ಏನು ಓದ್ಕೋಬೇಡಿ, ಪಾಸಾಗ್ತೀರಾ ಹೋಗಿ ಎಂದಿದ್ದ ಕಾಲೇಜು!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 18 : ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಆತಂಕಕಾರಿ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಮಾರ್ಚ್ 21 ಮತ್ತು 31ರಂದು ಎರಡು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು.

ಹಗರಣ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಹಗರಣದ ಪ್ರಮುಖ ಆರೋಪಿ ಶಿವಕುಮಾರ್ 20 ಲಕ್ಷ ರೂ.ಗಳಿಗೆ 20 ಖಾಸಗಿ ಕಾಲೇಜುಗಳಿಗೆ ಪತ್ರಿಕೆಯನ್ನು ಮಾರಾಟ ಮಾಡಿದ್ದ ಎಂದು ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನೂ ಹಲವು ಕಾಲೇಜುಗಳ ಜೊತೆ ಪತ್ರಿಕೆ ಮಾರಾಟದ ಕುರಿತು ಮಾತುಕತೆ ನಡೆಸಿದ್ದ. [ಪತ್ರಿಕೆ ಸೋರಿಕೆ, ಆರೋಪಿಗಳು ಏ.13ರ ತನಕ ಸಿಐಡಿ ವಶಕ್ಕೆ]

2nd puc

ಪೋಷಕರಿಂದ ಪತ್ರಿಕೆ ನೀಡಲು 5 ರಿಂದ 15 ಲಕ್ಷ ವಸೂಲಿ ಮಾಡಿದ್ದ ಕೆಲವು ಖಾಸಗಿ ಕಾಲೇಜುಗಳು, ಪಿಯುಸಿ ಪರೀಕ್ಷೆ ಚಿಂತೆ ಬಿಟ್ಟು ಸಿಇಟಿ ಕಡೆ ಗಮನ ಕೊಡಿ, ಒಂದು ದಿನ ಮುಂಚಿತವಾಗಿ ಪಿಯುಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ನಿಮ್ಮ ಕೈ ಸೇರುತ್ತದೆ ಎಂದು ಭರವಸೆ ಕೊಟ್ಟಿದ್ದವು. [ಲೀಕಾಗಿದ್ದ ಕೆಮಿಸ್ಟ್ರಿ ಪಿಯು ಪ್ರಶ್ನೆ ಪತ್ರಿಕೆ ಬೆಲೆ 10 ಲಕ್ಷ ರು!]

ಪರೀಕ್ಷೆಯ ಮುನ್ನಾದಿನ ಸುಮಾರು 300 ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ನೀಡಿದ್ದ ಕಾಲೇಜುಗಳು, ಉತ್ತರವನ್ನು ಬಾಯಿಪಾಠ ಮಾಡಲು ಸೂಚನೆ ಕೊಟ್ಟಿದ್ದವು. ಕಾಲೇಜಿಗೆ ಶೇ 100ರಷ್ಟು ಫಲಿತಾಂಶ ಬರಲಿದೆ ಎಂದು ಪೋಷಕರಿಗೆ ತಿಳಿಸಿದ್ದವು. [ಪಿಯುಸಿ ಫಲಿತಾಂಶದಲ್ಲಿ ವಿಳಂಬ]

ಒಂದು ಕಾಲೇಜಿಗೆ 100ರಷ್ಟು ಫಲಿತಾಂಶ ಬಂದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದಾಗಿ ಹೆಚ್ಚಿನ ಡೋನೇಷನ್ ವಸೂಲಿ ಮಾಡಬಹುದು ಎಂಬುದು ಕಾಲೇಜುಗಳ ತಂತ್ರವಾಗಿತ್ತು. ಸಿಐಡಿ ಅಧಿಕಾರಿಗಳು ಸುಮಾರು 300 ವಿದ್ಯಾರ್ಥಿಗಳ ಹೇಳಿಕೆಯನ್ನು ಪಡೆದಿದ್ದು, ಎಲ್ಲಾ ಕಾಲೇಜುಗಳು ಒಂದೇ ರೀತಿ ಹೇಳಿರುವುದು ತನಿಖೆಯಿಂದ ಬಹಿರಂಗವಾಗಿದೆ. [ಪಿಯುಸಿ ಪತ್ರಿಕೆ ಉತ್ತರ ಬರೆದು ಮಾರುತ್ತಿದ್ದ ಇಬ್ಬರ ಬಂಧನ]

ಶಿವಕುಮಾರ್ ಕಿಂಗ್ ಪಿನ್ : ಎಲ್ಲಾ ಕಾಲೇಜುಗಳು ಸೋರಿಕೆ ಹಗರಣದ ಪ್ರಮುಖ ಆರೋಪಿ ಶಿವಕುಮಾರ್ ನತ್ತ ಕೈ ತೋರಿಸುತ್ತಿವೆ. ಈಗ ಹಗರಣದ ಕಿಂಗ್ ಪಿನ್ ಆಗಿದ್ದು, ನಾಪತ್ತೆಯಾಗಿದ್ದಾನೆ. ಕೊನೆಯ ಬಾರಿ ಈತ ಕೇರಳದಲ್ಲಿ ಪತ್ತೆಯಾಗಿದ್ದು, ಬಳಿಕ ಆತ ಮೊಬೈಲ್ ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ.

ಪೊಲೀಸರು ಹೇಳುವ ಪ್ರಕಾರ ಶಿವಕುಮಾರ್ 2008ರಿಂದ ಪ್ರಶ್ನೆ ಪತ್ರಿಕೆ ಬಹಿರಂಗ ಮಾಡುವ ದಂಧೆಯಲ್ಲಿದ್ದಾನೆ. ಎಂಬಿಬಿಎಸ್, ಇಂಜಿನಿಯರಿಂಗ್, ಕೆಪಿಎಸ್‌ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಶಿವಕುಮಾರ್ ಸೋರಿಕೆ ಮಾಡುತ್ತಿದ್ದ.

ಕಾಲೇಜಿನಲ್ಲಿ ಶಿಕ್ಷಕನಾಗಿದ್ದ ಶಿವಕುಮಾರ್ ಸ್ವಯಂ ನಿವೃತ್ತಿ ಪಡೆದು ಪ್ರಶ್ನೆ ಪತ್ರಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಪತ್ರಿಕೆ ಸೋರಿಕೆ ಹಗರಣದಲ್ಲಿ ಶಿವಕುಮಾರ್ ಬಂಧನ ಬಹಳ ಪ್ರಮುಖವಾಗಿದ್ದು ಎಂದು ಪೊಲೀಸರು ಹೇಳಿದ್ದು, ಆತ ಯಾರಿಂದ ಪತ್ರಿಕೆ ಖರೀದಿ ಮಾಡಿದ್ದ? ಎಂಬುದು ಬಂಧನದ ಬಳಿಕ ತಿಳಿಯಲಿದೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Criminal Investigation Department probing the question paper leak in Karnataka has unearthed some shocking details of how the scam has been in operation. It may be recalled that the Chemistry question paper of the II PU exam had leaked twice forcing the examinations to be postponed.
Please Wait while comments are loading...