ಇಂದು ಪುನೀತ್ ರಾಜ್‌ಕುಮಾರ್ ಎರಡನೇ ವರ್ಷದ ಪುಣ್ಯಸ್ಮರಣೆ: ಅಪ್ಪು ನೆನಪಲ್ಲಿ ಅಭಿಮಾನಿಗಳ ಸಮಾಜ ಸೇವೆ
ಬೆಂಗಳೂರು, ಅಕ್ಟೋಬರ್ 29: ಇಂದು ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಎರಡನೇ ವರ್ಷದ ಪುಣ್ಯಸ್ಮರಣೆ. ಕನ್ನಡ ಚಿತ್ರರಂಗದ ಪವರ್‌ಸ್ಟಾರ್, ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ನಿಧನರಾಗಿ ಎರಡು ವರ್ಷಗಳು ಕಳೆದಿದೆ. ಹೀಗಾಗಿ ಅಪ್ಪು ನೆನಪಿನಲ್ಲಿ ರಾಜ್ಯಾದ್ಯಂತ ಇಂದು ವಿವಿಧ ಕಾರ್ಯಕ್ರಗಳು ನಡೆಯಲಿದೆ.
ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ದಂಪತಿಯ ಐದನೇ ಪುತ್ರ ಪುನೀತ್ ರಾಜ್‌ಕುಮಾರ್. ಇವರ ಮೊದಲ ಹೆಸರು ಲೋಹಿತ್. ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು. ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುನೀತ್ ರಾಜ್‌ಕುಮಾರ್ ಸುಮಾರು 29 ಚಿತ್ರಗಳಲ್ಲಿ ನಾಯಕ ನಟರಾಗಿ ನಟನೆ ಮಾಡಿದ್ದಾರೆ.

ನಟನಾಗಿ, ನಿರ್ಮಾಪಕನಾಗಿ, ಹಿನ್ನೆಲೆ ಗಾಯಕನಾಗಿ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಕೇವಲ ನಟನೆ ಮಾತ್ರವಲ್ಲದೇ ಸಾಮಾಜ ಸೇವೆಯಲ್ಲೂ ಅಪ್ಪು ಎತ್ತಿದ ಕೈ. ಹೀಗಾಗಿ ಕನ್ನಡಿಗರ ಪಾಲಿಗೆ ಪುನೀತ್ ರಾಜ್‌ಕುಮಾರ್ ಎಂದೂ ಮಾಸದ ವಜ್ರ. ಪ್ರತಿ ದಿನವೂ ಅಪ್ಪು ಅಭಿಮಾನಿಗಳ ಪಾಲಿನ ಆರಾಧ್ಯ ದೈವ.
ಪುನೀತ್ ರಾಜ್‌ಕುಮಾರ್ ಅವರು ಅಕ್ಟೋಬರ್ 29, 2021ರಂದು ಹೃದಯಾಘಾತದಿಂದ ವಿಧಿವಶರಾದರು. ಕನ್ನಡ ಚಿತ್ರರಂಗದ ದೊಡ್ಮನೆಯ ಕೊನೆಯ ಮಗನ ಅಗಲಿಕೆ ಚಿತ್ರರಂಗ,ಅಭಿಮಾನಿಗಳು ಮಾತ್ರವಲ್ಲದೇ ಸಂಪೂರ್ಣ ಕರುನಾಡೇ ಕಣ್ಣೀರು ಹಾಕಿತ್ತು. ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಚಿತ್ರ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಪ್ಪು ಬೆಳಗ್ಗೆ ಹನ್ನೆರಡು ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದರು. ಕರ್ನಾಟಕ ಶೋಕಾಚರಣೆಯಲ್ಲಿ ಮುಳುಗಿದ್ದು, ಮೂರು ದಿನಗಳ ಕಾಲ ಹಗಲು ರಾತ್ರಿ ಜನ ಅಂತಿಮ ದರ್ಶನಕ್ಕೆ ಆಗಮಿಸಿದ್ದರು.
ಅಭಿಮಾನಿಗಳ ಪುಣ್ಯ ಕ್ಷೇತ್ರವಾದ ಅಪ್ಪು ಸಮಾಧಿ
ಡಾ. ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿಯ ಬಳಿಯೇ ಅಪ್ಪು ಸ್ಮಾರಕ ನಿರ್ಮಾಣ ಮಾಡಲಾಗಿತ್ತು. ಅಪ್ಪು ಅಗಲಿದ ದಿನದಿಂದ ಇಂದಿನ ವರೆಗೂ ಪ್ರತಿನಿತ್ಯ ಸಾವಿರಾರು ಅಭಿಮಾನಿಗಳು ಇಲ್ಲಿಗೆ ಭೇಟಿ ನೀಡಿ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ಇಂದು , ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಅಪ್ಪು ಕುಟುಂಬ ಹಾಗೂ ಲಕ್ಷಾಂತರ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಆಗಮಿಸಲಿದ್ದಾರೆ.

ಇನ್ನು ಅಪ್ಪು ಸ್ಮರಣೆ ಅಂಗವಾಗಿ ಇಂದು ರಾಜ್ಯದ ವಿವಿಧ ಕಡೆಗಳಲ್ಲಿ ಸಮಾಜಮುಖಿ ಕಾರ್ಯಗಳು ನಡೆಯಲಿದೆ. ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಅನ್ನದಾನ, ರಕ್ತದಾನ ಹಾಗೂ ನೇತ್ರದಾನ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೇ ಅಪ್ಪು ನೆನಪಿನಲ್ಲಿ ಅಭಿಮಾನಿಗಳು ಈ ಬಾರಿ ಉದ್ಯೋಗ ಮೇಳ ಕೂಡ ಹಮ್ಮಿಕೊಂಡಿದ್ದು, ಈ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ಆರಾಧಿಸುತ್ತಿದ್ದಾರೆ.











Click it and Unblock the Notifications