ದ್ವಿತೀಯ ಪಿಯುಸಿ ಫಲಿತಾಂಶ; ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ
ಬೆಂಗಳೂರು, ಮೇ 01; ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮೌಲ್ಯ ಮಾಪನಗೊಂಡ ಉತ್ತರ ಪತ್ರಿಕೆಗಳ ಡೌನ್‌ಲೋಡ್ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ ನೀಡಲಾಗಿದೆ. ಈಗಾಗಲೇ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ.
ನಿರ್ದೇಶಕರು (ಪರೀಕ್ಷೆ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಮಾರ್ಚ್ 2023ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ದಿನಾಂಕ 27/4/2023ರ ವರೆಗೆ ಕಾಲವಕಾಶ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಹಂತ-ಹಂತವಾಗಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರಥಮ ಹಂತವಾಗಿ ದಿನಾಂಕ 29/4/2023ರಂದು ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಸ್ಕ್ಯಾನ್ ಪ್ರತಿ ಅಪ್‌ಲೋಡ್ ಆಗಿಲ್ಲದಿದ್ದಲ್ಲಿ, 2ನೇ ಹಂತದಲ್ಲಿ ಸ್ಕ್ಯಾನ್ ಪ್ರತಿ ಅಪ್‌ಲೋಡ್ ಮಾಡಿದಾಗ ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಫಲಿತಾಂಶ ಪ್ರಕಟ; ಏಪ್ರಿಲ್ 21ರಂದು 2023ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿತ್ತು. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮರುಮೌಲ್ಯಮಾಪನ ಫಲಿತಾಂಶಕ್ಕಾಗಿ ಕಾಯಬೇಕಾಗಿಲ್ಲ. ಯಾವುದೇ ಸಂದರ್ಭದಲ್ಲಿ, ಕರ್ನಾಟಕ ಪ್ರಿ-ಯೂನಿವರ್ಸಿಟಿ ಕೋರ್ಸ್ ಎಸ್ ಎಲ್ ಪಿ ಇ 1997, 29 (ಎ)' ಪ್ರಕಾರ ಈ ಹಿಂದೆ ಗಳಿಸಿದ ಅಂಕಗಳನ್ನು ಮರುಮೌಲ್ಯಮಾಪನದ ನಂತರ ಮರುಸ್ಥಾಪಿಸಲು ಸಾಧ್ಯವಿಲ್ಲ. ಮರುಮೌಲ್ಯಮಾಪಕರ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಮತ್ತು ಈ ಬಗ್ಗೆ ಯಾವುದೇ ಮೇಲ್ಮನವಿಗಳಿಗೆ ಅವಕಾಶವಿಲ್ಲ ಎಂದು ಹೇಳಿತ್ತು.

ಈ ಬಾರಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ 95.33 ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನ ಪಡೆದಿತ್ತು. ಉಡುಪಿ ಶೇ 95.24, ಕೊಡಗು ಶೇ 90.55, ಉತ್ತರ ಕನ್ನಡ ಶೇ 89.74 ಮತ್ತು ವಿಜಯಪುರ ಶೇ 84.69ರಷ್ಟು ಫಲಿತಾಂಶವನ್ನು ಪಡೆದು 5ನೇ ಸ್ಥಾನವನ್ನು ಪಡೆದಿತ್ತು.
2023ರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು 2023ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗುವುದಿದ್ದರೆ, ಮಂಡಲಿಯು ಒದಗಿಸಿದ ಫಲಿತಾಂಶದ ಪಟ್ಟಿ ಆಧಾರದ ಮೇಲೆ ಶುಲ್ಕವನ್ನು ಸಂಗ್ರಹಿಸಬೇಕು ಎಂದು ತಿಳಿಸಲಾಗಿದೆ. ಸೆಪ್ಟೆಂಬರ್-2022 ಪರೀಕ್ಷೆ ಅಥವಾ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ 2023ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಅರ್ಜಿಯನ್ನು 'MCA' ಆಧಾರದ ಮೇಲೆ ಮಾತ್ರ ಸ್ವೀಕರಿಸಬೇಕು ಎಂದು ತಿಳಿಸಲಾಗಿತ್ತು.
ಮಾರ್ಚ್-2023 ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಯು ತೇರ್ಗಡೆಯಾದ ವಿಷಯದಲ್ಲಿ ಫಲಿತಾಂಶಗಳನ್ನು ತಿರಸ್ಕರಿಸುವ ಅರ್ಜಿಯನ್ನು ಪ್ರಾಂಶುಪಾಲರು ಫಲಿತಾಂಶದ ಪಟ್ಟಿಯ ಆಧಾರದ ಮೇಲೆ ಮಾತ್ರ ಸ್ವೀಕರಿಸಬೇಕು ಮತ್ತು MCA ಅನ್ನು ಈ ವರ್ಷದಿಂದ ನೀಡಲಾಗುವುದಿಲ್ಲ ಎಂದು ಹೇಳಿತ್ತು.
ಡೌನ್‌ಲೋಡ್ ಮಾಡುವುದು ಹೇಗೆ?; ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳನ್ನು https://kseab.karnataka.gov.in/ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ವೆಬ್‌ಸೈಟ್‌ನಲ್ಲಿ ಮೊದಲು ಅನ್ಸರ್ ಶೀಟ್ ಸ್ಕ್ಯಾನ್ಡ್ ಕಾಪಿ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆಯ ನೋಂದಣಿ ಸಂಖ್ಯೆ ನಮೂದು ಮಾಡಬೇಕು. ಯಾವ ವಿಷಯಷ ಪ್ರತಿಬೇಕೋ ಆ ವಿಷಯದ ಮೇಲೆ ಕ್ಲಿಕ್ ಮಾಡಬೇಕು. ಆಗ ಸಿಗುವ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.












Click it and Unblock the Notifications