ಕಾಂಗ್ರೆಸ್ ನಾಯಕರಿಗೆ ಕಿವಿಮಾತೊಂದನ್ನು ಹೇಳಿದ ಆರ್. ಅಶೋಕ
ಬೆಂಗಳೂರು, ಜನವರಿ 07: ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್. ಆದರೆ ವಿರೋಧ ಪಕ್ಷಗಳ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನಡುವೆ ಹೊಂದಾಣಿಕೆ ಇಲ್ಲ. ಸಿದ್ದರಾಮಯ್ಯ ಎರಡೂವರೆ ವರ್ಷದ ಬಳಿಕ ಅಧಿಕಾರವನ್ನು ಬಿಟ್ಟು ಕೊಡಲಿದ್ದಾರೆಯೇ?. ಈ ಕುರಿತು ಹೈಕಮಾಂಡ್ ನಾಯಕರ ಮುಂದೆ ಒಪ್ಪಂದವಾಗಿದೆಯೇ? ಎಂಬ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಇಲ್ಲ.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರೂ ಹೌದು. ಈಗ ಕೆಪಿಸಿಸಿಗೆ ಹೊಸ ಸಾರಥಿ ಬೇಕು ಎಂಬ ಚರ್ಚೆ ನಡೆಯುತ್ತಿದೆ. ಈ ಕುರಿತು ಮಾಜಿ ಸಂಸದ ಡಿ. ಕೆ. ಸುರೇಶ್ ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಸಂಕ್ರಾಂತಿ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದೆ ಎಂಬ ಸುದ್ದಿ ಹಬ್ಬಿದೆ.

ಆರ್. ಅಶೋಕ ಕಿವಿಮಾತು: ಕರ್ನಾಟಕದ ಪ್ರತಿಪಕ್ಷ ನಾಯಕ ಆರ್. ಅಶೋಕ ಕಾಂಗ್ರೆಸ್ ನಾಯಕರಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಹಾಕಿದ್ದಾರೆ.
"ಒಂದು ವ್ಯಕ್ತಿಗೆ ಒಂದು ಹುದ್ದೆ" ಎಂಬ ನೆಪದಲ್ಲಿ ಡಿ. ಕೆ. ಶಿವಕುಮಾರ್ ಅವರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಿತ್ತುಕೊಂಡು ಅವರಿಗೆ ಲಗಾಮು ಹೊರಟಿರುವ ಸಿಎಂ ಸಿದ್ದರಾಮಯ್ಯ ಬಣಕ್ಕೆ ಕೌಂಟರ್ ಕೊಡಲು ಸಹೋದರ ಡಿ. ಕೆ. ಸುರೇಶ್ ಅವರನ್ನ ಅಖಾಡಕ್ಕೆ ಇಳಿಸಿರುವ ಡಿಸಿಎಂ ಸಾಹೇಬರು, ರಾಜ್ಯಸಭೆಯ ವಿಪಕ್ಷ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಎಳೆದು ತರುವ ಮೂಲಕ ಸಿಎಂ ಬಣಕ್ಕೆ ಟಕ್ಕರ್ ಕೊಟ್ಟಿದ್ದಾರೆ.
'ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ನನ್ನ ಕಿವಿಮಾತು. ನೀವು ಒಬ್ಬ ವ್ಯಕ್ತಿಗೆ ಒಂದು ಹುದ್ದೆಯಾದರೂ ಕೊಡಿ, ಹತ್ತು ಹುದ್ದೆಯಾದರೂ ಕೊಡಿ. ರಾಜ್ಯದ ಜನತೆ ನಿಮ್ಮ ವಿರುದ್ಧ ದಂಗೆ ಏಳುವ ಮುನ್ನ ಒಂದು ನಿಯತ್ತಾದ ಸರ್ಕಾರ ಕೊಡಿ' ಎಂದು ಅಶೋಕ ಸಲಹೆ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಮತ್ತು ಎಐಸಿಸಿ ಅಧ್ಯಕ್ಷರು. ಒಬ್ಬರಿಗೆ ಒಂದೇ ಹುದ್ದೆ ಎಂದು ಆದರೆ ಅವರು ಸಹ ಒಂದು ಹುದ್ದೆಯನ್ನು ಬಿಟ್ಟುಕೊಡಬೇಕು ಎಂಬುದು ಆರ್. ಅಶೋಕ ಅವರ ಪೋಸ್ಟ್‌ನ ಸಾರಾಂಶವಾಗಿದೆ.
ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆಗ ಡಿ. ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿಯಾದರು. ಅವರ ಕೇಳಿದ ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಅವರಿಗೆ ನೀಡಲಾಯಿತು.
