರಂದು ರಾಹುಲ್ ಗಾಂಧಿ ಅವರು ಅದೇ ಕೋಲಾರಕ್ಕೆ ಬಂದು ಗಾಂಧೀಜಿ ಅವರ ಮೂಲ ಮಂತ್ರವಾದ ಸತ್ಯ ಮೇಯ ಜಯತೆ ಹೋರಾಟವನ್ನು ದೇಶದುದ್ದಗಲಕ್ಕೆ ಆರಂಭಿಸುತ್ತಿದ್ದಾರೆ. ನಾವು ಇಲ್ಲಿಂದಲೇ ಹೋರಾಟ ಆರಂಭಿಸಲು ಮನವಿ ಮಾಡಿದ್ದು, ಅವರು ಇಲ್ಲಿಗೆ ಆಗಮಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಎಲ್ಲಿ ಭಾಷಣ ಮಾಡಿದರೋ ಅದೇ ಭೂಮಿಯಿಂದ ಮತ್ತೆ ಪ್ರಜಾಪ್ರಭುತ್ವ ಉಳಿಸುವ, ರಾಜ್ಯ ಹಾಗೂ ದೇಶದಲ್ಲಿ ಹೊಸ ಬದಲಾವಣೆ ಗಾಳಿ ಬೀಸಲು ಹೋರಾಟ ಮಾಡಲಿದ್ದಾರೆ, ಕೋಲಾರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಅಧಿಕಾರ ದುರ್ಬಳಕೆ ಪ್ರಜಾಪ್ರಭುತ್ವಕ್ಕೆ ಅಪಮಾನವಾಗಿದೆ. ರಾಹುಲ್ ಗಾಂಧಿ ಅವರು ದೇಶದಾದ್ಯಂತ ಪಾದಯಾತ್ರೆ ಮಾಡಿ ಜನರ ಮನ ಗೆದ್ದಿರುವುದಕ್ಕೆ ಬಿಜೆಪಿಯವರು ಈ ಸ್ಥಿತಿ ತಂದಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಕಾಂಗ್ರೆಸ್ ಕನಸು ಕಾಣುತ್ತಿದೆ ಎಂಬ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೇಳಿಕೆ ಕುರಿತು ಮಾತನಾಡಿ, ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವುದಾಗಿದ್ದರೆ, ಮೋದಿ ಅವರನ್ನು ಯಾಕೆ ವಾರಕ್ಕೊಮ್ಮೆ ರಾಜ್ಯಕ್ಕೆ ಕರೆಸುತ್ತಿದ್ದರು? ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡಿದ್ದರೆ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಇಲ್ಲಿಗೆ ಕರೆಸಿ ತಾಲೂಕು, ಹೋಬಳಿ ಮಟ್ಟದಲ್ಲಿ ತಿರುಗಿಸುತ್ತಿದ್ದರು? ಎಂದು ಪ್ರಶ್ನಿಸಿದ ಅವರು, ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಇನ್ನೂ ಯಡಿಯೂರಪ್ಪ ಅವರ ಕಣ್ಣಲ್ಲಿ ನೀರು ಹಾಕಿಸಿದ ಮೇಲೆ ಅಮಿತ್ ಶಾ ಹಾಗೂ ಇತರ ನಾಯಕರು ಶಾಸಕರು ಮಂತ್ರಿಗಳ ಮನೆ ಮನೆಗೆ ತಿರುಗುತ್ತಿದ್ದಾರೆ. ಈ ಹಿಂದೆ ಎಂದಾದರೂ ಈ ರೀತಿ ತಿರುಗಿದ್ದರಾ? ಅವರಲ್ಲಿರುವ ಭಯ ನಿಮ್ಮ ಕ್ಯಾಮೆರಾಗಳಲ್ಲಿ ಕಾಣುತ್ತಿದೆ' ಎಂದು ತಿರುಗೇಟು ನೀಡಿದರು.

