• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸಿಎಂ' ಯಡಿಯೂರಪ್ಪ ಬದಲಾವಣೆ ಇಲ್ಲ ಎನ್ನುತ್ತಲೇ ರಾಜ್ಯ 'ಬಿಜೆಪಿ' ಸಮಿತಿ ರಚಿಸಿದ್ದು ಯಾಕೆ?

|
Google Oneindia Kannada News

ಬೆಂಗಳೂರು, ಜೂ. 07: "ಹೈಕಮಾಂಡ್ ಯಾವ ದಿನ ಯಡಿಯೂರಪ್ಪನವರೇ ನೀವು ಬೇಡ ಅಂತಾರೊ, ಆ ದಿನ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಟ್ಟಿರುವ ಹೇಳಿಕೆ ಬಿಜೆಪಿಯಲ್ಲಿ ಹಲವು ಬೆಳವಣಿಗೆಗಳಿಗೆ ಮುನ್ನುಡಿ ಹಾಕಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಜಿಂದಾಲ್‌ ಕಂಪನಿಗೆ ಕಡಿಮೆ ಬೆಲೆಗೆ ಭೂಮಿ ಪರಭಾರೆ ವಿಚಾರದಲ್ಲಿ ಹೈಕಮಾಂಡ್‌ಗೆ ದೂರು ಕೊಡುವುದರಿಂದ ಆರಂಭವಾದ ಅಪಸ್ವರ ಇದೀಗ ಬೇರೆಯದ್ದೆ ರೂಪ ಪಡೆದುಕೊಂಡಿದೆ.

ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿಈಗ ಎರಡು ಬಣಗಳಾಗಿರುವುದು ಗುಟ್ಟಾಗಿ ಏನೂ ಉಳಿದಿಲ್ಲ. ಈ ಮಧ್ಯೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ 'ಗೊಂದಲಗಳಿಗೂ ಫುಲ್‌ಸ್ಟಾಪ್ ಹಾಕಲಾಗಿದೆ' ಎಂದು ನಿನ್ನೆ (ಜೂ.06) ಹೇಳಿಕೆ ನೀಡಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರು, ಇವತ್ತು, 'ಈ ಬಗ್ಗೆ ಗಮನ ಹರಿಸಲು ಸಮಿತಿಯೊಂದನ್ನು ರಚಿಸಲಾಗಿದೆ' ಎಂದು ಹೇಳಿಕೆ ನೀಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಇದೇ ಸಂದರ್ಭದಲ್ಲಿ ಹೊನ್ನಾಳಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಸಿಎಂ ಯಡಿಯೂರಪ್ಪ ಅವರ ಪರವಾಗಿ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸಿಎಂ ಬದಲಾವಣೆ ಇಲ್ಲ ಎನ್ನುತ್ತಲೇ ರಾಜ್ಯ ಬಿಜೆಪಿಯಲ್ಲಿ ಉನ್ನತ ಮಟ್ಟದ ಸಮಿಯೊಂದನ್ನು ರಚನೆ ಮಾಡಿರುವುದು ಯಾಕೆ ಎಂಬ ಪ್ರಶ್ನೆ ಬಿಜೆಪಿ ಶಾಸಕರಲ್ಲಿ ಮಾತ್ರವಲ್ಲ, ಇಡೀ ರಾಜ್ಯ ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಸಂಚಲನ ಮೂಡಿಸಿದ ಅಶೋಕ್ ಹೇಳಿಕೆ

ಸಂಚಲನ ಮೂಡಿಸಿದ ಅಶೋಕ್ ಹೇಳಿಕೆ

"ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಒಂದು ಕಮಿಟಿ ಮಾಡಲಾಗಿದೆ" ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಇಂದು ಹೇಳಿಕೆ ನೀಡಿದ್ದಾರೆ. ಈ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ಮಾಡಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ಸಿಎಂ ಯಡಿಯೂರಪ್ಪ, ಮೂವರು ಸಚಿವರು, ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ. ಜೊತೆಗೆ ಉತ್ತರ ಕರ್ನಾಟಕದ ಇನ್ನೊಬ್ಬ ಸಚಿವರು ಸಮಿತಿಗೆ ಸೇರಲಿದ್ದಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ.

ಕಟೀಲ್ ನೇತೃತ್ವದಲ್ಲಿ ಸಮಿತಿ ರಚನೆ!

ಕಟೀಲ್ ನೇತೃತ್ವದಲ್ಲಿ ಸಮಿತಿ ರಚನೆ!

'ಒನ್‌ಇಂಡಿಯಾ ಕನ್ನಡ'ಕ್ಕೆ ಸಿಕ್ಕಿರುವ ಮಾಹಿತಿಯಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ರಾಜ್ಯ ಬಿಜೆಪಿಯ ಐವರು ಪ್ರಧಾನ ಕಾರ್ಯದರ್ಶಿಗಳು ಪಕ್ಷದ ವತಿಯಿಂದ ಹಾಗೂ ಸಿಎಂ ಯಡಿಯೂರಪ್ಪ, ಡಿಸಿಎಂ ಡಾ. ಅಶ್ವಥ್ ನಾರಾಯಣ, ಸಚಿವರಾದ ಅರವಿಂದ್ ಲಿಂಬಾವಳಿ, ಆರ್. ಅಶೋಕ್ ಸೇರಿದಂತೆ 10 ನಾಯಕರು ಸರ್ಕಾರದ ವತಿಯಿಂದ ಸಮಿತಿಯಲ್ಲಿದ್ದಾರೆ. ಜೊತೆಗೆ ಉತ್ತರ ಕರ್ನಾಟಕ ಭಾಗದಿಂದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಥವಾ ಉಮೇಶ್ ಕತ್ತಿ ಅವರು ಸಮಿತಿ ಸೇರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಈ ಸಮಿತಿ ಏನು ಮಾಡಲಿದೆ?