ಅಲ್ಲದೇ 2024ರ ಲೋಕಸಭೆ ಚುನಾವಣೆ ಮುಗಿಯುವ ತನಕ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ತಮಗೆ ಬೇಕು ಎಂದು ಹೈಕಮಾಂಡ್ ಮುಂದೆ ಡಿ. ಕೆ. ಶಿವಕುಮಾರ್ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಹ ಒಪ್ಪಿಗೆ ನೀಡಲಾಗಿತ್ತು. ಆದರೆ ಈಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಆರಂಭವಾಗಿದೆ.
ಸದ್ಯದ ಮಾಹಿತಿ ಪ್ರಕಾರ ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಬಹುದು ಎಂಬ ವರದಿಗಳಿವೆ. ಆದ್ದರಿಂದ ಆರ್. ಅಶೋಕ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರು ಆಲಿಸುತ್ತಾರೋ? ಎಂದು ಕಾದು ನೋಡಬೇಕಿದೆ.
ಕರ್ನಾಟಕ ಬಿಜೆಪಿ ಇಂದು ಫೇಸ್‌ಬುಕ್ ಪೋಸ್ಟ್ ಒಂದನ್ನು ಹಾಕಿದೆ. 'ಒಪ್ಪಂದದ ಮೇರೆಗೆ ಸಿಎಂ ಕುರ್ಚಿ ಅಲಂಕರಿಸಿರುವ ಸಿದ್ದರಾಮಯ್ಯ ಅವರು ತಮ್ಮ ನಂತರದ ಸಿಎಂ ಹುದ್ದೆ ಅಪ್ಪಿತಪ್ಪಿಯೂ ಡಿಕೆಶಿಗೆ ಸಿಗಬಾರದೆಂದು ಪಕ್ಕಾ ಪ್ಲ್ಯಾನ್ ಮಾಡಿದಂತೆ ಭಾಸವಾಗುತ್ತಿದೆ' ಎಂದು ಹೇಳಿದೆ.
'ಸರ್ಕಾರದಲ್ಲಿ ಈಗ ಗುಂಪು ರಾಜಕಾರಣ ಆರಂಭವಾಗಿದೆ. ಒಬ್ಬೊಬ್ಬ ನಾಯಕರು ತಾನು ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಾ ಕಿತ್ತಾಡುತ್ತಿದ್ದಾರೆ. ಡಿ. ಕೆ. ಶಿವಕುಮಾರ್ ವಿದೇಶಿ ಪ್ರವಾಸದಲ್ಲಿದ್ದಾಗ ಡಿನ್ನರ್ ಮೀಟಿಂಗ್ ಹೆಸರಿನಲ್ಲಿ ಡಿಕೆಶಿಗೆ ಹಳ್ಳ ತೋಡುವ ಕೆಲಸವನ್ನು ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಪರಮೇಶ್ವರ್ ಅವರು ತಮ್ಮ ನೇತೃತ್ವದಲ್ಲಿ ಒಂದು ಡಿನ್ನರ್ ಮೀಟಿಂಗ್ ನಡೆಸಲು ಸಜ್ಜಾಗಿದ್ದಾರೆ' ಎಂದು ಪ್ರತಿಪಕ್ಷ ಪೋಸ್ಟ್ ಹಾಕಿದೆ.
'ಸತೀಶ್ ಜಾರಕಿಹೊಳಿ ಅಂತೂ ಸೂಕ್ಷ್ಮವಾಗಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ತಾನೇ ಎಂಬ ಸಂದೇಶವನ್ನು ರವಾನಿಸಿ ಸಿಎಂ ಪದವಿ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ಸಂದೇಶವನ್ನು ರವಾನಿಸಿದ್ದಾರೆ. ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಹೋರಾಟ, ಗುದ್ದಾಟಗಳು ಅಂತಿಮ ಹಂತದಲ್ಲಿದ್ದು, ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣದ ನಾಯಕರು ದೆಹಲಿ ನಾಯಕರಿಗೆ ಎಡತಾಕುತ್ತಿದ್ದಾರೆ. ಡಿ. ಕೆ. ಶಿವಕುಮಾರ್ ಅವರು ಸಿಎಂ ಕುರ್ಚಿ ಏರಲು ಹೋರಾಡಿದರೆ, ಸಿದ್ದರಾಮಯ್ಯ ಅವರು ಸಿಎಂ ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಒಟ್ಟಿನಲ್ಲಿ CongressVsCongress ಕಿತ್ತಾಟದಲ್ಲಿ ರಾಜ್ಯ ಬಡವಾಗುತ್ತಿದೆ' ಎಂದು ಬಿಜೆಪಿ ಆರೋಪಿಸಿದೆ.












Click it and Unblock the Notifications