Waqf: ವಕ್ಫ್ ವಿಚಾರದಲ್ಲಿ ಸರ್ಕಾರಕ್ಕೆ ದೊಡ್ಡ ಸವಾಲು ಹಾಕಿದ ಆರ್.ಅಶೋಕ್
ವಕ್ಫ್ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಹಿಂದೂಗಳ ಮೇಲೆ ಮಾಡುತ್ತಿರುವ ದಬ್ಬಾಳಿಕೆ, ಭೂಕಬಳಿಕೆ ವಿಧಾನ ಮಂಡಲ ಅಧಿವೇಶನಲ್ಲಿ ಬಟಾಬಯಲಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಜನರ ಗಮನ ಬೇರೆಡೆ ಸೆಳೆದು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
2012ರಲ್ಲಿ ಅಂದಿನ ಬಿಜೆಪಿ ಸರ್ಕಾರ ವಕ್ಫ್ ಆಸ್ತಿ ದುರ್ಬಳಕೆ, ದುರುಪಯೋಗ, ಅತಿಕ್ರಮಣದ ಬಗ್ಗೆ ತನಿಖೆ ನಡೆಸಲು ಅಂದಿನ ಉಪಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಆನಂದ್ ಅವರ ನೇತೃತ್ವದ ತನಿಖಾ ತಂಡ ರಚನೆ ಮಾಡಿ ಆದೇಶ ಹೊರಡಿಸಿತ್ತು ಎಂದಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಉಪಲೋಕಾಯುಕ್ತ ಆನಂದ್ ಅವರ ನೇತೃತ್ವದ ತಂಡ ಪ್ರತಿ ಜಿಲ್ಲೆಗೆ ಸಂಬಂಧಿಸಿದಂತೆ ಪ್ರತ್ಯೇಕ ವರದಿ ನೀಡಿ ಪ್ರತಿ ಪ್ರಕರಣದಲ್ಲಿ ವಿವಿಧ ರೀತಿಯ ಕ್ರಮ ಜರುಗಿಸಲು ಶಿಫಾರಸ್ಸು ಮಾಡಿತ್ತು. 10 ಸಂಪುಟಗಳಿಗೂ ಹೆಚ್ಚಿನ ವಿಸ್ತೃತ ವರದಿಯನ್ನ 2016ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತ್ತು ಎಂದು ವಿವರಿಸಿದ್ದಾರೆ.
ಆದರೆ ಅಂದಿನ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ವರದಿಯ ಅನುಸಾರ ಕ್ರಮ ಕೈಗೊಳ್ಳುವುದಿರಲಿ, 2012ರಲ್ಲಿ ಈ ತನಿಖೆಗೆ ಆದೇಶ ಮಾಡಿದ್ದ ಬಿಜೆಪಿ ಸರ್ಕಾರದ ಆದೇಶವನ್ನೇ ರದ್ದುಗೊಳಿಸಿ, ಆ ವರದಿ ದಾಖಲೆ ಆಗುವುದನ್ನು ತಪ್ಪಿಸಿತ್ತು ಎಂದು ದೂರಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ವಕ್ಫ್ ವಿಚಾರದಲ್ಲಿ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ಉಪಲೋಕಾಯುಕ್ತ ಆನಂದ್ ಅವರ ವರದಿ ಬಹಿರಂಗ ಪಡಿಸಿ, ಅವರು ಕ್ರಮ ಜರುಗಿಸಲು ನೀಡಿದ್ದ ಶಿಫಾರಸ್ಸುಗಳನ್ನು ಜಾರಿಗೆ ತರಲಿ ಎಂದು ಆರ್.ಅಶೋಕ್ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಕರ್ನಾಟಕದಲ್ಲಿ ಜಮೀನಿನ ಮಾಲೀಕರು ವಕ್ಫ್ ಬೋರ್ಡ್‌ನಿಂದ ಎನ್‌ಒಸಿ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ರೈಲ್ವೆ, ಭಾರತೀಯ ಸೇನೆ ಬಿಟ್ಟರೆ ಮೂರನೇ ಅತಿದೊಡ್ಡ ಆಸ್ತಿ ಹೊಂದಿರುವುದು ವಕ್ಫ್ ಬೋರ್ಡ್ ಮಂಡಳಿ. ಸುಮಾರು 9.4 ಲಕ್ಷ ಎಕರೆ ಪ್ರದೇಶ, 8.7 ಲಕ್ಷ ಆಸ್ತಿಗಳು ವಕ್ಫ್ ಬೋರ್ಡ್ ಹೊಂದಿದೆ ಎಂದು ಆರ್.ಅಶೋಕ್ ಅವರು ಬೆಳಗಾವಿ ಅಧಿವೇಶನದಲ್ಲಿ ವಿವರಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ವಕ್ಫ್ ಮಂಡಳಿಯನ್ನು ವಜಾಗೊಳಿಸಿದ ಅಲ್ಲಿನ ಎನ್‌ಡಿ ಸರ್ಕಾರದ ದಿಟ್ಟ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಕ್ಫ್ ಮಂಡಳಿಯ ಪರಿಕಲ್ಪನೆಯೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಕರ್ನಾಟಕದಲ್ಲೂ ಆಂಧ್ರಪ್ರದೇಶದ ರೀತಿ ವಕ್ಫ್ ಮಂಡಳಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದರು.
ಈ ಮೂಲಕ ರೈತರು, ಮಠ-ಮಂದಿರಗಳು, ಜನಸಾಮಾನ್ಯರು ಹಾಗು ಸರ್ಕಾರಿ ಆಸ್ತಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆಗೆ ಶಾಶ್ವತ ಅಂತ್ಯ ಹಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಅಶೋಕ್ ಒತ್ತಾಯಿಸಿದ್ದರು.












Click it and Unblock the Notifications