ಈ ಸಮಿತಿ ಏನು ಮಾಡಲಿದೆ?

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದ ಸಮಿತಿಯ ಕಾರ್ಯಗಳ ಕುರಿತೂ ಸಚಿವ ಅಶೋಕ್ ವಿವರಿಸಿದ್ದಾರೆ. "ಸಮಿತಿಯ ಪ್ರಮುಖ ಉದ್ದೇಶ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ವಿಚಾರದ ಕುರಿತು ಪರ ಅಥವಾ ವಿರೋಧದ ಚರ್ಚೆಯನ್ನು ತಡೆಯುವುದು ಆಗಿದೆ. ಸಿಎಂ ಯಡಿಯೂರಪ್ಪ ಅವರ ಪರವಾಗಿ ಅಥವಾ ವಿರೋಧವಾಗಿ ಯಾರೂ ಹೇಳಿಕೆಯನ್ನು ಕೊಡಬಾರದು. ಪಕ್ಷದ ಬದ್ಧತೆಗೆ ಮಾತ್ರ ಹೇಳಿಕೆ ಇರಬೇಕು. ಮುಂದೆ ಯಾರು ಕೂಡ ಸಿಎಂ ಪರ ಅಥವಾ ವಿರೋಧವಾಗಿ ಆಗಲಿ‌ ಮಾತಾಡುವಂತಿಲ್ಲ. ಹಾಗಂತ ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ. ಒಂದೊಮ್ಮೆ ಯಾರಾದರೂ ಹಾಗೆ ಮಾತನಾಡಿದಲ್ಲಿ, ಸಮಿತಿ ಕ್ರಮ ತೆಗೆದುಕೊಳ್ಳುತ್ತದೆ" ಎಂದು ಅಶೋಕ್ ಹೇಳಿದ್ದಾರೆ.

ಆದರೆ ಸಮಿತಿಯ ಎಚ್ಚರಿಕೆಯ ಹೊರತಾಗಿಯೂ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಸಿಎಂ ಬೆಂಬಲಿಸಿ ಶಾಸಕರ ಸಹಿ ಸಂಗ್ರಹ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಆ ಬಗ್ಗೆ ಸಮಿತಿ ಏನು ಕ್ರಮಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

  Rohini Sindhuri : ವಯಕ್ತಿಕವಾಗಿ TARGET ಮಾಡಿದ್ದು ಇಷ್ಟ ಆಗ್ಲಿಲ್ಲ!! | Oneindia Kannada
  ಕುತೂಹಲ ಮೂಡಿಸಿದ ಬಿಜೆಪಿ ನಡೆ

  ಕುತೂಹಲ ಮೂಡಿಸಿದ ಬಿಜೆಪಿ ನಡೆ

  ಒಂದು ಕಡೆಗೆ ಸಿಂಎ ಬದಲಾವಣೆ ವಿಚಾರಕ್ಕೆ ನಿನ್ನೆಯೆ ಫುಲ್ ಸ್ಟಾಪ್ ಹಾಕಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಸಿಎಂ ಬದಲಾವಣೆ ಗಾಳಿ ಸುದ್ದಿಗೆ ನಿನ್ನೆಯೇ ಅಂತ್ಯ ಹಾಡಿದ್ದೇವೆ ಎಂದಿದ್ದಾರೆ. ಮತ್ತೊಂದೆಡೆ ಆ ಬಗ್ಗೆ ಗಮನವಿಡಲು ರಾಜ್ಯ ಬಿಜೆಪಿಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದೆ.


  ಸಿಎಂ ಬದಲಾವಣೆಯನ್ನು ಮಾಡುವುದಿಲ್ಲ ಎಂದು ಹೇಳಿದ ಮೇಲೆಯೂ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಹೀಗಾಗಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ವಿಚಾರವನ್ನು ಜೀವಂತವಾಗಿಡಲು ಹೈಕಮಾಂಡ್ ಬಯಸಿದೆಯಾ ಎಂಬ ಜಿಜ್ಞಾಸೆ ರಾಜಕೀಯ ವಿಶ್ಲೇಷಕರದ್ದಾಗಿದೆ. ಅದು ಸಿಎಂ ಯಡಿಯೂರಪ್ಪ ಅವರ ಕೋಪಕ್ಕೆ ಕಾರಣವಾಗಿರಲೂ ಬಹುದು ಎನ್ನಲಾಗುತ್ತಿದೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತಿದೆ. ಅದರಂತೆ ಯಡಿಯೂರಪ್ಪ ಅವರ ಬದಲಾವಣೆ ಹಾಗೂ ಬದಲಾವಣೆ ಆಗದಿರುವ ಬಗ್ಗೆ ಈಗಲೇ ಯಾವುದೇ ತೀರ್ಮಾನಕ್ಕೆ ಬರುವುದು ಸಾಧ್ಯವಿಲ್ಲ ಅಂತಾರೆ ಬಿಜೆಪಿಯ ಹಿರಿಯ ನಾಯಕರೊಬ್ಬರು.

  English summary
  Revenue Minister R Ashoka said that a state leval bjp committee was created to prevent anyone from talking about the CM's change.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X