ಕೆಎನ್ ರಾಜಣ್ಣನನ್ನ ಸಂಪುಟದಿಂದ ವಜಾ ಮಾಡಲು ಅವರೇ ಕಾರಣ: ಸಿದ್ದರಾಮಯ್ಯ ಹೇಳಿದ್ದೇನು?
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರು ನಿನ್ನೆ ದಿಢೀರ್ ರಾಜೀನಾಮೆ ನೀಡಿದ್ದು, ಅವರನ್ನು ಸಂಪುಟದಿಂದಲೇ ಕೈಬಿಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತರೂ ಆಗಿದ್ದ ರಾಜಣ್ಣ ಅವರನ್ನು ಹೈಕಮಾಂಡ್ ಸೂಚನೆ ಮೇರೆಗೆ ವಜಾ ಮಾಡಲಾಗಿದೆ ಎಂದು ಹೇಳಲಾಗಿತ್ತು. ಇನ್ನು ತಮ್ಮ ಆಪ್ತ ರಾಜಣ್ಣನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಕೂಡ ವಿಫಲರಾದರು ಎಂಬ ಚರ್ಚೆಗಳು ಕೇಳಿಬಂದವು. ನಿನ್ನೆ ರಾಜಣ್ಣನ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದ ಸಿದ್ದರಾಮಯ್ಯ ಅವರು ಅದನ್ನು ರಾಜ್ಯಪಾಲರಿಗೆ ಕಳಿಸಿ ಅಂಗೀಕರಿಸಲಾಗಿತ್ತು. ಈ ಬಗ್ಗೆ ಇಂದು ಮಾತನಾಡಿರುವ ಅವರು, ರಾಜಣ್ಣನನ್ನ ಸಂಪುಟದಿಂದ ಕೈಬಿಡಲು ಅಸಲಿ ಕಾರಣವೇನು ಎಂದು ಸ್ಪಷ್ಟನೆ ನೀಡಿದ್ದಾರೆ.
ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಚಾರದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಅವರು ಮತಗಳ್ಳತನದ ಬಗ್ಗೆ ನೀಡಿದ್ದ ಹೇಳಿಕೆ ಬಗ್ಗೆ ರಾಜಣ್ಣ ವ್ಯಂಗ್ಯವಾಗಿ ಮಾತನಾಡಿದ್ದರು. ನಮ್ಮ ಅವಧಿಯಲ್ಲೇ ವೋಟರ್ ಲಿಸ್ಟ್ ಆಗಿದ್ದು, ಆಗ ಕಣ್ಣುಮುಚ್ಚಿ ಕುಳಿತು ಇವಾಗ ಮಾತನಾಡಿದ್ರೆ ಏನಾಗುತ್ತೆ ಎಂದಿದ್ದರು. ಇದೇ ಕಾರಣಕ್ಕೆ ಹೈಕಮಾಂಡ್ ರಾಜಣ್ಣ ಮೇಲೆ ಗರಂ ಆಗಿ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸಿದ್ದರಾಮಯ್ಯ ಅವರು ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.

'ಹೇಳಿದ ವಿಧಾನ ಸರಿ ಇರಲಿಲ್ಲ'
'ಕೆಎನ್.ರಾಜಣ್ಣ ಅವರನ್ನ ಸಚಿವ ಸಂಪುಟದಿಂದ ವಜಾ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅವರು ಮಾತನಾಡಿದ ಉದ್ದೇಶ ಬೇರೆ ಆಗಿದ್ದರೂ, ಹೇಳಿದ ವಿಧಾನ ಸರಿ ಇರಲಿಲ್ಲ. ಆ ಕಾರಣಕ್ಕಾಗಿಯೇ ರಾಜಣ್ಣ ಅವರನ್ನ ಸಂಪುಟದಿಂದ ಕೈಬಿಡಬೇಕಾಯಿತು. ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ರಾಜಣ್ಣನನ್ನ ಸಂಪುಟದಿಂದ ವಜಾ ಮಾಡಲಾಗಿದೆ' ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ರಾಜಣ್ಣ ಅವರ ಎಡವಟ್ಟಿನಿಂದಾಗಿಯೇ ಇಂದು ಸಚಿವ ಸ್ಥಾನ ಕೈತಪ್ಪಿದೆ. ರಾಹುಲ್ ಗಾಂಧಿ ಅವರು ಮತಗಳ್ಳತನ ವಿಚಾರವಾಗಿ ಎದುರಾಳಿ ಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳಲು ಬೃಹತ್ ಮಟ್ಟದ ಹೋರಾಟಕ್ಕೆ ಕರೆ ಕೊಟ್ಟಿದ್ದರು. ಆದರೆ ಸ್ವಪಕ್ಷದವರೇ ಆಗಿದ್ದ ರಾಜಣ್ಣ ಈ ರೀತಿ ವ್ಯಂಗ್ಯ ಮಾಡಿದ್ದು, ಹೈಕಮಾಂಡ್ ಕೋಪಕ್ಕೆ ಕಾರಣವಾಗಿತ್ತು. ಈ ಹಿಂದೆ ಹನಿಟ್ರ್ಯಾಪ್ ವಿಚಾರವನ್ನು ಕೂಡ ರಾಜಣ್ಣ ಸದನದಲ್ಲೇ ಬಹಿರಂಗಪಡಿಸಿ ಪಕ್ಷಕ್ಕೆ ಮುಜುಗರ ತಂದಿದ್ದರು. ಆಗಲೂ ಹೈಕಮಾಂಡ್ ರಾಜಣ್ಣ ವಿರುದ್ಧ ಗರಂ ಆಗಿತ್ತು. ಈಗ ಮತ್ತೆ ಅದೇ ಎಡವಟ್ಟು ಮಾಡಿದ್ದರಿಂದ ಸಚಿವ ಸ್ಥಾನ ಕಸಿದುಕೊಂಡಿದೆ.
ನಿನ್ನೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ್ದ ಕೆ.ಎನ್.ರಾಜಣ್ಣ, ನನ್ನ ಹೇಳಿಕೆ ಬಗ್ಗೆ ಹೈಕಮಾಂಡ್ ನಾಯಕರಿಗೆ ತಪ್ಪು ಮಾಹಿತಿ ಹೋಗಿದೆ. ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ದೆಹಲಿಗೆ ಹೋಗಿ ಆದ ತಪ್ಪನ್ನ ಸರಿ ಮಾಡುತ್ತೇನೆ. ಆ ಮೇಲೆ ಹೈಕಮಾಂಡ್ ಸೂಚನೆಯಂತೆ ಮುಂದುವರಿಯುತ್ತೇನೆ ಎಂದು ರಾಜಣ್ಣ ಹೇಳಿದ್ದರು. ಒಟ್ಟಾರೆ ಸೆಪ್ಟೆಂಬರ್ ಕ್ರಾಂತಿ ಎಂದು ಸಂಚಲನ ಸೃಷ್ಟಿಸಿದ್ದ ರಾಜಣ್ಣ ಆಗಸ್ಟ್‌ನಲ್ಲೇ ರಾಜೀನಾಮೆ ನೀಡಿ ಶಾಕ್ ಕೊಟ್ಟಿದ್ದಾರೆ.












Click it and Unblock the Notifications