ರಾಜ್ಯದ ಜನ ನಿಮ್ಮ ಗ್ಯಾರಂಟಿಗೆ ಮತ ಹಾಕಬೇಕಾ, ಬಿಜೆಪಿಯ ಅಭಿವೃದ್ಧಿ ಭರವಸೆಗೆ ಮತ ಹಾಕಬೇಕಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವಾರು, ರಾಜ್ಯದ ಜನ ಈ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರ ನಿರ್ಮೂಲನೆಗೆ, ಜನರ ನೋವಿಗೆ ಪರಿಹಾರಕ್ಕೆ, ಜನರ ಜೇಬು ಪಿಕ್ ಪಾಕೆಟ್ ಆಗುತ್ತಿರುವುದನ್ನು ನಿಲ್ಲಿಸಲು ಜನ ಮೇ 10ರಂದು ಮತ ಚಲಾಯಿಸಲಿದ್ದಾರೆ' ಎಂದು ತಿಳಿಸಿದರು.
40% ಕಮಿಷನ್ ಎಂಬುದು ಪರಿಣಾಮ ಬೀರಿಲ್ಲ ಕಾಂಗ್ರೆಸ್ ಗೆ ತಿರುಗುಬಾಣವಾಗಲಿದೆ ಎಂಬ ಬಿಜೆಪಿ ಹೇಳಿಕೆಗೆ ಮಾತನಾಡಿ, 40% ಕಮಿಷನ್ ಎಂಬುದು ಜನರ ಮನಸ್ಸಿನಲ್ಲಿ ಹಚ್ಛೆಯಾಗಿದೆ. ಲೋಕಾಯುಕ್ತ ಸಂಸ್ಥೆ ಅದಕ್ಕೆ ಸ್ಟಾಂಪ್ ಒತ್ತಿದ್ದಾರೆ ಎಂದು ತಿಳಿಸಿದರು.
ಆಯನೂರು ಮಂಜುನಾಥ್ ಅವರು ಯಾವಾಗ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಕುರಿತು ಮಾತನಾಡಿ, ನಾನು ಆ ಬಗ್ಗೆ ಮಾತನಾಡುವುದಿಲ್ಲ, ಇಂದು ಕೇವಲ ಚುನಾವಣೆ ದಿನಾಂಕ ಪ್ರಕಟ ವಿಚಾರವಾಗಿ ಮಾತನಾಡುತ್ತೇನೆ. ನಾವು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಗುಜರಾತ್ ಚುನಾವಣೆಯಲ್ಲಿ ಬಳಸಿದ ಮತಯಂತ್ರ ಬಳಸಬಾರದು ಎಂದು ಮನವಿ ಮಾಡಿದ್ದೆವು. ಅವರು ಇಂದು(ಬುಧವಾರ) ನಮ್ಮನ್ನ ಕರೆದಿದ್ದು, ಚುನಾವಣೆ ಸಮಯದಲ್ಲಿ ಬೂತ್ ಆರಂಭವಾಗುವ ಮುನ್ನ ಎಲ್ಲ ಪಕ್ಷದ ಬೂತ್ ಏಜೆಂಟರಿಗೆ 50 ಮತ ಹಾಕಿ ಪ್ರಯೋಗ ಮಾಡಿ ಮತದಾನ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ನಮ್ಮ ಕಾರ್ಯಕರ್ತರಿಗೆ ತರಬೇತಿ ನೀಡುತ್ತೇವೆ. ಅವರ ಈ ಕ್ರಮಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಿದ್ದರಾಮಯ್ಯ ಅವರು ಕೊನೆಯ ಚುನಾವಣೆ ಎಂದು ಹೇಳಿದ್ದು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಅವರ ಸ್ವಂತ ಅಭಿಪ್ರಾಯ ನಾನೇಕೆ ಬದಲಾವಣೆ ಮಾಡಲಿ? ಯಾವು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಲು ಕೇಂದ್ರ ಚುನಾವಣಾ ಸಮಿತಿ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಜೆಡಿಎಸ್ ಹೈದರಾಬಾದ್ ನಲ್ಲಿ ಹಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಬೊಮ್ಮಾಯಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ತೆಲಂಗಾಣ, ಕರ್ನಾಟಕದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲವೇ? ನಾವು ಕೇವಲ ರಾಜ್ಯದ ಜನರ ಜತೆಗೆ ಹೊಂದಾಣಿಕೆಯಾಗಿದ್ದೇವೆ ಸಿಎಂ ಗೆ ತಿರುಗೇಟು ನೀಡಿದರು.












Click it and Unblock the Notifications